ಸೋಂಕು, ಸಾವು ಏರಿಕೆ

ನವದೆಹಲಿ,ಜು.೨೨- ದೇಶದಲ್ಲಿ ಕೊರೊನಾ ಸೋಂಕು ಮತ್ತು ಸಾವಿನ ಸಂಖ್ಯೆ ನಿತ್ಯ ಏರಿಕೆಯಾಗುತ್ತಿದ್ದು ಮತ್ತೆ ಆತಂಕಕ್ಕೆ ಕಾರಣವಾಗಿದೆ.

ಕಳೆದ ೨೪ ಗಂಟೆಗಳ ಅವಧಿಯಲ್ಲಿ ೨೧,೮೮೦ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ೬೦ ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.ಇತ್ತೀಚಿನ ತಿಂಗಳಲ್ಲಿ ಅತಿ ಹೆಚ್ಚಿನ ಸಾವು ಇದಾಗಿದೆ. ಜೊತೆಗೆ ೨೧,೨೧೯ ಮಂದಿ ಸೋಂಕಿನಿಂದ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಸೋಂಕು ನಿತ್ಯ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ೧,೪೯,೪೮೨ಕ್ಕೆ ಹೆಚ್ಚಳವಾಗಿದೆ. ನಿತ್ಯ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಒಟ್ಟು ಸೋಂಕಿನ ಸಂಖ್ಯೆ ೪.೩೭ ಕೋಟಿಗೆ ಏರಿಕೆಯಾಗಿದೆ. ಇದುವರೆಗೆ ಚೇತರಿಸಿಕೊಂಡು ಬಿಡುಗಡೆಯಾದವರ ಸಂಖ್ಯೆ ೪,೩೧,೭೧,೬೫೩ ಕ್ಕೆ ಹೆಚ್ಚಳವಾಗಿದೆ. ಇದೇ ಅವಧಿಯಲ್ಲಿ ೫,೨೫,೯೩೦ ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಲಾಗಿದೆ.

ಕಳೆದ ೨೪ ಗಂಟೆಯ ಅವಧಿಯಲ್ಲಿ ೩೭,೦೬,೯೯೭ ಡೋಸ್ ಲಸಿಕೆ ನೀಡಲಾಗಿದೆ. ಇದರೊಂದಿಗೆ ಒಟ್ಟು ಲಸಿಕೆ ನೀಡಿಕೆ ಸಂಖ್ಯೆ ೨೦೧,೩೦,೯೭,೮೧೯ ಡೋಸ್ ಲಸಿಕೆ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ದಿನದ ಪಾಸಿಟಿವಿಟಿ ಪ್ರಮಾಣ ಶೇ.೪.೪೨ ರಷ್ಟು ಇದ್ದು ವಾರದ ಸರಾಸರಿ ಪ್ರಮಾಣ ಶೇ.೪.೫೧ ರಷ್ಟು ಇದೆ. ಜೊತೆಗೆ ಒಟ್ಟಾರೆ ಪಾಸಿಟಿವಿಟಿ ಪ್ರಮಾಣ ಶೇ.೦.೩೪ರಷ್ಟು ಇದೆ. ಇದೇ. ೪.೯೫,೩೬೫ ಮಂದಿಗೆ ಸೋಂಕು ಪತ್ತೆ ಮಾಡಿದ್ದು ಇಲ್ಲಿಯ ತನಕ ೮೭.೧೬ ಕೋಟಿ ಮಂದಿಗೆ ಪರೀಕ್ಷೆ ಮಾಡಲಾಗಿದೆ.

ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಒಟ್ಟಾರೆ ಚೇತರಿಕೆ ಪ್ರಮಾಣ ಶೇ.೯೮.೪೬ ಕ್ಕೆ ಕುಸಿದಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.