ಸೋನಿಯಾ ವಿರುದ್ಧ ಬಿಜೆಪಿ ದೂರು

ಬೆಂಗಳೂರು,ಮೇ೮:ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಕೇಂದ್ರ ಸಚಿವೆ, ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಅಧ್ಯಕ್ಷೆ ಶೋಭಾಕರಂದ್ಲಾಜೆ ಅವರು ಇಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿಯವರನ್ನು ಭೇಟಿ ಮಾಡಿ ಸೋನಿಯಾಗಾಂಧಿ ಅವರ ವಿರುದ್ಧ ದೂರು ದಾಖಲಿಸಿದ್ದಾರೆ.
ಸೋನಿಯಾಗಾಂಧಿ ಅವರು ಕರ್ನಾಟಕದ ಪ್ರತಿಷ್ಠೆ, ಸಾರ್ವಭೌಮತೆ ಮತ್ತು ಐಕ್ಯತೆಗೆ ಧಕ್ಕೆ ತರಲು ಕಾಂಗ್ರೆಸ್ ಯಾರಿಗೂ ಅವಕಾಶ ನೀಡುವುದಿಲ್ಲ ಎಂಬ ಹೇಳಿಕೆ ನೀಡಿರುವುದರ ಬಗ್ಗೆ ಬಿಜೆಪಿ ದೂರು ದಾಖಲಿಸಿದೆ.
ಸಾರ್ವಭೌಮತ್ವ ಒಂದು ದೇಶಕ್ಕೆ ಸಂಬಂಧಿಸಿದ್ದಾಗಿದೆ. ಹಾಗಾಗಿ, ಸೋನಿಯಾಗಾಂಧಿ ಅವರು ಕರ್ನಾಟಕದ ಸಾರ್ವಭೌಮತ್ವ ಮತ್ತು ಐಕ್ಯತೆಯ ಪದ ಬಳಸಿರುವುದು ಸರಿಯಲ್ಲ. ಕನ್ನಡಿಗರ್‍ಯಾರೂ ಇದುವರೆಗೂ ಸಾರ್ವಭೌಮತ್ವದ ಬಗ್ಗೆಯಾಗಲಿ, ಐಕ್ಯತೆಯ ಬಗ್ಗೆಯಾಗಲಿ ಪ್ರಶ್ನಿಸಿಲ್ಲ. ಈ ಹೇಳಿಕೆ ಮೂಲಕ ಅವರು ಕರ್ನಾಟಕವನ್ನು ಭಾರತದಿಂದ ಪ್ರತ್ಯೇಕಗೊಳಿಸಿ ಭಾರತವನ್ನು ಒಡೆಯುವ ಹುನ್ನಾರ ನಡೆಸಿದಂತಿದೆ ಎಂದು ಅವರು ದೂರಿನಲ್ಲಿ ತಿಳಿಸಿ, ಈ ಹೇಳಿಕೆ ಕರ್ನಾಟಕ ಜನರ ಭಾವನೆಗಳಿಗೆ ಆಘಾತ ತಂದಿದೆ ಎಂದು ಹೇಳಿದ್ದಾರೆ.