ಸೋಂಕು 3ನೇ ಅಲೆ ತಡೆಗೆ ಸಕಲ ಸಿದ್ಧತೆ

ಬೆಂಗಳೂರು/ ನವದೆಹಲಿ, ಜು.೯- ದೇಶದಲ್ಲಿ ಕೊರೊನಾ ಸೋಂಕಿನ ಮೂರನೇ ಅಲೆ ತಡೆಗೆ ಕೆಂಪು, ಹಸಿರು, ಹಳದಿ ವಲಯಗಳಾಗಿ ಗುರುತಿಸಿ ಕಟ್ಟೆಚ್ಚರ ವಹಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.
ಈ ನಡುವೆ ನೆರೆಯ ಕೇರಳದಲ್ಲಿ ದಿನನಿತ್ಯ ಕೊರೊನಾ ಸೋಂಕು ಸಂಖ್ಯೆ ನಿತ್ಯ ಹೆಚ್ಚಳವಾಗುತ್ತಿರುವುದು, ಮೂರನೇ ಅಲೆ ಮುನ್ಸೂಚನೆ ನೀಡಿರುವುದು ಭೀತಿ ಹೆಚ್ಚಳವಾಗಿದೆ. ಹೀಗಾಗಿ ರಾಜ್ಯಕ್ಕೆ ಆತಂಕ ಶುರುವಾಗಿದ್ದು ಕರ್ನಾಟಕ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲು ಸರ್ಕಾರ ಮುಂದಾಗಿದೆ.
ಈಗಾಗಲೇ ಕೇರಳ ಮತ್ತು ಮಹಾರಾಷ್ಟ್ರದಿಂದ ಬರುವ ಜನರು ಕಡ್ಡಾಯವಾಗಿ ನೆಗೆಟಿವ್ ವರದಿ ತೋರಿಸುವಂತೆ ಸೂಚಿಸಲಾಗಿದೆ. ಈ ನಡುವೆ ಕೇರಳದಿಂದ ರಾಜ್ಯದ ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ದೇಶದಲ್ಲಿ ಕೊರೊನಾ ಸೋಂಕಿನ ಮೂರನೇ ಅಲೆಯ ಬಗ್ಗೆ ಜನರು ಜಾಗ್ರತೆಯಿಂದ ಇರಬೇಕು ಎಂದು ತಜ್ಞರು ಮುನ್ನೆಚ್ಚರಿಕೆ ನೀಡಿರುವ ನಡುವೆಯೇ ಕೇರಳದಲ್ಲಿ ದಿನನಿತ್ಯ ೧೨ ರಿಂದ ೧೫ ಸಾವಿರ ಸರಾಸರಿಯಲ್ಲಿ ಸೋಂಕು ಹೆಚ್ಚಳವಾಗುತ್ತಿರುವುದು ಮೂರನೇ ಅಲೆ ಪ್ರವೇಶಕ್ಕೆ ಕಾರಣ ಎಂದು ಹೇಳಲಾಗುತ್ತದೆ.
ಮೂರನೇ ಅಲೆಯ ಸೋಂಕು ದೇಶದಲ್ಲಿ ಅಕ್ಟೋಬರ್, ನವಂಬರ್‌ನಲ್ಲಿ ಕಾಣಿಸಿಕೊಳ್ಳಲಿದೆ ಎಂದು ತಜ್ಞರು ಮುನ್ಸೂಚನೆ ನೀಡಿದ್ದರು.
ಆದರೆ ಕೇರಳದಲ್ಲಿ ದಿನನಿತ್ಯ ಸೋಂಕು ಹೆಚ್ಚುತ್ತಿರುವ ಪರಿಗೆ ತಜ್ಞರು ಬೆಚ್ಚಿ ಬಿದ್ದಿದ್ದಾರೆ. ಇದು ಎರಡನೆಯ ಆರ್ಭಟವೂ ಅಥವಾ ಮೂರನೇ ಅಲೆ ಪ್ರವೇಶವೋ ಎನ್ನುವ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.
ಕೇರಳದಲ್ಲಿ ಕಳೆದ ಹತ್ತು ದಿನಗಳ ಅವಧಿಯಲ್ಲಿ ಪ್ರತಿದಿನ ಸರಾಸರಿ ೧೨ ಸಾವಿರಕ್ಕೂ ಹೆಚ್ಚಿನ ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವುದು ಮೂರನೆಯ ಸಂಕೇತ ಎಂದು ಹೇಳಲಾಗಿದೆ.
ಎರಡನೇ ಅಲೆಯ ಸೋಂಕು ಮಹಾರಾಷ್ಟ್ರದಲ್ಲಿ ಕಾಣಿಸಿಕೊಂಡ ಸಂದರ್ಭದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕೈಗೊಂಡು ಬೆಳಗಾವಿ ಸೇರಿದಂತೆ ಗಡಿಭಾಗವನ್ನು ಮಾಡಿದರೆ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದ ಸಾವು ಮತ್ತು ಸೋಂಕು ತಗಲಲು ತಡೆಯಬಹುದು ಎನ್ನುವ ಪಾಠ ಕಲಿತಿರುವ ರಾಜ್ಯ ಸರ್ಕಾರ, ಮೂರನೇ ಅಲೆ ತಡೆಗೆ ಈಗಿನಿಂದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
ಮೂರನೇ ಅಲೆಯ ಸೋಂಕು ೧೮ ವರ್ಷ ಒಳಗಿನ ವಯೋಮಾನದ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿದೆ ಎನ್ನುವ ಹಿನ್ನೆಲೆಯಲ್ಲಿ ಮಕ್ಕಳ ಆಸ್ಪತ್ರೆಗಳಲ್ಲಿ ಹಾಸಿಗೆ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮಕ್ಕಳ ಜೊತೆಗೆ ಅವರ ಪೋಷಕರು ಆಸ್ಪತ್ರೆಯಲ್ಲಿ ಇರುವ ವ್ಯವಸ್ಥೆಯನ್ನು ಮಾಡಲು ಆಯಾ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಈಗಾಗಲೇ ಸೂಚನೆ ನೀಡಿದೆ.

ಪ್ಯಾಕೇಜ್ ಪ್ರಕಟ
ಭವಿಷ್ಯದಲ್ಲಿ ಎದುರಾಗುವ ಕೊರೊನಾ ಸೋಂಕಿನ ಅಲೆಯನ್ನು ತಡೆಯುವ ಸಲುವಾಗಿ ಅಗತ್ಯ ವೈದ್ಯಕೀಯ ಸೌಲಭ್ಯ ಹೆಚ್ಚಿಸಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರ ನೆನ್ನೆಯಷ್ಟೇ ಆರ್ಥಿಕ ಪ್ಯಾಕೇಜ್ ಪ್ರಕಟಿಸಿದೆ.
ರಾಜ್ಯ ಸರ್ಕಾರಗಳು ಆಮ್ಲಜನಕ ಪೂರೈಕೆ ಆರ್ಥಿಕ ನಿರ್ಮಾಣ ವೆಂಟಿಲೇಟರ್‌ಗಳು ಸೇರಿದಂತೆ ಅಗತ್ಯ ವೈದ್ಯಕೀಯ ಮೂಲ ಸೌಲಭ್ಯವನ್ನು ಮುಂಚಿತವಾಗಿಯೇ ದಾಸ್ತಾನು ಇಟ್ಟುಕೊಳ್ಳುವಂತೆ ಮುನ್ನೆಚ್ಚರಿಕೆ ವಹಿಸುವಂತೆಯೂ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿದೆ.