ಸೋಂಕು ಹೆಚ್ಚಳ ವಿಮಾನ ಸಂಚಾರ ರದ್ದು

ನವದೆಹಲಿ, ಮಾ.೨೪-ಕೊರೊನಾ ಸೋಂಕು ಹೆಚ್ಚಾಗುತ್ತಿರುವುದರಿಂದ ಅಂತರರಾಷ್ಟ್ರೀಯಪ್ರಯಾಣಿಕರ ವಿಮಾನಗಳ ಹಾರಾಟ ರದ್ದು ಮಾಡಿರುವ ಆದೇಶವನ್ನು ಏ.೩೦ರವರೆಗೆ ವಿಸ್ತರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ತಿಳಿಸಿದೆ.
ಭಾರತದಿಂದ ಹೊರಡುವ ಮತ್ತು ಭಾರತಕ್ಕೆ ಆಗಮಿಸುವ ಅಂತರರಾಷ್ಟ್ರೀಯ ಪ್ರಯಾಣಿಕರ ವಿಮಾನ ಸೇವೆಯನ್ನು ರದ್ದುಪಡಿಸಲಾಗಿದೆ. ಅಲ್ಲದೆ, ಈಗಾಗಲೇ ಹೊರಡಿಸಿರುವ ಸುತ್ತೋಲೆಯ ಮಾನ್ಯತಾ ಅವಧಿಯನ್ನು ವಿಸ್ತರಿಸಲಾಗಿದೆ.
ಇನ್ನು, ಈ ಆದೇಶವು ಸರಕು ಸಾಗಣೆ ವಿಮಾನಗಳಿಗೆ ಹಾಗೂ ಡಿಜಿಸಿಎಯಿಂದ ಒಪ್ಪಿಗೆ ಪಡೆದು ಕಾರ್ಯಾಚರಣೆ ನಡೆಸುವ ವಿಮಾನಗಳಿಗೆ ಅನ್ವಯಿಸುವುದಿಲ್ಲ ಎಂದು ತಿಳಿಸಲಾಗಿದೆ.
ಕಳೆದ ೨೦೨೦ರ ಮಾರ್ಚ್ ೨೩ ರಿಂದ ಕೋವಿಡ್ ಕಾರಣದಿಂದಾಗಿ ಅಂತರರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ನಿಷೇಧಿಸಲಾಗಿದೆ. ವಂದೇ ಭಾರತ್ ಮಿಷನ್‌ನಡಿ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಭಾರತಕ್ಕೆ ಕರೆತರಲು ಮೇ ೭ ರಿಂದ ವಿಶೇಷ ವಿಮಾನಗಳನ್ನು ನಿಯೋಜಿಸಲಾಗಿತ್ತು. ಈ ಸೇವೆ ಮುಂದುವರಿದಿದೆ ಎಂದು ಡಿಜಿಸಿಎ ತಿಳಿಸಿದೆ.