ಸೋನುಗೌಡ ಮೇಲೆ ಗ್ರಾಮಸ್ಥರಿಂದ ಕಲ್ಲು ತೂರಾಟ


(ಸಂಜೆವಾಣಿ ಪ್ರತಿನಿಧಿಯಿಂದ)
ರಾಯಚೂರು(ಮಸ್ಕಿ),ಮಾ.೨೪:ಮಗುವನ್ನು ಸಾಕುತ್ತೇವೆ ಎಂದು ಕರೆದುಕೊಂಡು ಹೋಗಿ ದತ್ತು ಪಡೆದಿದ್ದಾರೆಂದು ಹೇಳಿಕೆ ನೀಡಿರುವ ಸೋನುಗೌಡ ಅವರ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಮಸ್ಕಿ ವ್ಯಾಪ್ತಿಯ ಕಾಚಾಪುರ ಗ್ರಾಮದಲ್ಲಿ ನಡೆದಿದೆ.
ಮಗುವನ್ನು ದತ್ತು ಪಡೆದುಕೊಂಡಿರುವ ಸಂಬಂಧ ಸೋನುಗೌಡ ಅವರ ವಿರುದ್ಧ ದೂರು ದಾಖಲಿಸಿಕೊಂಡಿರುವ ಬೆಂಗಳೂರು ಬ್ಯಾಡರಹಳ್ಳಿ ಪೊಲೀಸರು ಸ್ಥಳ ಮಹಜರಿಗಾಗಿ ಸೋನುಗೌಡ ಅವರನ್ನು ರಾಯಚೂರಿನ ತಾಲ್ಲೂಕು ವ್ಯಾಪ್ತಿಯ ಗ್ರಾಮ ಕಾಚಾಪುರಕ್ಕೆ ಕರೆತಂದ ವೇಳೆ ಈ ಘಟನೆ ಸಂಭವಿಸಿದೆ.
ಸೋನುಗೌಡ ಅವರು ರಾಯಚೂರು ತಾಲ್ಲೂಕಿನ ಮಸ್ಕಿ ತಾಲ್ಲೂಕು ವ್ಯಾಪ್ತಿಯ ಕಾಚಾಪುರ ಗ್ರಾಮದ ನಿವಾಸಿಗಳು ಹಾಗೂ ಬೆಂಗಳೂರಿನಲ್ಲಿ ಕಟ್ಟಡ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದ ದಂಪತಿಗಳ ಬಳಿ ಮಗುವೊಂದನ್ನು ಪಡೆದುಕೊಂಡಿದ್ದಾಗಿ ತಿಳಿಸಿದ್ದರು.
ಆದರೆ, ಮಗುವನ್ನು ದತ್ತು ಪಡೆಯಲು ಪೂರೈಸಬೇಕಾದ ಕಾನೂನು ಕ್ರಮಗಳು ಪೂರ್ಣಗೊಂಡಿರಲಿಲ್ಲ ಹಾಗೂ ದತ್ತು ಪಡೆಯಲು ಇರುವ ಕೆಲು ಷರತ್ತುಗಳನ್ನು ಉಲ್ಲಂಘಿಸಿದ್ದರು ಎಂದು ಆರೋಪಿಸಿ ಅವರನ್ನು ಬೆಂಗಳೂರು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದರು.
ಮಗುವನ್ನು ದತ್ತು ಪಡೆದುಕೊಂಡ ಬಗ್ಗೆ ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸಲು ಸೋನುಗೌಡ ಅವರನ್ನು ಪೊಲೀಸರು ರಾಯಾಚೂರಿನ ಕಾಚಾಪುರ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದರು.
ಈ ವೇಳೆ ಕೆಲ ಗ್ರಾಮಸ್ಥರು ಸೋನುಗೌಡ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕಾರಿನ ಹಿಂದೆಯೇ ಸ್ವಲ್ಪ ದೂರು ಓಡಿ ಹೋಗಿ ಗ್ರಾಮಸ್ಥರು ಕಲ್ಲು ತೂರಾಟ ನಡೆಸಿದ್ದಾರೆ.
ಈ ನಡುವೆ ಸೋನುಗೌಡ ದತ್ತು ಪಡೆದುಕೊಂಡಿದ್ದಾರೆ ಎಂದು ಹೇಳಲಾದ ಮಗುವಿನ ಪೋಷಕರಿಗೆ ಮಕ್ಕಳ ಕ್ಷೇಮಾಭಿವೃದ್ಧಿ ಸಮಿತಿ ನೋಟಿಸ್ ಜಾರಿ ಮಾಡಿದ್ದು, ಮಗುವಿನ ದತ್ತು ವಿಚಾರ ಕುರಿತಂತೆ ಸಂಪೂರ್ಣ ವಿವರನೀಡುವಂತೆ ಸೂಚಿಸಿದೆ.
ಈ ನಡುವೆ ಕಾಚಾಪುರ ಗ್ರಾಮದಲ್ಲಿ ಮಗುವಿನ ಸಂಬಂಧಿ ಮಗುವನ್ನು ದತ್ತು ನೀಡಿಲ್ಲ. ಹಾಗೂ ಸೋನುಗೌಡರಿಂದ ಯಾವ ರೀತಿಯ ಆರ್ಥಿಕ ಸಹಾಯ ಪಡೆದಿಲ್ಲ. ಉತ್ತಮ ವಿದ್ಯಾಭ್ಯಾಸ ಕೊಡಿಸುವುದಾಗಿ ಹೇಳಿ ಮಗುವನ್ನು ದತ್ತು ಪಡೆದುಕೊಳ್ಳಲಾಗಿದೆ ಎಂದಿರುವ ಸೋನುಗೌಡ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.