ಸೋಂಕು ಹರಡದಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚನೆ

ಸಿಂಧನೂರು.ಏ.೨೪-ಕೊರೋನಾ ಎರಡನೇ ಅಲೆ ಹೆಚ್ಚಾಗುತ್ತಿದ್ದು ಜನ ಭಯಬೀತರಾಗಿದ್ದಾರೆ. ಪಾಸಿಟಿವ್ ಬಂದ ವ್ಯಕ್ತಿಯನ್ನು ಕೋವಿಡ್ ಸೆಂಟರ್ ಹಾಗೂ ಸರ್ಕಾರ ಅನುಮತಿ ನೀಡಿದ ಖಾಸಗಿ ಆಸ್ಪತ್ರೆಗೆ ದಾಖಲೆ ಮಾಡಿ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿರುವವರನ್ನು ಕೋವಿಡ್ ಪರೀಕ್ಷೆ ಮಾಡಿಸಿ ಹೊರಗೆ ಬರುವ ತನಕ ಹೊಂ ಕ್ವಾರಂಟೈನ್ ಮಾಡಿದರೆ ಕೊರೊನಾ ಸೊಂಕಿತರ ಸಂಖ್ಯೆ ಹೆಚ್ಚಾಗದಂತೆ ತಡೆಯಲು ಸಾಧ್ಯ ಇದನ್ನು ಅಧಿಕಾರಿಗಳು ಮಾಡಬೇಕು ಎಂದು ಮಾಜಿ ಮಂತ್ರಿ ಶಾಸಕ ವೆಂಕಟರಾವ್ ನಾಡಗೌಡ ಅಧಿಕಾರಿಗಳಿಗೆ ತಾಕಿತು ಮಾಡಿದರು.
ತಹಶೀಲ್ ಕಛೇರಿಯಲ್ಲಿ ಮೊದಲ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೋವಿಡ್ ಪರೀಕ್ಷೆ ಮಾಡಿದ ಅಂದೆ ವರದಿ ಬರುವಂತೆ ಮಾಡಿದರೆ ಸೂಕ್ತ ಎಂದರು.
ನರೇಗಾದಲ್ಲಿ ೫ ಸಾವಿರ ಕ್ಕೂ ಮೇಲ್ಪಟ್ಟು ಕೂಲಿ ಕೆಲಸಗಾರರು ಕೆಲಸ ಮಾಡುತ್ತಿದ್ದು ಅಲ್ಲಿ ಪಾಸಿಟಿವ್ ಬಂದರೆ ಅದೆಗೆ ಅಧಿಕಾರಿಗಳು ನಿಯಂತ್ರಣ ಮಾಡುತ್ತೀರಿ ಅದಕ್ಕಾಗಿ ಒಂದೆ ಕಡೆ ಹೆಚ್ಚು ಜನ ಕೆಲಸ ಮಾಡುವುದನ್ನು ತಪ್ಪಿಸಿ ಆಯಾ ಗ್ರಾಮಗಳಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳನ್ನು ೨೦-೩೦ ಜನರಿಂದ ಕಾಮಗಾರಿ ಮಾಡಿದರೆ ಕೊರೊನಾ ಹರಡುವಿಕೆ ತಡೆಗಟ್ಟಬಹುದು ಅಲ್ಲದೆ ಕೂಲಿ ಕಾರ್ಮಿಕರು ಕೆಲಸ ಮಾಡುವ ಸ್ಥಳದಲ್ಲಿ ವೈದ್ಯಾಧಿಕಾರಿಗಳು ಹೋಗಿ ಕೋವಿಡ್ ಪರೀಕ್ಷೆ ಮಾಡಿಸಿ ಸಾಧ್ಯವಾದರೆ ೪೫ ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ಹಾಕಿಸುವ ವ್ಯವಸ್ಥೆ ಮಾಡಬೇಕು ಎಂದು ತಾ.ಪ ಇಒ ಗೆ ಶಾಸಕರು ಸೂಚನೆ ನೀಡಿದರು.
ನಾಳೆಯಿಂದ ನಗರ ಹಾಗೂ ಹಳ್ಳಿಗಳಲ್ಲಿ ಸ್ಯಾನಿಟೈಜರ್ ಮಾಡಿಸಬೇಕು ಗಿಡದ ಕೆಳಗೆ ಮತ್ತು ಸಾರ್ವಜನಿಕರ ಕಟ್ಟೆಗಳಲ್ಲಿ ಕುಳಿತು ಹರಟೆ ಹೊಡೆಯುವದಕ್ಕೆ ಕಡಿವಾಣ ಹಾಕಬೇಕು. ಮಾಸ್ಕ್ ಧರಿಸದವರಿಗೆ ದಂಡ ಹಾಕುವದಾಗಿ ಮೈಕ್‌ಗಳ ಮೂಲಕ ಪಿಡಿಒಗಳು ಪ್ರಚಾರ ಮಾಡಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಮಾಸ್ಕ್ ಧರಿಸದೆ ತಿರುಗಾಡುವವರ ವಿರುದ್ಧ ಮೂಲಾಜಿಲ್ಲದೆ ಪೋಲಿಸರು ದಂಡ ಹಾಕುವಂತೆ ಸಿಪಿಐಗೆ ಶಾಸಕರು ಸೂಚನೆ ನೀಡಿದರು.
