ಸೋಂಕು ಶೇ5ಕ್ಕಿಳಿದರೆ ಅನ್‌ಲಾಕ್

ಬೆಂಗಳೂರು,ಜೂ.೫- ರಾಜ್ಯದಲ್ಲಿ ಕೊರೊನಾ ಸೋಂಕಿನ ಪಾಸಿಟಿವಿಟಿ ದರ ಶೇ. ೫ಕ್ಕೆ ಇಳಿದ ನಗರ ಪ್ರದೇಶ ಮತ್ತು ಜಿಲ್ಲೆಗಳಲ್ಲಿ ಮಾತ್ರ ಅನ್‌ಲಾಕ್ ಪ್ರಕ್ರಿಯೆಗಳು ಆರಂಭವಾಗುತ್ತವೆ ಎಂದು ಹೇಳುವ ಮೂಲಕ ಶೇ. ೫ಕ್ಕಿಂತ ಪಾಸಿಟಿವಿಟಿ ದರ ಹೆಚ್ಚಿರುವ ಜಿಲ್ಲೆಗಳಲ್ಲಿ ಕಠಿಣ ನಿರ್ಬಂಧಗಳನ್ನು ಮುಂದುವರೆಸುವ ಸುಳಿವನ್ನು ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ್ದಾರೆ.
ಕೊರೊನಾ ೨ನೇ ಅಲೆಯ ಕೋವಿಡ್ ಪ್ಯಾಕೇಜ್‌ನಲ್ಲಿ ಕಟ್ಟಡ ಕಾರ್ಮಿಕರಿಗೆ ಪ್ರಕಟಿಸಿರುವ ಪರಿಹಾರ ಹಣವನ್ನು ಅವರ ಖಾತೆಗೆ ನೇರವಾಗಿ ಜಮಾ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಂಕಿನ ಪಾಸಿಟಿವಿಟಿ ದರ ಶೇ. ೫ಕ್ಕೆ ಇಳಿದರೆ ಮಾತ್ರ ಲಾಕ್‌ಡೌನ್ ನಿಯಮಗಳನ್ನು ಸಡಿಲಿಸುವ ಬಗ್ಗೆ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಅವರು ಹೇಳಿದರು.
ಸದ್ಯ ರಾಜ್ಯದೆಲ್ಲೆಡೆ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ. ಲಾಕ್‌ಡೌನ್ ಮುಗಿಯುವ ಹೊತ್ತಿಗೆ ಸೋಂಕಿನ ಪಾಸಿಟಿವಿಟಿ ದರ ಶೇ. ೫ಕ್ಕಿಂತ ಕಡಿಮೆಯಾಗುವ ಜಿಲ್ಲೆಗಳಲ್ಲಿ ಲಾಕ್‌ಡೌನ್ ನಿಬಂಧಗಳನ್ನು ಸಡಿಲಿಸಿ ಯಾವುದಕ್ಕೆ ರಿಯಾಯಿತಿಗಳನ್ನು ನೀಡಬೇಕು ಎಂಬುದನ್ನು ಚರ್ಚಿಸಿ ತೀರ್ಮಾನ ಮಾಡುವುದಾಗಿ ಹೇಳಿದರು.
ಲಾಕ್‌ಡೌನ್ ಮುಗಿದ ನಂತರವೂ ಸೋಂಕಿನ ಪಾಸಿಟಿವಿಟಿ ದರ ಶೇ. ೫ಕ್ಕೆ ಬರದಿದ್ದರೆ ಅಂತಹ ಜಿಲ್ಲೆಗಳಲ್ಲಿ ಕಠಿಣ ನಿರ್ಬಂಧಗಳನ್ನು ಮುಂದುವರೆಸುವ ಸುಳಿವನ್ನು ಮುಖ್ಯಮಂತ್ರಿಗಳು ನೀಡಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ತೀರ್ಮಾನ
ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ನಡೆಸುವ ಬಗ್ಗೆ ವ್ಯಕ್ತವಾಗಿರುವ ವಿರೋಧ ಎಲ್ಲವನ್ನೂ ಗಮನಿಸಿದ್ದೇನೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಇರುವುದು ಜುಲೈನಲ್ಲಿ. ಆಗ ಕೊರೊನಾ ಸ್ಥಿತಿಗತಿಯನ್ನು ನೋಡಿಕೊಂಡು ಯಾರಿಗೂ ತೊಂದರೆಯಾಗದಂತೆ ಸೂಕ್ತ ತೀರ್ಮಾನ ಮಾಡುವುದಾಗಿ ಹೇಳಿದರು.
