ಸೋನಿಯಾಗಾಂಧಿಗೆ ಸಮನ್ಸ್ ಜಾರಿ ಖಂಡಿಸಿ ನಾಳೆ ಕಾಂಗ್ರೆಸ್ ಪ್ರತಿಭಟನೆ

ತುಮಕೂರು, ಜು. ೨೦- ಸಂಸತ್ ಅಧಿವೇಶನ ನಡೆಯುತ್ತಿದ್ದರೂ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಅವರಿಗೆ ಸಮನ್ಸ್ ಜಾರಿ ಮಾಡಿ ವಿಚಾರಣೆಗೆ ಕರೆದಿರುವುದನ್ನು ವಿರೋಧಿಸಿ ಹಾಗೂ ಇಡಿ ದುರುಪಯೋಗವನ್ನು ಖಂಡಿಸಿ ಜು. ೨೧ ರಂದು ಕಾಂಗ್ರೆಸ್ ಪಕ್ಷದ ವತಿಯಿಂದ ದೇಶದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ರಮೇಶ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿಯ ನಿರ್ಧಾರದಂತೆ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಇದೇ ಪ್ರಕರಣದಲ್ಲಿ ರಾಹುಲ್‌ಗಾಂಧಿ ಅವರನ್ನು ಸತತ ೫೫ ಗಂಟೆಗಳ ಕಾಲ ಇಡಿ ವಿಚಾರಣೆ ನಡೆಸಿದ್ದಾರೆ. ಅಲ್ಲದೆ ಈಗ ಅದರಲ್ಲಿ ಸಂಸತ್ ಅಧಿವೇಶನ ನಡೆಯುವ ವೇಳೆ ಸೋನಿಯಾಗಾಂಧಿ ಅವರನ್ನು ವಿಚಾರಣೆ ಹಾಜರಾಗುವಂತೆ ನೋಟಿಸ್ ನೀಡುವ ಮೂಲಕ ವಿರೋಧ ಪಕ್ಷಗಳ ನೈತಿಕತೆಯನ್ನು ಕುಗ್ಗಿಸುವ ಕೆಲಸವನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಾಡುತ್ತಿದೆ. ಇದನ್ನು ವಿರೋಧಿಸಿ ಜು. ೨೧ ರಂದು ಬೆಂಗಳೂರಿನ ಪ್ರೀಡಂ ಪಾರ್ಕ್‌ನಿಂದ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
ಹಾಗೆಯೇ ಜು. ೨೨ ರಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಬೆಲೆ ಹೆಚ್ಚಳ ವಿರೋಧಿಸಿ ಕಾಂಗ್ರೆಸ್ ಪಕ್ಷ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಅವರು ತಿಳಿಸಿದರು.
ಜು. ೨೧ ರಂದು ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲ ಜಿಲ್ಲೆಯ ಎಲ್ಲಾ ಮುಖಂಡರು, ಗ್ರಾಮ ಪಂಚಾಯ್ತಿಯಿಂದ, ಜಿಲ್ಲಾ ಪಂಚಾಯಿತಿವರೆಗಿನ ಸದಸ್ಯರುಗಳು, ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಈ ಮೂಲಕ ಇಡಿ ದುರುಪಯೋಗದ ವಿರುದ್ದ ಕಾಂಗ್ರೆಸ್ ತನ್ನ ಆಕ್ರೋಶ ವ್ಯಕ್ತಪಡಿಸಲಿದೆ ಎಂದರು.
ಎಐಸಿಸಿಯ ನಿರ್ಧಾರದಂತೆ ಈ ದೇಶದಲ್ಲಿ ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿಕೊಳ್ಳುವ ನೈತಿಕತೆ ಇರುವ ಪಕ್ಷವೆಂದರೆ ಅದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ. ಕಾಂಗ್ರೆಸ್ ಪಕ್ಷದ ಹಲವರು ತ್ಯಾಗ, ಬಲಿದಾನದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ ೧ ರಿಂದ ೧೦ ರವರೆಗೆ ರಾಷ್ಟ್ರದ ಎಲ್ಲಾ ಜಿಲ್ಲೆಗಳಲ್ಲಿಯೂ ೭೫ ಕಿ.ಮೀ. ಪಾದಯಾತ್ರೆ ಹಮ್ಮಿಕೊಳ್ಳಲು ನಿರ್ದೇಶನ ನೀಡಿದೆ. ಇದರ ಅನ್ವಯ ಕರ್ನಾಟಕದಲ್ಲಿಯೂ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದರು.
ಅಯಾ ಜಿಲ್ಲೆಗಳ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಹಿರಿಯ ಮುಖಂಡರು ಕಲೆತು ಈ ಕಾರ್ಯಕ್ರಮ ರೂಪಿಸಲಿದ್ದಾರೆ. ಇದರೊಂದಿಗೆ ಆಗಸ್ಟ್ ೧೫ ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನ ಕಾಂಗ್ರೆಸ್ ಕಾರ್ಯಕರ್ತರು ಸೇರಿ ತ್ರಿವರ್ಣ ಧ್ವಜ ಹಾರಿಸುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಇದಕ್ಕೆ ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳ ಎಲ್ಲಾ ಕಾಂಗ್ರೆಸ್ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ೭೫ ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಅವರ ಜನ್ಮ ದಿನದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಆ. ೩ ರಂದು ದಾವಣಗೆರೆಯಲ್ಲಿ ಆಯೋಜಿಸಲಾಗಿದೆ. ಸುಮಾರು ೫-೬ ಲಕ್ಷ ಜನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರಲ್ಲಿಯೂ ರಾಜ್ಯದ ಎಲ್ಲಾ ಕಾಂಗ್ರೆಸ್ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಈ ಮೂಲಕ ಜನರಿಗೆ ಕಾಂಗ್ರೆಸ್ ಪಕ್ಷದ ಸಾಧನೆ ಮತ್ತು ಬಿಜೆಪಿಯ ವೈಫಲ್ಯಗಳ ಕುರಿತು ಮನವರಿಕೆ ಮಾಡಿಕೊಡುವ ಪ್ರಯತ್ನ ಇದಾಗಿದೆ ಎಂದರು.
ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ ಅಧ್ಯಕ್ಷ ಕೆ.ಎನ್.ರಾಜಣ್ಣ ಮಾತನಾಡಿ, ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಅವರ ಜನ್ಮದಿನವನ್ನು ಸಾಮಾಜಿಕ ನ್ಯಾಯದ ದಿನವನ್ನಾಗಿ ಆಚರಿಸಲು ಅವರ ಅಭಿಮಾನಿಗಳು ಚಿಂತನೆ ನಡೆಸಿದ್ದೇವೆ. ಆ. ೩ ರ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಐದು ವರ್ಷಗಳ ಸಿದ್ದರಾಮಯ್ಯ ಅವರ ಆಡಳಿತದ ಎಲ್ಲ ಮಜುಲುಗಳನ್ನು ಪರಿಚಯಿಸುವ ಕೆಲಸ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಾಜಿ ಸಂಸದ ಚಂದ್ರಪ್ಪ, ಮಾಜಿ ಶಾಸಕರಾದ ಎಸ್.ಷಪಿ ಅಹಮದ್, ಡಾ.ರಫೀಕ್ ಅಹಮದ್, ಕೆ. ಷಡಕ್ಷರಿ, ರಮೇಶ್‌ಬಾಬು, ಲಕ್ಕಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ, ಮುರುಳೀಧರ ಹಾಲಪ್ಪ, ಜಿ.ಪಂ. ಮಾಜಿ ಸದಸ್ಯ ವಿ. ವೆಂಕಟೇಶ್, ಜಿಲ್ಲಾ ವೀಕ್ಷಕರಾದ ಕೇಶವಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೆ ಮಠ್ ಮತ್ತಿತರರು ಉಪಸ್ಥಿತರಿದ್ದರು.