ಸೋನಿಯಾ ವಿಚಾರಣೆ ಮುಂದೂಡಿದ ಇಡಿ

ನವದೆಹಲಿ,ಜೂ.೨೩- ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಮುಂದೂಡುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಮಾಡಿಕೊಂಡ ಮನವಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪುರಸ್ಕರಿಸಿದ್ದು,ವಿಚಾರಣೆ ಮುಂದೂಡಿದ್ದಾರೆ. ಇದರಿಂದಾಗಿ ಸೋನಿಯಾ ತಾತ್ಕಾಲಿಕವಾಗಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಶ್ವಾಸಕೋಶ ಸೋಂಕು ಮತ್ತು ಕೋವಿಡ್‌ನಿಂದ ತಾವು ಸಂಪೂರ್ಣ ಗುಣಮುಖರಾಗಬೇಕಾಗಿದ್ದು, ಅಲ್ಲಿಯವರೆಗೂ ವಿಚಾರಣೆ ಮುಂದೂಡುವಂತೆ ಸೋನಿಯಾ ಇಡಿ ಅಧಿಕಾರಿಗಳಿಗೆ ನಿನ್ನೆ ಪತ್ರ ಬರೆದಿದ್ದರು. ಸಂಪೂರ್ಣವಾಗಿ ವಿಶ್ರಾಂತಿ ಪಡೆಯುವಂತೆ ವೈದ್ಯರು ನಿರ್ದೇಶನ ನೀಡಿರುವುದನ್ನು ಅವರು ಪತ್ರದಲ್ಲಿ ಉಲ್ಲೇಖಿಸಿದ್ದರು.
ಈ ಮೊದಲು ಇಂದು ವಿಚಾರಣೆಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ಸೋನಿಯಾಗಾಂಧಿ ಅವರಿಗೆ ಸಮನ್ಸ್ ಜಾರಿ ಮಾಡಿದ್ದರು. ಕೋವಿಡ್ ಮತ್ತು ಶ್ವಾಸಕೋಶ ಸೋಂಕಿನಿಂದ ದೆಹಲಿಯ ಗಂಗಾರಾಂ ಆಸ್ಪತ್ರೆಗೆ ಸೋನಿಯಾ ದಾಖಲಾಗಿದ್ದರು. ಅವರು ಗುಣಮುಖರಾದ ಬಳಿಕ ಸೋಮವಾರ ಅವರನ್ನು ಆಸ್ಪತ್ರೆಯಿಂದ ವೈದ್ಯರು ಮನೆಗೆ ಕಳುಹಿಸಿದ್ದರು.
೭೫ ವರ್ಷದ ಸೋನಿಯಾಗಾಂಧಿ ಅವರಿಗೆ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ನಡೆದಿರುವ ಅಕ್ರಮ ಹಣ ವರ್ಗಾವಣೆ ಕುರಿತು ವಿಚಾರಣೆಗೆ ಹಾಜರಾಗುವಂತೆ ಸೋನಿಯಾಗಾಂಧಿ ಅವರಿಗೆ ಜೂ. ೮ ರಂದು ಮೊದಲ ಬಾರಿಗೆ ಸಮನ್ಸ್ ಜಾರಿಗೊಳಿಸಲಾಗಿತ್ತು, ಆದರೆ, ಸೋನಿಯಾಗಾಂಧಿ ಅವರು ವಿಚಾರಣೆಗೆ ಹಾಜರಾಗಲು ಕಾಲಾವಕಾಶ ನೀಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಇಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದರು.
ಈಗಾಗಲೇ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಅವರನ್ನು ಇಡಿ ಅಧಿಕಾರಿಗಳು ಸತತ ೫ ಬಾರಿ ವಿಚಾರಣೆಗೆ ಗುರಿಪಡಿಸಿ ಪ್ರಶ್ನೆಗಳ ಸುರಿಮಳೆಗೈದು ರಾಹುಲ್ ಅವರ ಹೇಳಿಕೆಯನ್ನು ದಾಖಲು ಮಾಡಿಕೊಂಡಿದ್ದರು.
ಕೇಂದ್ರ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ನಡೆಸಿ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದೆ.