ಸೋಂಕು, ಸಾವು ಏರಿಕೆ

ನವದೆಹಲಿ,ಜು.೨೭- ದೇಶದಲ್ಲಿ ಕಳೆದ ಎರಡು ದಿನಗಳಿಂದ ಇಳಿಕೆಯಾಗಿದ್ದ ಕೊರೊನಾ ಸೋಂಕು ಮತ್ತು ಸಾವಿನ ಸಂಖ್ಯೆ ಇಂದು ಮತ್ತಷ್ಟು ಹೆಚ್ಚಾಗಿದೆ.
ಕಳೆದ ೨೪ ಗಂಟೆಗಳ ಅವಧಿಯಲ್ಲಿ ಹೊಸದಾಗಿ ೧೮,೩೧೩ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ೫೭ ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇದೇ ಅವಧಿಯಲ್ಲಿ ೨೦,೭೪೨ ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಸೋಂಕು ಸಂಖ್ಯೆ ಏರಿಕೆಯಾದರೂ ಚೇತರಿಕೆ ಅಧಿಕವಾಗಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ೧,೪೫,೦೨೬ ಕ್ಕೆ ಇಳಿಕೆಯಾಗಿದೆ. ಕೊರೊನಾ ಸೋಂಕಿನ ದಿನದ ಪಾಸಿಟಿವಿಟಿ ಪ್ರಮಾಣ ಶೇ. ೪.೩೧ರಷ್ಟು ಇದೆ ಎಂದು ಹೇಳಿದೆ.
ದೇಶದಲ್ಲಿ ಹೊಸದಾಗಿ ೨೭,೩೭,೨೩೫ ಡೋಸ್ ಲಸಿಕೆ ಹಾಕಲಾಗಿದ್ದು ಇದರೊಂದಿಗೆ ಒಟ್ಟಾರೆಯಾಗಿ ೨೦೨,೭೯,೬೧,೭೨೨ ಡೋಸ್ ಲಸಿಕೆ ನೀಡಲಾಗಿದೆ. ಹೊಸದಾಗಿ ಕಾಣಿಸಿಕೊಂಡ ಸೋಂಕು ಸೇರಿದಂತೆ ಇಲ್ಲಿಯ ತನಕ ಒಟ್ಟು ಸೋಂಕಿತರ ಸಂಖ್ಯೆ ೪.೩೭ಕೋಟಿಗೆ ಹೆಚ್ಚಳವಾಗಿದೆ. ಅಲ್ಲದೆ ಚೇತರಿಸಿಕೊಂಡು ಬಿಡುಗಡೆಯಾದವರ ಸಂಖ್ಯೆ ೪,೩೨,೬೭,೫೭೧ ಮಂದಿ ಚೇತರಿಸಿಕೊಂಡಿದ್ದಾರೆ. ಅಲ್ಲದೆ ಇದೇ ವೇಳೆ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ೫,೨೬,೧೨೭ ಮಂದಿಗೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ.
ದಿನದ ಪಾಸಿಟಿವಿಟಿ ಪ್ರಮಾಣ ಶೇ.೪.೩೧ ರಷ್ಟು ಇದ್ದು ವಾರದ ವಾರದ ಸರಾಸರಿ ಪ್ರಮಾಣ ಶೇ.೪.೫೭ ರಷ್ಟು ಏರಿಕೆಯಾಗಿದೆ.ಅಲ್ಲದೆ ಒಟ್ಟು ಸೋಂಕಿನ ಸರಾಸರಿ ಪ್ರಮಾಣ ಶೇ.೦.೩೩ರಷ್ಟು ಇದೆ.
ಸೋಂಕು ಸಂಖ್ಯೆ ಏರಿಳಿತದ ನಡುವೆ ನಿನ್ನೆ ಹೊಸದಾಗಿ ೪,೨೫,೩೩೭ ಮಂದಿಗೆ ಪರೀಕ್ಷೆ ಮಾಡಲಾಗಿದ್ದು ಇಲ್ಲಿಯ ತನಕ ೮೭.೩೬ ಕೋಟಿಗೆ ಹೆಚ್ಚಳವಾಗಿದೆ. ಜೊತೆಗೆ ಸೋಂಕಿನ ಚೇತರಿಕೆ ಪ್ರಮಾಣ ಶೇ.೯೮.೪೭ಕ್ಕೆ ಕುಸಿದಿದೆ ಎಂದು ಸಚಿವಾಲಯ ತಿಳಿಸಿದೆ.