ಸೋನಿಯಾಗೆ ಇಡಿ ಪ್ರಶ್ನೆಗಳ ಸುರಿಮಳೆ

ನವದೆಹಲಿ,ಜು.೨೧- ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನ್ಯಾಷನಲ್‌ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಇಂದು ಜಾರಿನಿರ್ದೇಶನಾಲಯದ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು.
ಮಹಿಳಾ ಅಧಿಕಾರಿಗಳ ತಂಡ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಸೋನಿಯಾ ಅವರನ್ನು ಮಧ್ಯಾಹ್ನದವರೆಗೂ ವಿಚಾರಣೆ ನಡೆಸಿದ್ದಾರೆ. ಪ್ರಕರಣ ಕುರಿತಂತೆ ಅಧಿಕಾರಿಗಳು ಕೇಳಿದ ಸರಣಿ ಪ್ರಶ್ನೆಗಳಿಗೆ ಸೋನಿಯಾಗಾಂಧಿ ಅವರು ಉತ್ತರ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಡಿ ಅಧಿಕಾರಿಗಳ ಮುಂದೆ ಸೋನಿಯಾ ಅವರು ವಿಚಾರಣೆಗೆ ಹಾಜರಾಗುವ ಮುನ್ನ ಪುತ್ರ ರಾಹುಲ್‌ಗಾಂಧಿ ಹಾಗೂ ಪುತ್ರಿ ಪ್ರಿಯಾಂಕಗಾಂಧಿ ವಾಧ್ರಾ ಅವರೊಂದಿಗೆ ಚರ್ಚೆ ನಡೆಸಿದರು.
ಮೂಲಗಳ ಪ್ರಕಾರ ಸೋನಿಯಾ ಅವರನ್ನು ಮೂರು ಹಂತಗಳಲ್ಲಿ ವಿಚಾರಣೆ ನಡೆಸಲು ಇಡಿ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಸೋನಿಯಾ ಅವರನ್ನು ವಿಚಾರಣೆ ನಡೆಸಲು ಐವರು ಮಹಿಳಾ ಅಧಿಕಾರಿಗಳ ತಂಡ ನಿಯೋಜಿಸಲಾಗಿದೆ.
ವಿಚಾರಣೆ ವೇಳೆ ಸೋನಿಯಾಗಾಂಧಿ ಅವರನ್ನು ವಿಚಾರಣೆ ನಡೆಸುವ ಕೊಠಡಿಯ ಪಕ್ಕದ ಕೊಠಡಿಯಲ್ಲಿರಲು ಪ್ರಿಯಾಂಕಗಾಂಧಿ ಅವರಿಗೆ ಇಡಿ ಅಧಿಕಾರಿಗಳು ಅವಕಾಶ ಕಲ್ಪಿಸಿದ್ದಾರೆ. ಏಕೆಂದರೆ ತಮ್ಮ ತಾಯಿಯವರು ಅನಾರೋಗ್ಯದಿಂದ ಸಂಪೂರ್ಣವಾಗಿ ಗುಣಮುಖರಾಗಿಲ್ಲ. ಅವರಿಗೆ ಔಷಧೋಪಚಾರ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸೋನಿಯಾ ಅವರ ಜತೆ ಇರಲು ಅವಕಾಶ ನೀಡಬೇಕು ಎಂದು ಇಡಿ ಅಧಿಕಾರಿಗಳಿಗೆ ಮನವಿ ಮಾಡಿದರು. ಸೋನಿಯಾಗಾಂಧಿ ಅವರ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇಡಿ ಅಧಿಕಾರಿಗಳು ಪ್ರಿಯಾಂಕ ಅವರಿಗೆ ಪ್ರತ್ಯೇಕ ಕೊಠಡಿಯಲ್ಲಿರುವ ಒಪ್ಪಿಗೆ ಸೂಚಿಸಿದ್ದಾರೆ.
ಇದೇ ವೇಳೆ ಸೋನಿಯಾ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆಗೆ ಗುರಿಪಡಿಸುವುದನ್ನು ಖಂಡಿಸಿ ದೇಶಾದ್ಯಂತ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಭಾರಿ ಪ್ರತಿಭಟನೆ ನಡೆಸಿ ತನಿಖಾ ಸಂಸ್ಥೆಗಳನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋನಿಯಾ ಅವರ ವಿರುದ್ಧ ಕೇಂದ್ರಸರ್ಕಾರ ಷಡ್ಯಂತ್ರ ರೂಪಿಸಿದೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಭಾರಿ ಪ್ರತಿಭಟನೆ ನಡೆಸಿ ಕೇಂದ್ರದ ವಿರುದ್ಧ ಘೋಷಣೆ ಕೂಗಿದರು.
