ಸೋಂಕು ಮೂರುಪಟ್ಟು ಹೆಚ್ಚಳ : ಆತಂಕ

ನವದೆಹಲಿ, ಜೂ.೧೦- ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಪ್ರತಿನಿತ್ಯ ಕೊರೊನಾ ಸಾವಿನ ಸಂಖ್ಯೆ ೨ರಿಂದ ೩ ಸಾವಿರ ಆಜುಬಾಜಿನಲ್ಲಿ ದಾಖಲಾಗುತ್ತಿದ್ದ ಪ್ರಮಾಣ ಇದೀಗ ಎರಡರಿಂದ ಮೂರು ಪಟ್ಟು ಹೆಚ್ಚಾಗಿದೆ.
ಕಳೆದ ೨೪ ಗಂಟೆಯ ಅವಧಿಯಲ್ಲಿ ೬,೧೪೮ ಮಂದಿ ಸಾವನ್ನಪ್ಪುವ ಮೂಲಕ ಸಾವಿನ ಸಂಖ್ಯೆಯಲ್ಲಿ ದಾಖಲೆ ಬರೆದಿದೆ. ಈ ಮೂಲಕ ವಿಶ್ವದಲ್ಲಿ ಒಂದೇ ದಿನ ಹೆಚ್ಚು ಮಂದಿ ಸಾವನ್ನಪ್ಪಿದ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನ ಪಡೆದಿದೆ.
ದೇಶದಲ್ಲಿ ಒಟ್ಟಾರೆ ದಾಖಲಾಗಿರುವ ಸಾವಿನ ಸಂಖ್ಯೆ ಪೈಕಿ ಬಿಹಾರ ರಾಜ್ಯದಲ್ಲಿ ಒಂದೇ ದಿನ ೫,೫೦೦ ಮಂದಿ ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಆ ನಂತರ ೩,೯೫೧ ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ಇದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.ಇದರಿಂದಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ
ಅಮೆರಿಕ ಮತ್ತು ಬ್ರೆಜಿಲ್‌ನಲ್ಲಿ ಕಳೆದ ವರ್ಷ ಕೊರೊನಾ ಸೋಂಕು ಗರಿಷ್ಠವಾಗಿದ್ದ ಸಂದರ್ಭದಲ್ಲಿ ನಾಲ್ಕರಿಂದ ಐದು ಸಾವಿರ ಮಂದಿ ನಿತ್ಯ ಸೋಂಕಿನಿಂದ ಸಾವನ್ನಪ್ಪುತ್ತಿದ್ದರು. ಇದೀಗ ಭಾರತ ಎಲ್ಲಾ ದಾಖಲೆಗಳನ್ನು ಹಿಂದಿಕ್ಕಿದೆ. ಇದು ಸಹಜವಾಗಿಯೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಮತ್ತಷ್ಟು ಆತಂಕಕ್ಕೆ ಸಿಲುಕುವಂತೆ ಮಾಡಿದೆ.
ಇದುವರೆಗೂ ಅಮೆರಿಕದಲ್ಲಿ ಕೊರೊನಾ ಸೋಂಕಿನಿಂದ ೬,೧೩,೪೯೪ ಮಂದಿ ಮೃತಪಟ್ಟಿದ್ದಾರೆ. ಬ್ರೆಜಿಲ್‌ನಲ್ಲಿ ೪,೭೯,೭೯೧ ಮಂದಿ ಸಾವನ್ನಪ್ಪಿ ಎರಡನೇ ಸ್ಥಾನದಲ್ಲಿದ್ದರೆ ಭಾರತದಲ್ಲಿ ಇದುವರೆಗೂ ಸೋಂಕಿನಿಂದ ೩,೫೯,೬೯೫ ಮಂದಿ ಸಾವನ್ನಪ್ಪಿ ವಿಶ್ವದಲ್ಲಿ ಸಾವನ್ನಪ್ಪಿದ ಸಂಖ್ಯೆಯ ಪೈಕಿ ಭಾರತ ಮೂರನೇ ಸ್ಥಾನದಲ್ಲಿದೆ.