ತಾಲೂಕಿನ ೫ ಪೋಲಿಸ್ ಠಾಣೆಗಳಲ್ಲಿ ಸಾವಿರ ಪ್ರಕರಣಗಳು ದಾಖಲು ಮಾಡಿಕೊಂಡು ಮಾಸ್ಕ್ ಧರಿಸದವರಿಗೆ ದಂಡ ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಕಠಿಣ ಕ್ರಮ ತೆಗೆದುಕೊಂಡು ಮಾಸ್ಕ್ ಧರಿಸದವರಿಗೆ ದಂಡ ಹಾಕುವ ಮೂಲಕ ಕೊರೊನಾ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಎಚ್ಚರಿಕೆ ಸಹ ನೀಡಲಾಗುತ್ತದೆಂದು ಸಿಪಿಐ ಶ್ರೀಕಾಂತ ಅಲ್ಲಾಪುರ ಸಭೆಗೆ ತಿಳಿಸಿದರು.
ನಗರದ ಶಾಂತಿ, ಆದರ್ಶ, ಗವಿಸಿದ್ದೇಶ್ವರ ಈ ೩ ಖಾಸಗಿ ಆಸ್ಪತ್ರೆಗಳಿಗೆ ಕೊರೊನಾ ಸೊಂಕಿತರನ್ನು ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಲು ಅನುಮತಿ ನೀಡಲಾಗಿದ್ದು, ಈ ಆಸ್ಪತ್ರೆಗಳಿಗೆ ಔಷಧ ಹಾಗೂ ಇಂಜೆಕ್ಷನ್ ಕೊರತೆ ಯಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಕೋವಿಡ್ ಪರೀಕ್ಷೆ ಮಾಡಿಸಿದ ಅಂದಿನ ದಿವಸವೆ ವರದಿ ಬಂದರೆ ಸೂಕ್ತ ,೩-೪ ದಿನ ತಡವಾಗಿ ಬಂದರೆ ಆ ವ್ಯಕ್ತಿ ಕಂಡಕಂಡಲ್ಲಿ ತಿರುಗಾಡುವದರಿಂದ ಸೊಂಕಿತರ ಸಂಖ್ಯೆ ಹೆಚ್ಚಾಗಿ ಪರೀಕ್ಷೆ ಮಾಡಲು ಕಷ್ಟ ವಾಗುತ್ತದೆ ಕಾರಣ ಕೊವಿಡ್ ಪರೀಕ್ಷೆ ಯನ್ನು ಬೇಗನೆ ಕೊಡುವಂತೆ ಶಾಸಕರು ಅಧಿಕಾರಿಗಳಿಗೆ ಹೇಳಿದರು.
ಕೊರೊನಾ ವಾರಿಯರ್ಸ ಗಳಿಗೆ ಮಾಸ್ಕ್ ಮತ್ತು ಸ್ಯಾನಿಟೈಜರ್‌ಗಳು ಕೊರತೆ ಯಾಗದಂತೆ ಆರೋಗ್ಯ ಇಲಾಖೆ ನೋಡಿಕೊಳ್ಳಬೇಕು ಕೊರತೆ ಇದ್ದರೆ ನನ್ನ ಗಮನಕ್ಕೆ ತಂದರೆ ತರಿಸಿಕೊಡುವ ವ್ಯವಸ್ಥೆ ಮಾಡುತ್ತೆನೆ ಎಂದು ಶಾಸಕರು ಅಧಿಕಾರಿಗಳಿಗೆ ತಿಳಿಸಿದ ಅವರು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷೆ ಮಾಡಿ ಪಾಸಿಟಿವ್ ಬಂದವರ ಹೆಸರುಗಳನ್ನು ಸರ್ಕಾರಿ ವೈದ್ಯರಿಗೆ ತಿಳಿಸಬೇಕು. ಅದು ಬಿಟ್ಟು ಪಾಸಿಟಿವ್ ಬಂದವರ ವರದಿ ಗೌಪ್ಯವಾಗಿಡುವದು ಅಪರಾಧ ಇಂತಹ ಆಸ್ಪತ್ರೆಗಳ ಮೇಲೆ ಆರೋಗ್ಯ ಇಲಾಖೆ ಕಣ್ಣಿಡಬೇಕು ಇಲ್ಲದಿದ್ದರೆ ಮುಂದೆ ಅಪಾಯ ಗ್ಯಾರಂಟಿ ಎಂದು ಶಾಸಕ ನಾಡಗೌಡ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪ ಸದಸ್ಯರಾದ ಅಮರೇಗೌಡ ವಿರುಪಾಪುರ, ತಹಶೀಲ್ದಾರ್ ಕವಿತಾ, ತಾ.ಪ ಇಒ ಪವನ್ ಕುಮಾರ, ನಗರಸಭೆ ಕಮಿಷನರ್ ಆರ್.ವಿರೂಪಾಕ್ಷಿಮೂರ್ತಿ,ತುರವಿಹಾಳ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಹಾಜಿಬಾಬು ,ಟಿ.ಎಚ್.ಒ ನಂದ ಕುಮಾರ ,ಡಾ.ಸುರೇಶ ಗೌಡ ,ಡಾ.ಜೀವನೇಶ್ವರಯ್ಯ ,ಡಾ.ಮಂಜುನಾಥ ಅಣ್ಷಾಗೌಡರ ,ಬಿಇಒ ಶರಣಪ್ಪ ವಟಗಲ್ ,ಮಹಿಳಾ ಮತ್ತು ಮಕ್ಕಳ ಇಲಾಖೆ ಲಿಂಗನಗೌಡ ,ನಗರಸಭೆ ಪರಿಸರ ಅಭಿಯಂತರ ಮಹೇಶ್ವರ ,ಐ .ಎಂ.ಎ ತಾಲುಕ ಅದ್ಯಕ್ಷರಾದ ಸುಬ್ಬರಾವ್ ,ಸೇರಿದಂತೆ ಇತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು ಸಲಹೆ ಸೂಚನೆ ನೀಡಿದರು.