ಸೋಂಕು ಬರದಂತೆ ಎಚ್ಚರಿಕೆ ವಹಿಸಿ

ನವದೆಹಲಿ, ಸೆ.೨೬- ದೇಶದಲ್ಲಿ ಟೀಮ್ ಇಂಡಿಯಾ ಮಾದರಿಯಲ್ಲಿ ಪ್ರತಿದಿನ ಕೋವಿಡ್ ವಿರುದ್ಧದ ಹೋರಾಟ ಮುಂದುವರಿದಿದೆ.ಹೀಗಾಗಿ ಇದುವರೆಗೂ ಯಾರೂ ಲಸಿಕೆ ಪಡೆದಿಲ್ಲವೋ ಅವರು ಲಸಿಕೆ ಪಡೆಯಿರಿ ಎಂದು ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ಕರೆ ನೀಡಿದ್ದಾರೆ.
ದೇಶದಲ್ಲಿ ಸಾಲು ಸಾಲು ಹಬ್ಬಗಳು ಬರುತ್ತವೆ .ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಸಲ್ಲದು. ಸುರಕ್ಷಾ ಚಕ್ರದ ನಿಯಮ ಮುರಿಯದೆ ಕೋವಿಡ್ ಮಾರ್ಗಸೂಚಿಗಳನ್ನು ಎಲ್ಲರೂ ತಪ್ಪದೇ ಪಾಲಿಸುವ ಮೂಲಕ ಸೋಂಕು ಬರದಂತೆ ಎಚ್ಚರಿಕೆ ವಹಿಸೋಣ ಎಂದು ಕಿವಿಮಾತು ಹೇಳಿದ್ದಾರೆ
ಆಕಾಶವಾಣಿಯಲ್ಲಿ ಮೂಡಿಬರುವ ಮನ್ ಕಿ ಬಾತ್ ೮೧ ನೇ ಸರಣಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕೋವಿಡ್ ವಿರುದ್ಧದ ಹೋರಾಟ ಮುಂದುವರಿಸಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮತ್ತು ಉದಾಸೀನ ಭಾವನೆ ತರಬೇಡಿ ಎಂದು ಅವರು ಮನವಿ ಮಾಡಿದ್ದಾರೆ.

ದೇಶದಲ್ಲಿ ಇದುವರೆಗೂ ಯಾರು ಕೋರೋನಾ ತಡೆಯ ಲಸಿಕೆ ಪಡೆದಿಲ್ಲವೋ ಅವರು ತಪ್ಪದೆ ಲಸಿಕೆ ಪಡೆಯಿರಿ. ಸೋಂಕಿನಿಂದ ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಿ ಎಂದು ಅವರು ಕೂಡ ಇದೇ ಸಂದರ್ಭದಲ್ಲಿ ಕಿವಿಮಾತು ಹೇಳಿದ್ದಾರೆ.

ದೇಶದಲ್ಲಿ ದಿನದಿಂದ ದಿನಕ್ಕೆ ಲಸಿಕೆ ನೀಡಿಕೆಯ ಪ್ರಮಾಣ ಹೆಚ್ಚು ಮಾಡಲಾಗುತ್ತದೆ ಇದುವರೆಗೂ ವಿಶ್ವದಲ್ಲಿ ಯಾವುದೇ ದೇಶ ನೀಡದಷ್ಟು ಲಸಿಕೆಯನ್ನು ಭಾರತದಲ್ಲಿ ನೀಡಲಾಗಿದೆ.ಹೀಗಿದ್ದರೂ ಇದುವರೆಗೂ ಯಾರೂ ಲಸಿಕೆ ಪಡೆದಿಲ್ಲ ಅವರು ತಪ್ಪದೇ ಲಸಿಕೆ ಪಡೆಯಿರಿ ಟೀಮ್ ಇಂಡಿಯಾ ಮಾದರಿಯಲ್ಲಿ ಸೋಂಕಿನ ವಿರುದ್ಧ ಹೋರಾಟ ಮುಂದುವರೆಸೋಣ ಎಂದು ಅವರು ಹೇಳಿದ್ದಾರೆ.

ಕೊರೊನಾ ಸೋಂಕಿಗೆ ಲಸಿಕೆ ಪಡೆದ ನಂತರವೂ ಲಸಿಕೆ ಪಡೆದಿದ್ದೇವೆ ಎನ್ನುವ ಉದಾಸೀನ ಭಾವನೆ ಸಲ್ಲದು. ಎಲ್ಲರೂ ತಪ್ಪದೇ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ತಿಳಿಸಿದ್ದಾರೆ

ನದಿ ದಿನ ಆಚರಣೆಗೆ ಕರೆ

ನದಿಗಳು ದೇಶದಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಹೀಗಾಗಿ ದೇಶದ ಜನರು ವರ್ಷಕ್ಕೆ ಒಮ್ಮೆಯಾದರೂ “ನದಿ ಉತ್ಸವ” ನಡೆಸಿ. ಈ ಮೂಲಕ ನದಿಗಳನ್ನು ಮಾಲಿನ್ಯ ಮುಕ್ತ ಮಾಡಿ ಎಂದು ಕರೆ ನೀಡಿದ್ದಾರೆ.

