ಸೋನಿಯಾಗಾಂಧಿ ಇಡಿ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ: ಹಲವರ ಬಂಧನ

ಕಲಬುರಗಿ,ಜು.22: ಎಐಸಿಸಿಐ ಅಧ್ಯಕ್ಷೆ ಶ್ರೀಮತಿ ಸೋನಿಯಾಗಾಂಧಿ ಅವರ ಇಡಿ ವಿಚಾರಣೆಯನ್ನು ಖಂಡಿಸಿ ಕಾಂಗ್ರೆಸ್ ಪಕ್ಷವು ಶುಕ್ರವಾರ ನಗರದಲ್ಲಿ ಹಮ್ಮಿಕೊಂಡ ಪ್ರತಿಭಟನಾ ಮೆರವಣಿಗೆಯ ಕಾಲಕ್ಕೆ ಪೋಲಿಸರು ತಡೆದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ರಾಜ್ಯ ವಿಧಾನಸಭೆಯಲ್ಲಿನ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯಸಿಂಗ್, ಉತ್ತರ ಕ್ಷೇತ್ರದ ಶಾಸಕಿ ಶ್ರೀಮತಿ ಕನೀಜ್ ಫಾತಿಮಾ, ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ್, ಪಕ್ಷದ ಜಿಲ್ಲಾಧ್ಯಕ್ಷ ಜಗದೇವ್ ಗುತ್ತೇದಾರ್ ಅವರೂ ಸೇರಿದಂತೆ ಹಲವರನ್ನು ಬಂಧಿಸಿದರು.
ನಗರದ ಜಗತ್ ವೃತ್ತದಲ್ಲಿ ಪ್ರತಿಭಟನೆ ಮಾಡಿದ ಬಳಿಕ ಜಿಲ್ಲಾಧಿಕಾರಿಗಳ ಕಚೇರಿಗೆ ಮೆರವಣಿಗೆ ಹೊರಟ ವೇಳೆ ತಡೆದ ಪೋಲಿಸರು ಕಾಂಗ್ರೆಸ್ ಮುಖಂಡರೂ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿದರು. ಪ್ರತಿಭಟನೆಕಾರರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಭಿತ್ತಿಪತ್ರಗಳನ್ನು ಹಿಡಿದು ಧಿಕ್ಕಾರದ ಘೋಷಣೆಗಳನ್ನು ಹಾಕಿದರು.
ಇದಕ್ಕೂ ಮುನ್ನ ಜಗತ್ ವೃತ್ತದಲ್ಲಿ ಕೆಪಿಸಿಸಿಐ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರು ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿ, ಎಐಸಿಸಿಐ ಅಧ್ಯಕ್ಷೆ ಶ್ರೀಮತಿ ಸೋನಿಯಾಗಾಂಧಿ ಹಾಗೂ ರಾಹುಲ್‍ಗಾಂಧಿ ಅವರ ವಿರುದ್ಧ ಹಾಕಲಾದ ಇಡಿ ಪ್ರಕರಣಗಳು ಸುಳ್ಳು. ಬಿಜೆಪಿ ದುರಾಡಳಿತವನ್ನು ಮುಚ್ಚಿ ಹಾಕಲು ಇಡಿ ತನಿಖಾ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಸ್ವಾತಂತ್ರ್ಯ ಪೂರ್ವ ಇತಿಹಾಸವಿದೆ. ಕಾಂಗ್ರೆಸ್ ಪಕ್ಷವು ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದೆ ಎಂದು ಹೇಳಿದ ಅವರು, ಶ್ರೀಮತಿ ಸೋನಿಯಾಗಾಂಧಿ ಅಧಿಕಾರ ಬಯಸಿದ್ದರೆ ಅವರೇ ದೇಶದ ಪ್ರಧಾನಿಯಾಗುತ್ತಿದ್ದರು. ಅಲ್ಲದೇ ತಮ್ಮ ಪುತ್ರ ರಾಹುಲ್‍ಗಾಂಧಿ ಅವರನ್ನೂ ಸಹ ಪ್ರಧಾನಿಯನ್ನಾಗಿ ಮಾಡುತ್ತಿದ್ದರು. ಆದಾಗ್ಯೂ, ತ್ಯಾಗ ಮಾಡಿ ಡಾ. ಮನಮೋಹನಸಿಂಗ್ ಅವರಿಗೆ ಪ್ರಧಾನಿಯನ್ನಾಗಿ ಮಾಡಿದರು ಎಂದು ತಿಳಿಸಿದರು.
