ಸೋನಿ ಟಿ.ವಿ. ಇಂಡಿಯನ್ ಐಡಿಯಲ್ ಸ್ಪರ್ಧೆಗೆ ಶಿವಾನಿ ಸ್ವಾಮಿ ಆಯ್ಕೆ, ಸನ್ಮಾನ

ಬೀದರ್ ಸೆ. 25 ಃ ಈ ತಿಂಗಳ ಎರಡನೇ ವಾರದಲ್ಲಿ ಮುಂಬೈನಲ್ಲಿ ನಡೆದ ಸೋನಿ ಟಿ.ವಿ.ಯ ಇಂಡಿಯನ್ ಐಡಿಯಲ್ ಸಂಗೀತ ಸ್ಪರ್ಧೆಯಲ್ಲಿ ಟಿ.ವಿ. ರೌಂಡ್ಸ್‍ನಲ್ಲಿ ಆಯ್ಕೆಯಾಗುವ ಮೂಲಕ ಬೀದರ ಜಿಲ್ಲೆ ಸೇರಿದಂತೆ ರಾಜ್ಯಕ್ಕೆ ಕೀರ್ತಿ ತಂದಿರುವ ಸಂಗೀತ ಕಲಾವಿದರಾದ ಕುಮಾರಿ ಶಿವಾನಿ ಶಿವದಾಸ ಸ್ವಾಮಿ ಅವರನ್ನು ನಗರದ ಅವರ ನಿವಾಸದಲ್ಲಿ ಇಂದು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ವತಿಯಿಂದ ಶಾಲು ಹೊದಿಸಿ, ಹೂಮಾಲೆ ಹಾಕಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ, ಗೌರವಿಸಲಾಯಿತು.

ಕುಮಾರಿ ಶಿವಾನಿ ಶಿವದಾಸ ಸ್ವಾಮಿ ಅವರು ಇಂಡಿಯನ್ ಐಡಿಯಲ್‍ನ 13 ಸಾವಿರ ಸ್ಪರ್ಧಿಗಳಲ್ಲಿ 100ರ, 50ರ ಮತ್ತು 25ರ ಹಂತದ ಬಳಿಕ ಟಿ.ವಿ. ರೌಂಡ್ಸ್‍ನಲ್ಲಿ ಆಯ್ಕೆಯಾಗಿರುವ ಕರ್ನಾಟಕ ರಾಜ್ಯದ ಪ್ರಪ್ರಥಮ ಕಲಾವಿದೆಯಾಗಿದ್ದಾರೆ.

2020ರಲ್ಲಿ ನಡೆದ ಝೀ ಟಿ.ವಿ.ಯ ಸಾರೇಗಮಪ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ, ಕುಮಾರಿ ಶಿವಾನಿ ಶಿವದಾಸ ಸ್ವಾಮಿ ಅವರು ಬೆಳ್ಳಿ ಪದಕ ಗೆದ್ದಿದ್ದಾರೆ. ಅಲ್ಲದೇ ಹೈದ್ರಾಬಾದನಲ್ಲಿ ನಡೆದ ಪ್ರೈಡ್ ಆಫ್ ತೇಲಂಗಾಣ ಸ್ಪರ್ಧೆಯಲ್ಲಿಯೂ ಪ್ರಥಮ ಸ್ಥಾನ ಪಡೆದಿದ್ದಾರೆ. 2022ರಲ್ಲಿ ನಡೆದ ರಾಜ್ಯ ಮಟ್ಟದ ಕಾಲೇಜು ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಮಹಾರಾಷ್ಟ್ರ ಚಾ ಆವಾಜ್ ಸಂಗೀತ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಥಮ ಸ್ಥಾನ ಪಡೆದು, ಬೀದರ ಜಿಲ್ಲೆಯ ಕೀರ್ತಿ ಪತಾಕೆ ಹಾರಿಸಿದ್ದಾರೆ.

ಕುಮಾರಿ ಶಿವಾನಿ ಶಿವದಾಸ ಸ್ವಾಮಿ ಅವರ ಸಂಗೀತ ಸೇವೆಯನ್ನು ಗುರುತಿಸಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ವತಿಯಿಂದ ಕಳೆದ ವರ್ಷ ಬೀದರನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲ್ಯಾಣ ಕಲಾ ರತ್ನ ಪ್ರಶಸ್ತಿ ನೀಡಿ, ಗೌರವಿಸಲಾಗಿದೆ.

