ಸೋಂಕು-ಸಾವು ಇಳಿಕೆ ನಿರಾಳ

ನವದೆಹಲಿ, ಮೇ ೩೧- ದೇಶದಲ್ಲಿ ದಿನನಿತ್ಯ ರಾಕೆಟ್ ವೇಗದಲ್ಲಿ ಹೆಚ್ಚಾಗುತ್ತಿದ್ದ ಕೊರೋನೋ ಸೋಂಕಿನ ಪಾಸಿಟಿವ್ ಪ್ರಕರಣ ಮತ್ತು ಸಾವಿನ ಸಂಖ್ಯೆ ಇತ್ತೀಚೆಗೆ ಇಳಿಮುಖವಾಗುತ್ತಿದೆ. ಇದು ಸಹಜವಾಗಿಯೇ ತುಸು ನಿರಾಳ ಬಾವ ತರಿಸಿದೆ.
ರಾಷ್ಟ್ರ ರಾಜಧಾನಿ ದೆಹಲಿ ,ಮಹಾರಾಷ್ಟ್ರ , ಗುಜರಾತ್ ಹರಿಯಾಣ ರಾಜಸ್ಥಾನ, ಪಶ್ಚಿಮ ಬಂಗಾಳ ಉತ್ತರ ಪ್ರದೇಶ ಕರ್ನಾಟಕ-ಆಂಧ್ರಪ್ರದೇಶ ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸೋಂಕು ಪ್ರಮಾಣ ಇಳಿಕೆಯಾಗುತ್ತಿದೆ. ಜೊತೆಗೆ ಇದೇ ಅವಧಿಯಲ್ಲಿ ಚೇತರಿಕೆ ಪ್ರಮಾಣ ಅಧಿಕವಾಗಿದೆ.
ದೇಶದಲ್ಲಿ ಕೋರೋನಾ ಸೋಂಕು ಸಂಖ್ಯೆ ಗರಿಷ್ಠ ಮಟ್ಟ ತಲುಪಿದ ಹಿನ್ನೆಲೆಯಲ್ಲಿ ತಬ್ಬಿಬ್ಬಾದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಾಗಾಲೋಟದಲ್ಲಿ ಸಾಗುತ್ತಿರುವ ಸೋಂಕು ತಡೆಗೆ ಇನ್ನಿಲ್ಲದ ಕಸರತ್ತಿಗೆ ಕೈ ಹಾಕಿವೆ.
ಹಲವು ರಾಜ್ಯಗಳಲ್ಲಿ ಲಾಕ್ಡೌನ್ ಸೇರಿದಂತೆ ರಾತ್ರಿ ಕರ್ಫ್ಯೂ ಜಾರಿ ಮಾಡಿ ಸೋಂಕು ಕಡಿಮೆಮಾಡಲು ಹರಸಾಹಸ ನಡೆಸಿದ ಫಲವೇ ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲಿ ಕಡಿತವಾಗುತ್ತಿದೆ.
ದೇಶದಲ್ಲಿ ಸರಿ ಸುಮಾರು ೫೪ ದಿನಗಳ ಬಳಿಕ ಅತಿಕಡಿಮೆ ಸೋಂಕು ಮತ್ತು ಸಾವಿನ ಪ್ರಕರಣ ದೃಢಪಟ್ಟಿದೆ.
೧.೫೨ಲಕ್ಷಮಂದಿಗೆ ಸೋಂಕು:
ದೇಶದಲ್ಲಿ ಕಳೆದ ೨೪ ಗಂಟೆಗಳಲ್ಲಿ ೧,೫೨,೭೩೪ ಮಂದಿಗೆ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು, ಇದೇ ಅವಧಿಯಲ್ಲಿ ೩,೧೨೮ ಮಂದಿ ಸಾವನ್ನಪ್ಪಿದ್ದಾರೆ ಸರಿಸುಮಾರು ಎರಡು ತಿಂಗಳ ಬಳಿಕ ಅತಿ ಕಡಿಮೆ ಜನಸಂಖ್ಯೆ ಇದಾಗಿದೆ.

ಇದೇ ಅವಧಿಯಲ್ಲಿ ೨,೩೮,೦೨೨ ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ

ಇಂದು ಬೆಳಗ್ಗೆ ೮ ಗಂಟೆಯ ಹೊಸದಾಗಿ ದಾಖಲಾಗಿರುವ ಕೊರೊನಾ ಸೋಂಕು ಸಂಖ್ಯೆ ಸೇರಿದಂತೆ ಇಲ್ಲಿಯತನಕ ೨,೮೦,೪೭,೫೩೪ ಮಂದಿಗೆ ಏರಿಕೆಯಾಗಿದೆ. ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ ೨,೫೬,೯೨,೩೪೨ಯಲ್ಲಿ ಗಣನೀಯ ಏರಿಕೆ ಕಂಡಿದೆ.

ದೇಶದಲ್ಲಿ ಇದುವರೆಗೂ ಸೋಂಕಿನಿಂದ ೩,೨೯,೧೦೦ ಸಾವನ್ನಪ್ಪಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ಕುಸಿದ ಸಕ್ರಿಯ ಪ್ರಕರಣ

ದೇಶದಲ್ಲಿ ದಿನನಿತ್ಯ ಚೇತರಿಕೆ ಪ್ರಮಾಣ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ಕುಸಿತ ಕಂಡಿದೆ.

ಸದ್ಯ ದೇಶದಲ್ಲಿ ೨೦,೨೬,೦೯೨ ಸಕ್ರಿಯ ಪ್ರಕರಣಗಳಿವೆ.
ಇದುವರೆಗೆ ೨೧,೩೧,೫೪,೧೨೯ ಮಂದಿಗೆ ಲಸಿಕೆ ಹಾಕಿರುವುದಾಗಿ ಆರೋಗ್ಯ ಸಚಿವಾಲಯ ತಿಳಿಸಿದೆ.

೯೧.೨೫ರಷ್ಟು ಚೇತರಿಕೆ
ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿನ ಚೇತರಿಕೆ ಪ್ರಮಾಣ ಹೆಚ್ಚಾಗುತ್ತಿರುವುದು ಹಿನ್ನೆಲೆಯಲ್ಲಿ ದೇಶದಲ್ಲಿ ಒಟ್ಟಾರೆ ಸೋಂಕಿತರ ಚೇತರಿಕೆ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದೆ.
ದೇಶದಲ್ಲಿ ಕಳೆದ ಎರಡು-ಮೂರು ವಾರಗಳಲ್ಲಿ ಸೋಂಕಿನ ಸಂಖ್ಯೆಗಿಂತ ಸರಾಸರಿ ಪ್ರತಿದಿನ ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಚೇತರಿಕೆಯ ಆಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿಯ ತನಕ ದೇಶದಲ್ಲಿ ಒಟ್ಟಾರೆ ಚೇತರಿಕೆ ಪ್ರಮಾಣ ೯೧.೨೫ ಕ್ಕೆ ಏರಿಕೆಯಾಗಿದೆ.
ದೇಶದ ಒಟ್ಟಾರೆ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಶೇ. ೭.೫೮ ರಷ್ಟು ಇದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