೯೪ ಸಾವಿರ ಮಂದಿಗೆ ಸೋಂಕು:

ದೇಶದಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೯೪,೦೫೨ ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ ಜೊತೆಗೆ ೬೧೪೮ ಮಂದಿ ಸಾವನ್ನಪ್ಪುವ ಮೂಲಕ ಕೇಂದ್ರ ರಾಜ್ಯ ಸರ್ಕಾರಗಳು ಬೆಚ್ಚಿಬೀಳುವಂತೆ ಮಾಡಿದೆ.
ಇಂದು ಹೊಸದಾಗಿ ೧,೫೧,೩೬೭ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಇಂದು ಬೆಳಿಗ್ಗೆ ೮ ಗಂಟೆ ತನಕ ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸಂಖ್ಯೆ ಸೇರಿದಂತೆ, ದೇಶದಲ್ಲಿ ಇಲ್ಲಿಯತನಕ ಸೋಂಕಿನ ಒಟ್ಟಾರೆ ಸಂಖ್ಯೆ ೨,೯೧,೮೩,೧೨೧ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ ೨,೭೬,೫೫,೪೯೩ ಹೆಚ್ಚಾಗಿದೆ. ಇಂದು ದಾಖಲೆ ಪ್ರಮಾಣದಲ್ಲಿ ಸೋಂಕಿತರ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ೩,೫೯,೬೭೬ ಮಂದಿಗೆ ಏರಿಕೆಯಾಗಿದೆ.

ಕುಸಿದ ಸಕ್ರಿಯ ಪ್ರಕರಣ:
ದೇಶದಲ್ಲಿ ಪ್ರತಿನಿತ್ಯ ಕೊರೊನಾ ಸೋಂಕಿನ ಚೇತರಿಕೆ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಕುಸಿತ ಕಂಡಿದೆ.
ಸದ್ಯ ದೇಶದಲ್ಲಿ ೧೧,೬೭,೯೫೨ ಮಂದಿಯಲ್ಲಿ ಸಕ್ರಿಯ ಪ್ರಕರಣಗಳಿವೆ. ಕಳೆದ ಕೆಲವು ದಿನಗಳಿಂದ ನಿತ್ಯ ಚೇತರಿಕೆ ಪ್ರಮಾಣ ಹೆಚ್ಚಾಗುತ್ತಿದೆ
ದೇಶದಲ್ಲಿ ಇದುವರೆಗೆ ೨೩,೯೦,೫೮,೩೬೦ ಮಂದಿಗೆ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
೧ ಲಕ್ಷಕ್ಕೂ ಕಡಿಮೆ ಪ್ರಕರಣ
ದೇಶದಲ್ಲಿ ಕಳೆದ ಮೂರು ದಿನಗಳಿಂದ ಸತತವಾಗಿ ಒಂದು ಲಕ್ಷಕ್ಕೂ ಕಡಿಮೆ ಸೋಂಕಿನ ಪ್ರಕರಣ ದಾಖಲಾಗುತ್ತಿದೆ.
ಅದರಲ್ಲೂ ಕಳೆದ ೨ದಿನಗಳ ಈಚೆಗೆ ಸೋಂಕಿನ ಪ್ರಮಾಣ ತುಸು ಏರಿಕೆ ಕಂಡಿದೆ ಆದರೂ ಮೂರುದಿನಗಳಿಂದ ಸೋಂಕು ಒಂದು ಲಕ್ಷಕ್ಕೂ ಒಳಗೆ ದಾಖಲಾಗಿರುವುದು ಆಶಾದಾಯಕ ಬೆಳವಣಿಗೆ ಎಂದು ಕೇಂದ್ರ ಸರಕಾರ ತಿಳಿಸಿದೆ.