ಸಂಗೀತ ಕಲಾವಿರಾದ ಶ್ರೀಮತಿ ಕವಿತಾ ಸ್ವಾಮಿ ಹಾಗೂ ಪಂಡಿತ ಶಿವದಾಸ ಸ್ವಾಮಿ ಅವರ ಉದರಲ್ಲಿ 2006ರ ಡಿಸೆಂಬರ್ ತಿಂಗಳಲ್ಲಿ ಜನಿಸಿರುವ ಕುಮಾರಿ ಶಿವಾನಿ ಸ್ವಾಮಿ ಅವರು 3 ವರ್ಷದ ಚಿಕ್ಕ ವಯಸ್ಸಿನಿಂದಲೇ ಸಂಗೀತ ಅಭ್ಯಾಸವನ್ನು ತಮ್ಮ ತಂದೆಯವರಿಂದ ಕಲಿತು ಸಂಗೀತ ಕ್ಷೇತ್ರದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕುಮಾರಿ ಶಿವಾನಿ ಶಿವದಾಸ ಸ್ವಾಮಿ ಅವರು, ಕಳೆದ ಹಲವು ವರ್ಷಗಳಿಂದ ಸಂಗೀತ ಅಭ್ಯಾಸ ಮಾಡುತ್ತಿದ್ದು, ಪ್ರಪ್ರಥಮ ಬಾರಿಗೆ ಸೊನಿ ಟಿ.ವಿ.ಯ ಇಂಡಿಯನ್ ಐಡಿಯಲ್ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ, ಪ್ರಥಮ ಹಂತದಲ್ಲಿಯೇ ನಾನೂ ಟಿ.ವಿ. ರೌಂಡ್ಸ್‍ನಲ್ಲಿ ಆಯ್ಕೆಯಾಗಿದ್ದಕ್ಕೆ ನನ್ನಗೆ ಅತಿ ಆನಂದವಾಗಿದೆ. ನನ್ನ ತಾಯಿ ಹಾಗೂ ತಂದೆಯವರು ಸೇರಿದಂತೆ ನಮ್ಮ ಪರಿವಾರ ಸಂಗೀತ ರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ. ನನ್ನ ಅಜ್ಜಿಯಿಂದ ನನ್ನ ಅಮ್ಮನಿಗೆ, ಅಮ್ಮನಿಂದ ನನಗೆ ಸಂಗೀತ ಬಳವಳಿಯಾಗಿ ಬಂದಿದೆ ಎಂದು ಹೇಳಿದರರು.

ಕುಮಾರಿ ಶಿವಾನಿ ಶಿವದಾಸ ಸ್ವಾಮಿ ಅವರಿಗೆ ಸ್ಮನಾನಿಸಿದ ನಂತರ ಮಾತನಾಡಿದ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ವಿಜಯಕುಮಾರ ಸೋನಾರೆ ಅವರು, ಬೀದರ ಜಿಲ್ಲೆಯಲ್ಲಿ ಪ್ರತಿಭೆಗಳ ಕೊರತೆ ಇಲ್ಲ. ಆದರೂ ಪ್ರತಿಭೆಗಳನ್ನು ಗುರತಿಸಿ, ಪ್ರೋತ್ಸಾಹಿಸುವ ವೇದಿಕೆಗಳು ಇಲ್ಲದ ಕಾರಣ ಬೀದರ ಜಿಲ್ಲೆಯ ಅದೇಷ್ಟೋ ಕಲಾವಿದರು ಎಲೆಮರೆ ಕಾಯಿಯಂತೆ ಇದ್ದಾರೆ. ಶೈಕ್ಷಣಿಕ, ಸಾಮಾಜಿಕ, ಸಂಗೀತ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಎಲೆಮರೆ ಕಾಯಿಯಂತಿರುವ ಕಲಾವಿದರನ್ನು ಗುರುತಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕಾಗಿದೆ. ರಾಜ್ಯದಲ್ಲಿ ನಡೆಯುವ ಬೀದರ ಉತ್ಸವ, ಬಸವ ಉತ್ಸವ, ಹಂಪಿ ಉತ್ಸವ, ದಸರಾ ಉತ್ಸವ ಸೇರಿದಂತೆ ಇತ್ಯಾದಿ ರಾಜ್ಯ ಮಟ್ಟದ ಕಾರ್ಯಕ್ರಮಗಳಲ್ಲಿ ಹೊರ ರಾಜ್ಯದ ಕಲಾವಿದರಿಗಿಂತ ಸ್ಥಳೀಯ ಕಲಾವಿದರಿಗೆ ವೇದಿಕೆ ಕಲ್ಪಿಸಿದರೆ, ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಸುನೀಲ ಕಡ್ಡೆ ಅವರು ಮಾತನಾಡುತ್ತ, ಕುಮಾರಿ ಶಿವಾನಿ ಶಿವದಾಸ ಸ್ವಾಮಿ ಅವರು ಸೋನಿ ಟಿ.ವಿ.ಯ ಇಂಡಿಯನ್ ಐಡಿಯಲ್ ಸಂಗೀತ ಸ್ಪರ್ಧೆಯಲ್ಲಿ ಟಿ.ವಿ. ರೌಂಡ್ಸ್‍ನಲ್ಲಿ 13 ಸಾವಿರ ಸ್ಪರ್ಧಿಗಳಲ್ಲಿ ಆಯ್ಕೆಯಾಗಿ, ಬೀದರ ಜಿಲ್ಲೆಯ ಕೀರ್ತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವಂತೆ ಮಾಡಿದ್ದಕ್ಕೆ ಶಿವಾನಿ ಸ್ವಾಮಿ ಅವರ ಕುಟುಂಬಕ್ಕೆ ಹೃದಯಪೂರ್ವಕ ಅಭಿನಂದಿಸುವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯ ಯುವ ಪ್ರಶಸ್ತಿ ಪುರಸ್ಕøತ ಸುನೀಲ ಭಾವಿಕಟ್ಟಿ, ಶ್ರೀಮತಿ ಕವಿತಾ ಸ್ವಾಮಿ, ಶಿವದಾಸ ಸ್ವಾಮಿ ಪರಿವಾರದವರು ಹಾಗೂ ಒಕ್ಕೂಟದ ಪದಾಧಿಕಾರಿಗಳು ಇದ್ದರು.