ಕೇಂದ್ರದಲ್ಲಿನ ಬಿಜೆಪಿ ಸರ್ಕಾರವು ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ಕೋವಿಡ್ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಲಿಲ್ಲ. ಆದಾಗ್ಯೂ, ಕೋವಿಡ್‍ನಿಂದ ಐದು ಲಕ್ಷ ಜನರು ಸಾವಿಗೀಡಾದರು ಎಂದು ಸುಳ್ಳು ವರದಿಯನ್ನು ನೀಡಿದೆ. ಸುಮಾರು 50 ಲಕ್ಷ ಜನರು ಕೋವಿಡ್ ಮಹಾಮಾರಿಗೆ ಬಲಿಯಾಗಿದ್ದಾರೆ. ಲಾಕ್‍ಡೌನ್ ಹೇರುವ ಮೂಲಕ ನಿರುದ್ಯೋಗ ಸಮಸ್ಯೆ, ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಈಗಲೂ ಸಹ ಚೇತರಿಸಿಕೊಳ್ಳುತ್ತಿಲ್ಲ. ಆದಾಗ್ಯೂ, ಅಗತ್ಯ ವಸ್ತುಗಳ ಬೆಲೆಯನ್ನು ನಿರಂತರವಾಗಿ ಹೆಚ್ಚಿಸುತ್ತಲೇ ಇದೆ. ಇಂತಹ ಜನವಿರೋಧಿ ನೀತಿಗಳನ್ನು ಮರೆಮಾಚಲು ಕಾಂಗ್ರೆಸ್ ನಾಯಕರ ಮೇಲೆ ಇಡಿ ತನಿಖೆ ಮಾಡಲಾಗುತ್ತಿದೆ ಎಂದು ಅವರು ಕಿಡಿಕಾರಿದರು.
ಕಾಲಚಕ್ರ ಬದಲಾಗುತ್ತದೆ. ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಮತ್ತೆ ಅಧಿಕಾರಕ್ಕೆ ಬರುತ್ತದೆ. ಇದು ಬಿಜೆಪಿಯವರಿಗೆ ಗೊತ್ತಾಗಿಯೇ ಅಧಿಕಾರಕ್ಕೆ ಬರದಂತೆ ತಡೆಯಲು ಕಾಂಗ್ರೆಸ್ ನಾಯಕರ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅವರು ಹೇಳಿದರು.
ಈಗಾಗಲೇ ಇಡಿ ತನಿಖೆಯ ವಿರುದ್ಧ ದೇಶಾದ್ಯಂತ ನಿನ್ನೆಯೇ ಪ್ರತಿಭಟನೆ ಮಾಡಲಾಗಿದೆ. ಬೆಂಗಳೂರಿನಲ್ಲಿಯೂ ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡು ಈಗ ಇಲ್ಲಿಗೆ ಬಂದಿದ್ದೇನೆ. ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ಆರಂಭಿಸಿದ್ದೇವೆ. ತನಿಖಾ ಸಂಸ್ಥೆ ದುರ್ಬಳಕೆಯ ವಿರುದ್ಧ ನಿರಂತರ ಹೊರಾಟ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.
ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ್ ಅವರೂ ಸಹ ಮಾತನಾಡಿ, ಬಿಜೆಪಿ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಪ್ರತಿಭಟನೆಯಲ್ಲಿ ರಾಜ್ಯ ವಿಧಾನಸಭೆಯಲ್ಲಿನ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯಸಿಂಗ್, ಶಾಸಕರಾದ ಎಂ.ವೈ. ಪಾಟೀಲ್, ಶ್ರೀಮತಿ ಕನೀಜ್ ಫಾತಿಮಾ, ಮುಖಂಡರಾದ ಕೃಷ್ಣಾಜಿ ಕುಲಕರ್ಣಿ, ಮಜರ್ ಅಲಂಖಾನ್, ಸೈಯದ್ ಮಜಹರ್ ಹುಸೇನ್, ದಿಲೀಪ್ ಆರ್. ಪಾಟೀಲ್, ಬಾಬುರಾವ್ ಜಹಾಗಿರದಾರ್, ಲಿಂಗರಾಜ್ ಕಣ್ಣಿ, ಈರಣ್ಣ ಝಳಕಿ, ಆಲಿಯಾ ಸಿರಿನ್, ಚಂದ್ರಿಕಾ ಪರಮೇಶ್ವರ್, ಲತಾ ರವಿ ರಾಠೋಡ್, ಪಕ್ಷದ ಜಿಲ್ಲಾಧ್ಯಕ್ಷ ಜಗದೇವ್ ಗುತ್ತೇದಾರ್ ಕಾಳಗಿ, ಸುಭಾಷ್ ರಾಠೋಡ್, ಸಜ್ಜಾದ್ ಮನಿಯಾರ್, ಶಿವಾನಂದ್ ಹೊನಗುಂಟಿ, ಡಾ. ಕಿರಣ್ ದೇಶಮುಖ್ ಮುಂತಾದವರು ಪಾಲ್ಗೊಂಡಿದ್ದರು.