ಸೋನಿಯಾ ವಿಚಾರಣೆ ಅಂತ್ಯ: ಮುನ್ನೆಚ್ಚರಿಕೆಯಾಗಿ ಇಬ್ಬರು ವೈದ್ಯರು, ಅಂಬ್ಯುಲೆನ್ಸ್ ಸಜ್ಜುಗೊಳಿಸಿದ್ದ ಇಡಿ

ನವದೆಹಲಿ,ಜು.21- ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ‌ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ವಿಚಾರಣೆಗೆ ಹಾಜರಾಗಿದ್ದ ವೇಳೆ ಮುನ್ನೆಚ್ಚರಿಕೆ ಕ್ರಮವಾಗಿ ಇಬ್ಬರು ವೈದ್ಯರು ಹಾಗು ಅಂಬುಲೆನ್ಸ್ ಸಿದ್ದ ಪಡಿಸಿಕೊಳ್ಳಲಾಗಿತ್ತು ಎಂದು ಇಡಿ ಮೂಲಗಳು ತಿಳಿಸಿವೆ

ಸೋನಿಯಾ ಗಾಂಧಿ ಅವರು ವಿಚಾರಣೆಗೆ ಹಾಜರಾಗಿದ್ದ 2 ಗಂಟೆ 20 ನಿಮಿಷದ ಅವಧಿಯಲ್ಲಿ ವೈದ್ಯರು ಮತ್ತು ಅಂಬುಲೆನ್ಸ್ ಸಜ್ಜುಗೊಂಡಿತ್ತು ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ವಿಚಾರಣೆಯ ಸಮಯದಲ್ಲಿ ಪುತ್ರಿ ಹಾಗು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯದ ಕಛೇರಿ ಒಳಗೆ ಪ್ರವೇಶಿಸಲು ಅನುಮತಿ ನೀಡಲಾಗಿತ್ತು ಎಂದು ಹೇಳಿದ್ದಾರೆ.

ಜೊತೆಗೆ ವಿಚಾರಣೆಯ ಸಮಯದಲ್ಲಿ ಸೋನಿಯಾ ಗಾಂಧಿ ಅವರ ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು ಪ್ರಿಯಾಂಕ ಗಾಂಧಿ ಅವರಿಗೆ ಎರಡು ಬಾರಿ ಒಳಗೆ ಪ್ರವೇಶ ಮಾಡಿಕೊಡಲಾಗಿತ್ತು ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ

24 ಪ್ರಶ್ನೆ ಕೇಳಿದ ಇಡಿ:

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು 24 ಪ್ರಶ್ನೆ ಕೇಳಿದ್ದಾರೆ ಎಂದು ಇಡಿ ಮೂಲಗಳು ತಿಳಿಸಿವೆ

ಪ್ರಶ್ನೆ ಮುಗಿದ ಬಳಿಕ ಔ಼ಷಧಿ ಸೇರಿದಂತೆ ಅನಾರೋಗ್ಯ ಹಿನ್ನೆಲೆಯಲ್ಲಿ ಮನೆಗೆ ತೆರಳಲು ಅವಕಾಶ ಮಾಡಿಕೊಟ್ಟಿದ್ದಾರೆ.

ಸೋಮವಾರ ಮತ್ತೆ ವಿಚಾರಣೆ:

ಸೋನಿಯಾ ಗಾಂಧಿ ಅವರ ಆರೋಗ್ಯದ ದೃಷ್ಟಿಯಿಂದ ಇಂದಿನ ವಿಚಾರಣೆ ಅಂತ್ಯಗೊಳಿಸಿದ್ದು ಸೋಮವಾರ ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೂಚಿಸಿದ್ದಾರೆ.