ಸೋಂಕು ನೆಗೆಟಿವ್ ಬಂದರೂ ಶ್ವಾಸಕೋಶ ಎಕ್ಸ್‌ರೆ ಅಗತ್ಯ


ಬೆಂಗಳೂರು, ಏ. ೨೫- ಕೊರೊನಾದ ಆರ್‌ಟಿಪಿಸಿಆರ್ ವರದಿ ನೆಗೆಟಿವ್ ಬಂದರೂ ಸೋಂಕು ಶ್ವಾಸಕೋಶಕ್ಕೆ ತಗುಲಿರುವ ಸಾಧ್ಯತೆ ಇರುತ್ತದೆ. ಹಾಗಾಗಿ ನೆಗೆಟಿವ್ ಬಂದರೂ ಶ್ವಾಸಕೋಶ ಎಕ್ಸರೇ ಮಾಡುವುದು ಅವಶ್ಯ ಎಂದು ವಿಕ್ಟೋರಿಯಾ ಆಸ್ಪತ್ರೆಯ ಕೋವಿಡ್ ಉಸ್ತುವಾರ ಡಾ. ಶಿವಕುಮಾರ್ ಹೇಳಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಡ್‌ಗಳಿಲ್ಲ, ಸರಿಯಾಗಿ ಚಿಕಿತ್ಸೆ ಆಗುತ್ತಿಲ್ಲ ಎಂದು ಕೊರೊನಾ ಸೋಂಕಿತರ ಸಂಬಂಧಿಗಳು ವೈದ್ಯರೊಂದಿಗೆ ವಾಗ್ವಾದ, ಮಾತಿನ ಚಕಮಕಿ ನಡೆಸಿದ ಸಂದರ್ಭದಲ್ಲಿ ಸಂಬಂಧಿಗಳನ್ನು ಸಮಾಧಾನಪಡಿಸಿ ಮಾತನಾಡಿದ ಅವರು, ಇದು ಹಣೆ ಬರಹ, ಯಾರ ಕೈಯಲ್ಲೂ ಇಲ್ಲ. ಎಲ್ಲ ದೇವರ ಲೀಲೆ. ಇದನ್ನು ಅರ್ಥ ಮಾಡಿಕೊಳ್ಳಿ. ನಾವು ರೋಗಿಗಳಿಗೆ ಶಕ್ತಿಮೀರಿ ಚಿಕಿತ್ಸೆ ನೀಡುತ್ತಿದ್ದೇವೆ. ಶ್ವಾಸಕೋಶಕ್ಕೆ ಸೋಂಕು ತಗುಲಿ ವೆಂಟಿಲೇಟರ್ ಅಳವಡಿಸಿರುವ ರೋಗಿಗಳು ಉಳಿಯುವುದು ಕಷ್ಟ ಎಂದರು.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರಭಾವಕ್ಕೆ ಮಣಿದು ಬೆಡ್ ನೀಡುತ್ತಿಲ್ಲ. ಮೊದಲು ಬಂದವರಿಗೆ ಆದ್ಯತೆ ಮೇರೆಗೆ ಬೆಡ್ ನೀಡಿದ್ದೇವೆ. ಎಷ್ಟೋ ಜನ ಐಎಎಸ್, ಕೆಎಎಸ್, ಪೊಲೀಸ್ ಅಧಿಕಾರಿಗಳು ದೂರವಾಣಿ ಬೆಡ್‌ಗೆ ಬೇಡಿಕೆ ಇಟ್ಟಿದ್ದಾರೆ. ಏನೂ ಮಾಡಲು ಸಾಧ್ಯವಿಲ್ಲ. ದೇವರೇ ಕಾಪಾಡಬೇಕು ಎಂಬ ಅರ್ಥದಲ್ಲಿ ಅವರು ಮಾತನಾಡಿದರು.
ಕೇಂದ್ರ ಸಚಿವರುಗಳು, ಶಾಸಕರುಗಳೇ ಕೊರೊನಾಗೆ ಬಲಿಯಾಗಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲೂ ಯುವ ವೈದ್ಯ ಡಾ. ಸುಹಾಸ್ ಕೋವಿಡ್‌ಗೆ ಬಲಿಯಾದರು. ನಾವು ಏನೂ ಮಾಡಲು ಸಾಧ್ಯವಾಗಲಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಆರ್‌ಟಿಪಿಸಿಆರ್ ನೆಗೆಟಿವ್ ಬಂದಿದೆ ಎಂದು ಸುಮ್ಮನಿರಬೇಡಿ. ಶ್ವಾಸಕೋಶ ಪರೀಕ್ಷೆಗೆ ಒಳಗಾಗಬೇಕು. ಶ್ವಾಸಕೋಶದಲ್ಲಿ ಸೋಂಕು ಹೆಚ್ಚಿದ್ದರೆ ರೋಗಿ ಬದುಕುವುದು ಕಷ್ಟ. ಕೊರೊನಾ ವಿಚಾರದಲ್ಲಿ ಸುಳ್ಳು, ಸತ್ಯ ಎಂದೇನಿಲ್ಲ. ಎಲ್ಲವೂ ಹಣೆ ಬರಹ ಎಂದು ಅವರು ಬೇಸರದಿಂದ ಹೇಳಿದರು.
ವಿಕ್ಟೋರಿಯಾ ಆಸ್ಪತ್ರೆಯಲ್ಲೂ ಶಕ್ತಿಮೀರಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೂ ರೋಗಿಗಳು ಸಾಯುತ್ತಿದ್ದಾರೆ. ಏನು ಮಾಡುವುದು, ಸೋಂಕು ಹೆಚ್ಚಾಗಿ ಶ್ವಾಸಕೋಶಕ್ಕೆ ತಗುಲಿದ್ದರೆ ಬದುಕುವುದು ಕಷ್ಟ. ಹಾಗಾಗಿ ಆರಂಭದಲ್ಲೆ ಸೋಂಕನ್ನು ಪತ್ತೆ ಮಾಡಿ ಚಿಕಿತ್ಸೆ ಪಡೆಯಬೇಕು. ಸೋಂಕು ಉಲ್ಬಣವಾದ ನಂತರ ರೋಗಿಯನ್ನು ಬದುಕಿಸುವುದು ಕಷ್ಟ ಎಂದರು.