ಸೋಂಕು ಹೆಚ್ಚಳ : ‘ಮಹಾ’ ಕಾರಣ


ಬೆಂಗಳೂರು, ಏ.೨೬-ಮಹಾರಾಷ್ಟ್ರ ಮಾದರಿಯಲ್ಲಿಯೇ ರಾಜಧಾನಿ ಬೆಂಗಳೂರಿನಲ್ಲೂ ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಜನರು ಎಚ್ಚರವಹಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.
ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಕಳೆದ ಹತ್ತಾರು ದಿನಗಳಿಂದ ಬೆಂಗಳೂರಿನಲ್ಲಿ ತೀವ್ರವಾಗಿ ಕರೋನಾ ಹರಡಿದೆ. ಇದಕ್ಕೆ ಮಹಾರಾಷ್ಟ್ರದ ಸೋಂಕು ಕಾರಣ ಎನ್ನುವ ಶಂಕೆ ಇದೆ ಎಂದು ಹೇಳಿದರು.
ಕೋವಿಡ್ ವೇಗ ಪಡೆದುಕೊಂಡಿರುವ ಕಾರಣ ಇದರಲ್ಲಿ ಹೊಸ ತಳಿ ಏನಾದರೂ ಇದೀಯಾ ಎನ್ನುವ ಕುರಿತು ಆರೋಗ್ಯ ತಜ್ಞರು ಸಂಶೋಧನೆ ಕೈಗೊಳ್ಳಲಿದ್ದಾರೆ ಎಂದ ಅವರು, ಈ ಮೊದಲೇ ಅಂತರರಾಜ್ಯ ಪ್ರಯಾಣಕ್ಕೆ ಕಡಿವಾಣ ಹಾಕಬೇಕಿತ್ತು. ಇದರಿಂದ ಕೋವಿಡ್ ಹರಡುವ ಪ್ರಮಾಣ ತಗ್ಗುತ್ತಿತ್ತು ಎಂದು ಹೇಳಿದರು.
ಎರಡು ದಿನಗಳ ಕರ್ಫ್ಯೂಗೆ ಜನರು ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದ ಅವರು, ದಿನೇ ದಿನೇ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ದ್ವಿ ಗುಣವಾಗುತ್ತಿರುವ ಕಾರಣ, ಕೋವಿಡ್ ಕೇರ್ ಸೆಂಟರ್ ಹೆಚ್ಚಳ, ಆಸ್ಪತ್ರೆಗಳ ಸೇವೆಯೂ ಹೆಚ್ಚಿಸುವುದು ಸೇರಿದಂತೆ ಯಾವ ರೀತಿ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವುದರ ಕುರಿತು ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪ ಮಾಡಲಾಗಿದೆ. ಇದರ ಕುರಿತು ಸರ್ಕಾರವೇ ಅಭಿಪ್ರಾಯ ಹೊರಹಾಕಲಾಗಿದೆ ಎಂದರು.
ಸೋಂಕಿತರ ಪ್ರಮಾಣ ಹೆಚ್ಚಾಗಿರುವ ಕಾರಣ ಬಿಬಿಎಂಪಿ ಸಕಲ ಸಿದ್ಧತೆ ಕೈಗೊಂಡಿದ್ದರು, ಆರೋಗ್ಯ ಸೇವೆಗಳಲ್ಲಿ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಈಗಿರುವ ಸನ್ನಿವೇಶದಲ್ಲಿ ದೇಶದಲ್ಲಿಯೇ ವೈದ್ಯಕೀಯ ಸೌಲಭ್ಯ ಬೆಂಗಳೂರಿನಲ್ಲಿಯೇ ಚೆನ್ನಾಗಿದೆ ಎಂದು ಹೇಳಿದರು.
೯ ಸಾವಿರ ಹಾಸಿಗೆ: ಖಾಸಗಿ ಆಸ್ಪತ್ರೆಗಳಿಂದ ೧೧ ಸಾವಿರ ಬೆಡ್‌ಗಳನ್ನು ಪಡೆಯಬೇಕೆಂಬ ಗುರಿ ಇಟ್ಟುಕೊಂಡಿದ್ದು, ಈವರೆಗೂ ೯ ಸಾವಿರ ಹಾಸಿಗೆ ಲಭ್ಯವಾಗಿದೆ. ಶೀಘ್ರದಲ್ಲಿಯೇ ೧೧ ಸಾವಿರ ಪೂರ್ಣಗೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹಾಸಿಗೆ ಪಡೆಯಲು ಬಿಬಿಎಂಪಿ ಕ್ರಮವಹಿಸಲಿದೆ ಎಂದರು.
ಶೋಕಾಸ್ ನೋಟಿಸ್
ಕೋವಿಡ್ ಸೋಂಕು ಸಂಬಂಧ ಬಿಯು ಸಂಖ್ಯೆಯಲ್ಲಿ ತೊಂದರೆ ಆಗುತ್ತಿರುವ ದೂರುಗಳು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆ ಕೆಲ ಲ್ಯಾಬ್‌ಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದ್ದು, ಈ ಸಮಸ್ಯೆ ಉಲ್ಬಣ ಆಗದಂತೆ ಕ್ರಮವಹಿಸಲಾಗುವುದು ಎಂದು ಗೌರವ್ ಗುಪ್ತ ತಿಳಿಸಿದರು.
ಮಾರುಕಟ್ಟೆ ವಿಕೇಂದ್ರಿಕರಣ
ಮಾರುಕಟ್ಟೆಗಳನ್ನು ಸ್ಥಳಾಂತರ ಮಾಡಬೇಕು ಎನ್ನುವ ಗುರಿಯಿದೆ. ಈ ಸಂಬಂಧ ಸ್ಥಳೀಯ ವಲಯ ಆಯುಕ್ತರಿಗೆ ಸೂಚನೆ ನೀಡಲಾಗಿದ್ದು, ವರ್ತಕರೊಂದಿಗೆ ಚರ್ಚಿಸಿ ಶೀಘ್ರ ಕ್ರಮಕೈಗೊಳ್ಳಲಿದ್ದಾರೆ ಎಂದು ಗೌರವ್ ಗುಪ್ತ ಮಾಹಿತಿ ನೀಡಿದರು.