ಇಂದು ವಿಶ್ವ ನದಿ ದಿನ. ಈ ಹಿನ್ನೆಲೆಯಲ್ಲಿ ನದಿಗಳ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡೋಣ. ನದಿಗಳ ಉಳಿವಿಗೆ ಕ್ರಮ ಕೈಗೊಳ್ಳೋಣ.ಮಹಾತ್ಮ ಗಾಂಧೀಜಿಯವರು ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿದ್ದರು ಹೀಗಾಗಿ ಸ್ವಚ್ಛತೆಯನ್ನು ಜನಾಂದೋಲನವಾಗಿ ಮಾಡೋಣ ಎಂದು ಹೇಳಿದ್ದಾರೆ

ನಮಾಮಿ ಗಂಗೆ ಯೋಜನೆ ಜನರ ಸಹಭಾಗಿತ್ವ ದಿಂದಾಗಿ ಯಾವುದೇ ಅಡ್ಡಿ ಆತಂಕಗಳಿಲ್ಲದೆ ನಡೆದುಕೊಂಡು ಹೋಗುತ್ತಿದೆ. ತಮಗೆ ಬಂದಿರುವ ಉಡುಗೊರೆಗಳನ್ನು ಇ- ಹರಾಜಿನ ಮೂಲಕ ಮಾರಾಟ ಮಾಡಿ ಅದರಿಂದ ಬರುವ ಹಣವನ್ನು ನಮಾಮಿ ಗಂಗೆ ಯೋಜನೆಗೆ ಬಳಸಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಉತ್ತರ ಪ್ರದೇಶ ಬಿಹಾರ ಸೇರಿದಂತೆ ಪೂರ್ವ ರಾಜ್ಯಗಳಲ್ಲಿ ಛಾತ್ ಹಬ್ಬ ಬರುತ್ತದೆ ಹೀಗಾಗಿ ನದಿಗಳ ಸ್ವಚ್ಛತೆಗೆ ಮತ್ತು ಮಾಲಿನ್ಯ ಮುಕ್ತ ಮಾಡಲು ಎಲ್ಲರ ಸಂಘಟಿತ ಹೋರಾಟ ಮತ್ತು ಸಹಕಾರ ಅಗತ್ಯ ಎಂದು ಅವರು ಹೇಳಿದ್ದಾರೆ

ಖಾದಿ ಉತ್ಪನ್ನ ಖರೀದಿಸಿ:

ಅಕ್ಟೋಬರ್ ೨ ರಂದು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಹುಟ್ಟು ಹಬ್ಬದಲ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಖಾದಿ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ಖರೀದಿ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಇದೇ ಸಂದರ್ಭದಲ್ಲಿ ದೇಶದ ಜನರಿಗೆ ಕರೆ ನೀಡಿದ್ದಾರೆ.

ಖಾದಿ ಉತ್ಪನ್ನಗಳನ್ನು ಖರೀದಿ ಮಾಡುವುದರಿಂದ ಅದರಲ್ಲಿ ತೊಡಗಿಸಿಕೊಂಡಿರುವವರು ಮತ್ತು ಅವಲಂಬಿತರಿಗೆ ಅನುಕೂಲವಾಗಲಿದೆ ಜೊತೆಗೆ ಉತ್ಪನ್ನಗಳ ಬಳಕೆಗೆ ನೀಡಿದಂತಾಗಿದೆ ಎಂದು ತಿಳಿಸಿದ್ದಾರೆ.

ದೇಶವಾಸಿಗಳು ಸ್ಪೂರ್ತಿ ಪಡೆಯುವಂತಾಗಲು ಸಂಸ್ಕೃತಿ ಸಮರ್ಪಣೆ ಮತ್ತು ವರ್ತನೆ ಮನೋಭಾವವನ್ನು ಬದಲಾವಣೆ ಮಾಡಿಕೊಳ್ಳೋಣ ಎಂದು ಅವರು ಹೇಳಿದ್ದಾರೆ.

೩೫೦ ಕೋಟಿ ವಹಿವಾಟು:

ಡಿಜಿಟಲ್ ಮೂಲಕ ಆಗಸ್ಟ್ ತಿಂಗಳಲ್ಲಿ ೩೫೦ ಕೋಟಿ ರೂಪಾಯಿ ವಹಿವಾಟು ನಡೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಸಿಯಾಚಿನ್ ಹಿಮಪಾತ ದ ಬಳಿ ೮ಮಂದಿ ದಿವ್ಯಾಂಗರು ಟ್ರಕಿಂಗ್ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ ಅವರಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

೨೦೧೮ರ ಸೆಪ್ಟಂಬರ್ ೨೫ರಂದು ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಆಯುಷ್ಮಾನ್ ಭಾರತ ಯೋಜನೆ ಯನ್ನು ಕೇಂದ್ರ ಸರ್ಕಾರ ಜಾರಿಗೆ ತರಲಾಗಿದ್ದು ಇದರಿಂದ ಕೋಟ್ಯಂತರ ಜನರಿಗೆ ಅನುಕೂಲವಾಗಿದೆ ಜನರು ಇದರ ಲಾಭ ಪಡೆದುಕೊಳ್ಳಿ ಎಂದು ಮನವಿ ಮಾಡಿದ್ದಾರೆ