ಸೋನಿಯಾ ವಿಚಾರಣೆ ಖಂಡಿಸಿ ಕೈ ನಿಂದ ಮೌನಸತ್ಯಾಗ್ರಹ

ಬೆಂಗಳೂರು, ಜು.೨೪- ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಜಾರಿನಿರ್ದೇಶನಾಲಯ ಜು. ೨೬ ರಂದು ಮತ್ತೆ ವಿಚಾರಣೆಗೆ ಕರೆದಿರುವುದನ್ನು ಖಂಡಿಸಿ ಕಾಂಗ್ರೆಸ್ ಪಕ್ಷ ಮೌನಸತ್ಯಾಗ್ರಹ ನಡೆಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಇಡಿ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದೆ. ಸೋನಿಯಾಗಾಂಧಿ ಅವರಿಗೆ ಮತ್ತೆ ನೋಟಿಸ್ ನೀಡುವುದನ್ನು ವಿರೋಧಿಸಿ ಜು. ೨೬ ರಂದು ರೇಸ್‌ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದ ಗಾಂಧಿ ಪ್ರತಿಮೆ ಬಳಿ ಸೋನಿಯಾಗಾಂಧಿ ಅವರ ವಿಚಾರಣೆ ಮುಗಿಯುವವರೆಗೂ ಎಲ್ಲ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಮೌನ ಸತ್ಯಾಗ್ರಹ ನಡೆಸುವುದಾಗಿ ಹೇಳಿದರು.
ಈ ಹಿಂದೆ ನನ್ನ ತಾಯಿಗೂ ಇಡಿ ಅವರು ಇದೇ ರೀತಿ ನೋಟಿಸ್ ಕೊಟ್ಟು ವಿಚಾರಣೆಗೆ ಕರೆದಿದ್ದರು. ಆಗ ಕೋರ್ಟ್ ಮೊರೆ ಹೋದ ನಂತರ ಮನೆಯಲ್ಲೂ ವಿಚಾರಣೆ ಮಾಡಿದರು. ಅಲ್ಲಿ ಸೋನಿಯಾಗಾಂಧಿ ಅವರು ಕೋರ್ಟ್‌ಗೆ ಹೋಗಿಲ್ಲ. ವಿಚಾರಣೆಗೆ ಹಾಜರಾಗಿದ್ದಾರೆ. ಹೀಗಿದ್ದರೂ ಮತ್ತೆ ನೋಟಿಸ್ ಕೊಟ್ಟು ವಿಚಾರಣೆಗೆ ಬರುವಂತೆ ಹೇಳಿರುವುದು ದ್ವೇಷದ ರಾಜಕಾರಣ ಎಂದರು.
ಕಾಂಗ್ರೆಸ್ ಪಕ್ಷದ ಜಗಳ ಬೀದಿಗೆ ಬಂದಿದೆ ಎಂಬ ಸಚಿವ ಅಶೋಕ್ ಅವರ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಅವರನ್ನು ಅಭಿನಂದಿಸುತ್ತೇನೆ ಏಕೆಂದರೆ ಕಾಂಗ್ರೆಸ್ ಪಕ್ಷಕ್ಕೆ ಜನ ಅಧಿಕಾರ ಕೊಡುತ್ತಿದ್ದಾರೆ ಎಂಬುದನ್ನು ಒಪ್ಪಿಕೊಂಡರಲ್ಲ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್‌ನವರು ಬಿಜೆಪಿ ಶಿಸ್ತು ನೋಡಿ ಕಲಿಯಬೇಕು ಎಂಬ ಸಚಿವ ಸುಧಾಕರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಬಿಜೆಪಿ ಒಂದು ಪಕ್ಷನಾ ಅಷ್ಟೊಂದು ಭ್ರಷ್ಟಾಚಾರ ಇದೆ. ಎಷ್ಟೊಂದು ಕೊಳಕು ಇದೆ. ಈಗ ಬಿಜೆಪಿ ಹೆಸರು ಹೇಳುತ್ತಿದ್ದಾರಲ್ಲ ಸಚಿವ ಸುಧಾಕರ್ ಅವರನ್ನು ಆ ಪಕ್ಷದ ಕಾರ್ಯಕರ್ತರು ಒಪ್ಪಿಕೊಂಡಿದ್ದಾರಾ ಅದನ್ನು ಮೊದಲು ಹೇಳಲಿ ಎಂದರು.
ಮಾಜಿ ಸಚಿವ ಚೆಲುವರಾಯಸ್ವಾಮಿ ತಮ್ಮನ್ನು ಭೇಟಿಯಾಗಿದ್ದರಲ್ಲಿ ವಿಶೇಷ ಇಲ್ಲ. ಜಮೀರ್ ಅಹ್ಮದ್‌ಖಾನ್‌ಬಗ್ಗೆ ಚರ್ಚೆ ನಡೆಸಿಲ್ಲ. ಭಾರತ್ ಜೋಡೋ ಯಾತ್ರೆ ಶ್ರಿರಂಗಪಟ್ಟಣ, ನಾಗಮಂಗಲ, ಮೇಲುಕೋಟೆ ಮೂಲಕ ಹಾದು ಹೋಗುತ್ತದೆ. ಈ ಯಾತ್ರೆ ಸಿದ್ಧತೆ ಬಗ್ಗೆ ಚರ್ಚೆ ನಡೆಸಿದ್ದಾಗಿ ಅವರು ಹೇಳಿದರು.