ಸೋಂಕು ಬಂದ ನಂತರ ಪರಿತಪಿಸುವುದಕ್ಕಿಂತ ಮುಂಜಾಗ್ರತೆ ವಹಿಸುವದು ಮುಖ್ಯ: ಪ್ರಿಯದರ್ಶಿನಿ ಕನ್ನಾಳ

ಮುಧೋಳ, ಜೂ.11-ಕೋವಿಡ್-19 ಎರಡನೇ ಅಲೆ ಭೀಕರವಾಗಿದೆ. ಜನರಿಗೆ ಅದರ ಗಂಭೀರತೆ ಅರ್ಥವಾಗುತ್ತಿಲ್ಲ. ಸೋಂಕು ಬಂದ ನಂತರ ಪರಿತಪಿಸುವುದಕ್ಕಿಂತ ಅದು ಬಾರದಂತೆ ಮುಂಜಾಗ್ರತೆ ವಹಿಸುವದು ಮುಖ್ಯ ಎಂದು ಕಿವಿಮಾತು ಹೇಳುತ್ತಾರೆ ಮುಧೋಳದ ಸರ್ಕಾರಿ ಆಸ್ಪತ್ರೆಯ ಶುಶ್ರೂಷಕಿ ಪ್ರೀಯದರ್ಶಿನಿ ಕನ್ನಾಳ.
ಆಸ್ಪತ್ರೆಯ ಕೋವಿಡ್ ವಾರ್ಡಿನಲ್ಲಿ ಕೆಲಸ ಮಾಡುತ್ತಿರುವ ಅವರು ತಮ್ಮ ಕುಟುಂಬವನ್ನು ಬಿಟ್ಟು ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವರು ನನಗೂ ಭಯ ಇದೆ ಆದರೂ ನನ್ನ ಕರ್ತವ್ಯ ನಾನು ಮಾಡಲೇಬೇಕು. ಹೀಗಾಗಿ ನನ್ನಿಂದಾಗಿ ಕುಟುಂಬದವರಿಗೆ ತೊಂದರೆಯಾಗಬಾರದು ಎಂದು ಎಚ್ಚರವಹಿಸಿ ಅವರಿಂದ ದೂರವಿದ್ದೇನೆ ಎನ್ನುತ್ತಾರೆ.
ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ರವರೆಗೆ ಮಧ್ಯಾಹ್ನ 2 ರಿಂದ ರಾತ್ರಿ 8 ಗಂಟೆಯವರೆಗೆ ಹಾಗೂ ರಾತ್ರಿ 8 ರಿಂದ ಬೆಳಿಗ್ಗೆ 8 ರವರೆಗೆ ಕೆಲಸದ ಅವಧಿ ಬದಲಾಗುತ್ತಿರುತ್ತದೆ. ಕರ್ತವ್ಯ ಮುಗಿಸಿ ಮನೆಗೆ ಹೋಗಿ ಅಡುಗೆ ಮಾಡಿಕೊಳ್ಳಬೇಕು. ಕರ್ತವ್ಯದಲ್ಲಿದ್ದಾಗ ಮನೆಯವರ ಹತ್ತಿರ ಮಾತನಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳುತ್ತಾರೆ.
ಪ್ರತಿಯೊಬ್ಬರು ಮುನ್ನೆಚ್ಚರಿಕೆ ವಹಿಸಿ ಎರಡೇರಡು ಮಾಸ್ಕ ಧರಿಸಿ, ಕೈ ಸ್ಯಾನಿಟೈಸ್ ಮಾಡಿಕೊಳ್ಳಿ, ಅನಗತ್ಯವಾಗಿ ಹೊರಗೆ ಓಡಾಟ ಮಾಡಬೇಡಿ ಎಂದು ಪ್ರೀಯದರ್ಶಿನಿ ಕನ್ನಾಳ ಸಾರ್ವಜನಿಕರಿಗೆ ಸಲಹೆ ನೀಡುತ್ತಾರೆ.
ಕೋವಿಡ್-19ರ ಎರಡನೇ ಅಲೆಯಲ್ಲಿ ಮುಧೋಳದ ಸರ್ಕಾರಿ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಾಧಿಕಾರಿಗಳಾದ ಡಾ.ಬಿ.ವಿ.ಬಿ. ಪಾಟೀಲ್, ಮುಖ್ಯ ತಜ್ಞ ವೈದ್ಯರಾದ ಡಾ. ದೀಪಕ ಮಾಸಾರೆಡ್ಡಿ, ರಾಘವೇಂದ್ರ ನಾಲತವಾಡ, ಶ್ರೇಣಿ ನವಲಗಿ, ಸ್ಟಾಪ್ ನರ್ಸಗಳಾದ ಮೀನಾಕ್ಷಿ ಹಿರೇಮಠ, ಮಹಾದೇವಿ ಪಾಟೀಲ್, ಪಲ್ಲವಿ ಹಿರೇಗೌಡರ, ಮಲ್ಲಿಕಾರ್ಜುನ ಮೇತ್ರಿ, ವೆಂಕಟೇಶ ಪತಂಗಿ, ಶಬಾನಾ ಬಾಗಾಯತ, ಪ್ರೀಯದರ್ಶಿನಿ ಕನ್ನಾಳ, ವಿರೇಶ ಕೊಟ್ಟಲಮಠ, ಸಾವಿತ್ರಿ ಹುಳಿಪಲ್ಲೆ, ಸಿಬ್ಬಂದಿಗಳಾದ ಸೈದು, ಬಸವರಾಜ, ಮಂಜುನಾಥ, ಜಾಫರ, ವಿಠ್ಠಲ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.