ತೆರಿಗೆ ಇಳಿಕೆ ಇಲ್ಲ
ಪೆಟ್ರೋಲ್-ಡೀಸಲ್ ದರಗಳು ಏರಿಕೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸ್ಥಳೀಯ ತೆರಿಗೆಗಳನ್ನು ಇಳಿಕೆ ಮಾಡುವ ಯಾವುದೇ ಪ್ರಸ್ತಾಪ ಇಲ್ಲ ಎಂದರು.
ಸಂಜೆ ತೀರ್ಮಾನ
ಮೈಸೂರಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ನಡುವಿನ ಜಟಾಪಟಿ ಸಂಬಂಧ ಮುಖ್ಯಕಾರ್ಯದರ್ಶಿ ರವಿಕುಮಾರ್ ಇಂದು ಬೆಳಿಗ್ಗೆ ತಮ್ಮನ್ನು ಭೇಟಿ ಮಾಡಿ ವಿವರ ನೀಡಿದ್ದಾರೆ. ಸಂಜೆ ಒಂದು ತೀರ್ಮಾನ ಕೈಗೊಳ್ಳುತ್ತೇನೆ ಎಂದರು.

ಕೋವಿಡ್ ೨ನೇ ಅಲೆಯಿಂದ ಬಾಧಿತರಾಗಿರುವವರಿಗೆ ರಾಜ್ಯಸರ್ಕಾರ ಪ್ರಕಟಿಸಿರುವ ಪ್ಯಾಕೇಜ್‌ನ್ನು ಪರಿಹಾರ ನೀಡಿಕೆ ಪ್ರಕ್ರಿಯೆಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಚಾಲನೆ ನೀಡಿದರು.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿಂದು ಕಟ್ಟಡ ಕಾರ್ಮಿಕರ ಖಾತೆಗಳಿಗೆ ತಲಾ ೩ ಸಾವಿರ ರೂ. ಪರಿಹಾರ ಹಣವನ್ನು ನೇರ ನಗದು ಹಣ ವರ್ಗಾವಣೆ ಮೂಲಕ ಜಮಾ ಮಾಡಿ ಪ್ಯಾಕೇಜ್ ಪರಿಹಾರ ವಿತರಣೆಗೆ ಚಾಲನೆ ನೀಡಿದರು.
ರಾಜ್ಯದ ೨೫ ಲಕ್ಷ ಕಟ್ಟಡ ಕಾರ್ಮಿಕರಿಗೆ ತಲಾ ೩ ಸಾವಿರದಂತೆ ಒಟ್ಟಾರೆ ೭೪೯.೫೫ ಕೋಟಿ ಹಣವನ್ನು ಅವರ ಖಾತೆಗೆ ಜಮಾ ಮಾಡಲಾಗುವುದು. ಇಂದು ೪ ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರ ಖಾತೆಗೆ ೧೧೦ ಕೋಟಿ ವರ್ಗಾವಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇದೇ ಸಂದರ್ಭದಲ್ಲಿ ಹೇಳಿದರು.
ಅಸಂಘಟಿತ ಕಾರ್ಮಿಕ ವಲಯದ ಅಕ್ಕ ಸಾಲಿಗರು, ಕಮ್ಮಾರರು, ಚಮ್ಮಾರರು, ಕ್ಷೌರಿಕರು, ಅಗಸರು
, ಅಮಾಲರು, ಚಿಂದಿ ಆಯುವವರು, ಟೈಲರ್, ಗೃಹ ಕಾರ್ಮಿಕರು, ಮೆಕಾನಿಕ್‌ಗಳು, ಕುಂಬಾರರು, ಭಟ್ಟಿ ಕಾರ್ಮಿಕರು ಸೇರಿದಂತೆ ಪ್ಯಾಕೇಜ್ ಘೋಷಣೆಯಾಗಿರುವ ಕಾರ್ಮಿಕರಿಗೆ ಪರಿಹಾರ ಪಡೆಯಲು ಅನುಕೂಲವಾಗುವಂತೆ ಆನ್‌ಲೈನ್ ಅಪ್ಲಿಕೇಶನ್‌ಗೂ ಚಾಲನೆ ನೀಡಲಾಗಿದೆ ಎಂದರು.
ರಾಜ್ಯದಲ್ಲಿ ಕಾರ್ಮಿಕರೂ ಸೇರಿದಂತೆ ಎಲ್ಲರಿಗೂ ಲಸಿಕೆ ಅಭಿಯಾನ ನಡೆದಿದೆ. ನಿನ್ನೆಯವರೆಗೆ ೧ ಕೋಟಿ ೪೭ ಸಾವಿರ ಡೋಸ್ ಲಸಿಕೆ ನೀಡಲಾಗಿದೆ ಎಂದು ಹೇಳಿದರು.