ಸೋಂಕು ಹೆಚ್ಚಳ ಹಾಸಿಗೆ ಮೀಸಲಿಡಲು ಸಚಿವರ ಸೂಚನೆ

ಬೆಂಗಳೂರು, ಏ. ೫- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಹಾಸಿಗೆಗಳನ್ನು ಮೀಸಲಿಡಲು ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ. ಕೆ. ಸುಧಾಕರ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಸೋಂಕಿತರಿಗೆ ಚಿಕಿತ್ಸೆ ನೀಡಲು ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತಷ್ಟು ಹೆಚ್ಚುವರಿ ಹಾಸಿಗೆಗಳನ್ನು ಮೀಸಲಿಡುವಂತೆ ಸೂಚಿಸಲಾಗಿದೆ. ಹಾಗೆಯೇ ಖಾಸಗಿ ಆಸ್ಪತ್ರೆಗಳಲ್ಲೂ ಶೇ. ೨೦ ರಷ್ಟು ಕೊರೊನಾ ಸೋಂಕಿತರಿಗೆ ಮೀಸಲಿರಿಸುವಂತೆ ಹೇಳಿದ್ದೇವೆ ಎಂದರು.
ಕೊರೊನಾ ಸೋಂಕಿತರ ಜತೆಗೆ ನಾನ್ ಕೋವಿಡ್ ರೋಗಿಗಳ ಸಂಖ್ಯೆಯೂ ಹೆಚ್ಚಾಗಿದೆ. ಹಾಗಾಗಿ ಅವರಿಗೂ ಚಿಕಿತ್ಸೆ ನೀಡಬೇಕು. ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಹಾಸಿಗೆಗಳನ್ನು ಒದಗಿಸಲು ಗಮನ ಹರಿಸಲಾಗಿದೆ ಎಂದು ಅವರು ಹೇಳಿದರು.
೧೫ ಲಕ್ಷ ಡೋಸ್ ಲಸಿಕೆ
ರಾಜ್ಯದಲ್ಲಿ ಕೊರೊನಾ ಲಸಿಕೆಯ ಕೊರತೆ ಇಲ್ಲ. ನಿನ್ನೆ ಕೇಂದ್ರ ಆರೋಗ್ಯ ಸಚಿವರು ಹಾಗೂ ಕೇಂದ್ರ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಜತೆ ಮಾತನಾಡಿದ ಹಿನ್ನೆಲೆಯಲ್ಲಿ ೧೫ ಲಕ್ಷ ಡೋಸ್ ಕೊರೊನಾ ಲಸಿಕೆಯನ್ನು ರಾಜ್ಯಕ್ಕೆ ಕಳುಹಿಸಿದ್ದಾರೆ. ೧೦ ಲಕ್ಷ ಡೋಸ್ ಲಸಿಕೆ ವಿಮಾನದ ಮೂಲಕ ಬೆಂಗಳೂರಿಗೆ ಬಂದಿದೆ. ೫ ಲಕ್ಷ ಡೋಸ್ ರಸ್ತೆ ಮೂಲಕ ಬೆಳಗಾವಿಗೆ ತಲುಪಿದೆ. ಇದಕ್ಕಾಗಿ ಕೇಂದ್ರ ಆರೋಗ್ಯ ಸಚಿವರಿಗೆ ಅಭಿನಂದನೆ ಹೇಳುತ್ತೇನೆ ಎಂದು ಅವರು ಹೇಳಿದರು.
ರಾಜ್ಯಕ್ಕೆ ಇದುವರೆಗೂ ಒಟ್ಟು ೪೬ ಲಕ್ಷ ಡೋಸ್ ಕೊರೊನಾ ಲಸಿಕೆ ಬಂದಂತಾಗಿದೆ ಎಂದು ಅವರು ತಿಳಿಸಿದರು.
ನಿನ್ನೆ ಭಾನುವಾರ ರಜೆ ಇದ್ದ ಕಾರಣ ಸೋಂಕಿತರ ಸಂಖ್ಯೆಯಲ್ಲಿ ಸ್ವಲ್ಪ ಮಟ್ಟಿಗೆ ಇಳಿಮುಖವಾಗಿದೆ. ಆದರೂ ಎಲ್ಲರೂ ಎಚ್ಚರ ವಹಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಿ ಮಾರ್ಗಸೂಚಿಗಳನ್ನು ಪಾಲಿಸಲೇಬೇಕು ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ಸೋಂಕು ಹೆಚ್ಚಿರುವ ೮ ರಾಜ್ಯಗಳ ಬಗ್ಗೆ ಉನ್ನತಾಧಿಕಾರಿಗಳ ಜತೆ ಪರಿಸ್ಥಿತಿಯ ಪರಾಮರ್ಶೆ ನಡೆಸಿದ್ದಾರೆ. ಸೋಂಕು ತಡೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿ, ಯಾವುದೇ ಕಠಿಣ ನಿರ್ಧಾರಗಳನ್ನು ಕೈಗೊಳ್ಳುವ ಅಧಿಕಾರವನ್ನು ಆಯಾ ರಾಜ್ಯಗಳಿಗೆ ನೀಡಿದ್ದಾರೆ. ಅದರಂತೆ ಮಹಾರಾಷ್ಟ್ರದಲ್ಲಿ ಕಠಿಣ ಕ್ರಮಗಳು ಜಾರಿಯಾಗಿವೆ. ರಾಜ್ಯದಲ್ಲೂ ಅಂತಹ ಕಠಿಣ ಕ್ರಮಗಳನ್ನು ಜಾರಿಗೊಳಿಸುವ ವಾತಾವರಣ ಸೃಷ್ಠಿಯಾಗಬಾರದು ಎಂಬುದು ನಮ್ಮ ಬಯಕೆ. ಅದಕ್ಕೆ ಜನ ಸ್ಪಂದಿಸಬೇಕು ಎಂದು ಅವರು ಹೇಳಿದರು.
ಕೊರೊನಾ ಸೋಂಕು ಪ್ರಕರಣಗಳು ನಿಯಂತ್ರಣ ಬಾರದೆ ಹೆಚ್ಚಾಗುತ್ತಾ ಹೋದರೆ ಕಠಿಣ ಕ್ರಮಗಳ ಜಾರಿ ಅನಿವಾರ್ಯವಾಗುತ್ತದೆ. ಸೋಂಕು ನಿಯಂತ್ರಣಕ್ಕೆ ಬಾರದೆ ಹೋದರೆ ಒಂದೊಂದೆ ಚಟುವಟಿಕೆಗಳನ್ನು ಬಂದ್ ಮಾಡುವ ಅನಿವಾರ್ಯತೆ ಎದುರಾಗುತ್ತದೆ. ಇದಕ್ಕೆ ಜನ ಅವಕಾಶ ನೀಡಬಾರದು ಎಂದು ಅವರು ಮನವಿ ಮಾಡಿದರು.
ಕೋವಿಡ್ ಸಲಹಾ ಸಮಿತಿಯ ತಜ್ಞ ವೈದ್ಯರು ಏ. ೧೭ರ ವೇಳೆಗೆ ಬೆಂಗಳೂರು ನಗರದಲ್ಲೆ ಪ್ರತಿದಿನ ೬೫೦೦ ಸೋಂಕು ಪ್ರಕರಣಗಳು ಕಾಣಿಸಿಕೊಳ್ಳಬಹುದು ಎಂದು ಹೇಳಿದ್ದಾರೆ. ಇದನ್ನು ನಾನು ತಳ್ಳಿ ಹಾಕುವುದಿಲ್ಲ. ಮೇ ಅಂತ್ಯದವರೆಗೂ ಪರಿಸ್ಥಿತಿ ಕಷ್ಟವಿದೆ. ೨ನೇ ಅಲೆ ತಡೆಯಲು ಜನರ ಸಹಕಾರ ಅತಿ ಅವಶ್ಯ ಎಂದರು.
ಜಿಮ್‌ಗಳಿಗೆ ಕೊರೊನಾ ಮಾರ್ಗಸೂಚಿಗಳನ್ನು ಮಾರ್ಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜೀವನ ಮತ್ತು ಜೀವನೋಪಾಯ ಎರಡನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಮುಖ್ಯಮಂತ್ರಿಗಳು ಮಾನವೀಯತೆ ದೃಷ್ಠಿಯಿಂದ ತೀರ್ಮಾನ ತೆಗೆದುಕೊಂಡಿದ್ದಾರೆ. ಅವರಿಗೂ ಒತ್ತಡ ಇದೆ ಎಂದು ಹೇಳಿದರು.
ಕೊರೊನಾ ತಡೆಗೆ ಕಠಿಣ ನಿಯಮಗಳನ್ನು ಜಾರಿ ಮಾಡಿದ್ದೇವೆ. ಅನುಷ್ಠಾನಗೊಳಿಸುವ ಜವಾಬ್ದಾರಿ ಪ್ರತಿಯೊಂದು ಇಲಾಖೆಯ ಮುಖ್ಯಸ್ಥರ ಮೇಲಿದೆ. ಈ ವಿಚಾರವಾಗಿ ಮುಖ್ಯ ಕಾರ್ಯದರ್ಶಿಯವರ ಜತೆ ಮಾತನಾಡುವುದಾಗಿ ತಿಳಿಸಿದರು.
ಕೊರೊನಾ ೨ನೇ ಅಲೆ ತಡೆ ಸಂಬಂಧ ವಿರೋಧ ಪಕ್ಷಗಳನ್ನು ಕರೆದು ಮಾತನಾಡಿಲ್ಲ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮುಖ್ಯಮಂತ್ರಿಗಳ ಜತೆ ಮಾತನಾಡುವೆ. ವಿರೋಧ ಪಕ್ಷಗಳ ಸಲಹೆ ಅಗತ್ಯ. ಮುಖ್ಯಮಂತ್ರಿಗಳು ಸಮಯ ನೋಡಿಕೊಂಡು ವಿರೋಧ ಪಕ್ಷಗಳ ಜತೆ ಮಾತನಾಡುತ್ತಾರೆ ಎಂದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಎಸ್‌ಐಟಿ ವಿಚಾರಣೆಗೆ ಗೈರು ಹಾಜರಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ಸದ್ಯ ನಾನು ಜನರ ಆರೋಗ್ಯ, ಕೋವಿಡ್ ತಡೆಯತ್ತ ಗಮನ ಹರಿಸಿದ್ದೇನೆ. ರಮೇಶ್ ಜಾರಕಿಹೊಳಿ ಅವರಿಗೆ ಆರೋಗ್ಯದಲ್ಲಿ ಏನಾಗಿದೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ತಿಳಿದುಕೊಂಡು ಮಾತನಾಡುತ್ತೇನೆ ಎಂದು ಸಚಿವ ಸುಧಾಕರ್ ಹೇಳಿದರು.