ರಾಜಧಾನಿ ದೆಹಲಿಯಲ್ಲಿ ರಾಹುಲ್‌ಗಾಂಧಿ ಅವರನ್ನು ವಿಚಾರಣೆಗೆ ಒಳಪಡಿಸಿದ ವೇಳೆ ಕಾರ್ಯಕರ್ತರು ನಡೆಸಿದ್ದ ಪ್ರತಿಭಟನೆಯ ಮಾದರಿಯಲ್ಲೇ ಇಂದೂ ಕೂಡ ಕಾಂಗ್ರೆಸ್ ಕಾರ್ಯಕರ್ತರು ಹೈಡ್ರಾಮಾ ನಡೆಸಿ ಕೇಂದ್ರದ ವಿರುದ್ಧ ಸಿಡಿದೆದ್ದಿದ್ದಾರೆ.
ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಭಾರಿ ವಾಗ್ವಾದ ನಡೆಯಿತು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು.
ನ್ಯಾಷನಲ್‌ಹೆರಾಲ್ಡ್ ಪ್ರಕರಣದಲ್ಲಿ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೋನಿಯಾಗಾಂಧಿ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕಿ ವಿಚಾರಣೆಗೆ ಹಾಜರಾಗಿದ್ದಾರೆ.
ಈ ಹಿಂದೆ ವಿಚಾರಣೆಗೆ ಹಾಜರಾಗುವಂತೆ ಸೋನಿಯಾ ಅವರಿಗೆ ಇಡಿ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದರು. ಆದರೆ, ಕೊರೊನಾ iತ್ತು ಶ್ವಾಸಕೋಶ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿ ಅವರು ಗುಣಮುಖರಾದ ನಂತರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಆದರೆ, ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಹಾಗಾಗಿ ವಿಚಾರಣೆಗೆ ಹಾಜರಾಗಲು ಮತ್ತಷ್ಟು ಕಾಲಾವಕಾಶ ನೀಡಬೇಕು ಎಂದು ಇಡಿ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಈ ಪತ್ರವನ್ನು ಪರಿಗಣಿಸಿದ ಇಡಿ ಅಧಿಕಾರಿಗಳು ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.
ಈ ಹಿಂದೆ ರಾಹುಲ್‌ಗಾಂಧಿ ಅವರನ್ನು ನ್ಯಾಷನಲ್‌ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ೫೫ ತಾಸುಗಳ ಕಾಲ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದರು. ರಾಜ್ಯಸಭೆಯಲ್ಲಿನ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಇಡಿ ವಿಚಾರಣೆ ನಡೆಸಿತ್ತು
ಏನಿದು ಪ್ರಕರಣ?
ದೇಶದ ಮೊದಲ ಪ್ರಧಾನಿ ಜವಹರಲಾಲ್ ಅವರು ೧೯೩೮ರಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಸ್ಥಾಪಿಸಿದ್ದರು. ಈ ಪತ್ರಿಕೆಯನ್ನು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಪ್ರಕಟಿಸಿತ್ತು. ೧೯೩೭ರಲ್ಲಿ ೫ ಸಾವಿರ ಇತರ ಸ್ವಾತಂತ್ರ್ಯ ಹೋರಾಟಗಾರರನ್ನು ಶೇರುದಾರರನ್ನಾಗಿ ಸ್ಥಾಪಿಸಿತ್ತು.
೨೦೧೦ರಲ್ಲಿ ಅಸೋಸಿಯೇಟೆಡ್ ಜರ್ನಲ್ಸ್ ೧೦೫೭ ಶೇರುದಾರರನ್ನು ಹೊಂದಿತ್ತು. ಇದು ತೀವ್ರ ನಷ್ಟ ಅನುಭವಿಸಿತ್ತು. ೨೦೧೧ರಲ್ಲಿ ಅದರ ಇಡುವಳಿಗಳನ್ನು ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್‌ಗೆ ವರ್ಗಾಯಿಸಲಾಯಿತು.
ಸೋನಿಯಾಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಇದರ ಮಂಡಳಿಯಲ್ಲಿದ್ದರು.
ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ನ್ನು ಯಂಗ್ ಇಂಡಿಯಾ ಸ್ವಾಧೀನಪಡಿಸಿಕೊಂಡಾಗ ರಾಹುಲ್‌ಗಾಂಧಿ ಮತ್ತು ಅವರ ತಾಯಿ ಸೋನಿಯಾಗಾಂಧಿ ವಂಚನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು.
೨೦೧೨ರಲ್ಲಿ ಬಿಜೆಪಿ ನಾಯಕ ಸುಬ್ರಮಣ್ಯನ್‌ಸ್ವಾಮಿ ಅವರು ನ್ಯಾಷನಲ್‌ಹೆರಾಲ್ಡ್ ಪತ್ರಿಕೆಯನ್ನು ಸ್ವಾಧೀನಪಡಿಸಿಕೊಳ್ಳುವ ಸಲುವಾಗಿ ಗಾಂಧಿ ಕುಟುಂಬದವರು ವಂಚನೆ ಮತ್ತು ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಕೋರ್ಟ್ ಮೊರೆ ಹೋಗಿದ್ದರು.