ಸೋಂಕು ನೀಯಂತ್ರಣ ಮಾರ್ಗಸೂಚಿಗಳ ಪಾಲನೆಯಾಗುವಂತೆ ನೋಡಿಕೊಳ್ಳಿ

ಗದಗ ಮೇ.3 : ಕೋವಿಡ್ 19 ಸೋಂಕಿನ 2ನೇ ಅಲೆಯು ತೀವ್ರವಾಗಿ ಹರಡುತ್ತಿದ್ದು, ಸರ್ಕಾರ ನೀಡಿದ ಸೋಂಕು ನಿಯಂತ್ರಣ ಮಾರ್ಗಸೂಚಿಗಳ ಸರಿಯಾದ ಪಾಲನೆಯಾಗುವಂತೆ ನೋಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಅವರು ತಿಳಿಸಿದರು.
ಜಿಲ್ಲೆಯ ಮುಳಗುಂದ ಪಟ್ಟಣಕ್ಕೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಭೇಟಿ ನೀಡಿ ಪಟ್ಟಣದ ಪ್ರಮುಖ ಮಾರುಕಟ್ಟೆ ಹಾಗೂ ಬೀದಿಗಳಲ್ಲಿ ಸಂಚರಿಸಿ ಪರಿಸ್ಥಿತಿಯನ್ನು ವೀಕ್ಷಿಸಿದರು. ಸೋಂಕು ನಿಯಂತ್ರಣ ಕ್ರಮಗಳನ್ನು ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಸರಿಯಾಗಿ ಪಾಲಿಸುವ ಬಗ್ಗೆ ನಿಗಾ ವಹಿಸಬೇಕು ಎಂದರು.
ಸಂತೆ ಮಾರುಕಟ್ಟೆಗಳಲ್ಲಿ ಹೆಚ್ಚಾಗಿ ಜನದಟ್ಟಣೆ ಆಗುತ್ತಿರುವುದರಿಂದ ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಹೊಸ ಪರಿಷ್ಕೃತ ಆದೇಶವನ್ನು ಮೇ 2 ರಿಂದ ರಾಜ್ಯ ಸರ್ಕಾರ ಜಾರಿಗೊಳಿಸಿದೆ. ನೂತನ ಆದೇಶದಂತೆ ಸಂತೆ, ವಾರದ ಸಂತೆಗಳನ್ನು ನಿರ್ಬಂಧಿಸಿದೆ. ಇವುಗಳಿಗೆ ಪರ್ಯಾಯವಾಗಿ ಬೆಳಿಗ್ಗೆ 6 ರಿಂದ ಸಂಜೆ 6 ವರೆಗೆ ಹಾಪ್ ಕಾಮ್ಸ್ ಗಳು, ಎಲ್ಲ ರೀತಿಯ ಹಾಲಿನ ಬೂತಗಳು, ತಳ್ಳುವ ಗಾಡಿಗಳಲ್ಲಿ ತರಕಾರಿ ಹಣ್ಣು ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಹಾಗೂ ಎ. ಪಿ. ಎಂ. ಸಿ ಮತ್ತು ದಿನಸಿ ಅಂಗಡಿಗಳನ್ನು ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವಗೆರೆ ತೆರೆಯಲು ಕಾಲಾವಧಿಯನ್ನು ನೀಡಿದೆ. ಈ ನಿಯಮಗಳ ಉಲ್ಲಂಘನೆಗೆ ಅಧಿಕಾರಿಗಳು ಆಸ್ಪದ ನೀಡಬಾರದು ಎಂದು ಸ್ಥಳೀಯ ಮಟ್ಟದಲ್ಲಿರುವ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೋರೊನಾ ಸಂದಿಗ್ದ ಪರಸ್ಥಿತಿಯನ್ನು ದುರುಪಯೋಗ ಆಗದಂತೆ ತರಕಾರಿ, ಹಣ್ಣು ,ದಿನಸಿ ಅಂಗಡಿಗಳ ವ್ಯಾಪಾರಿಗಳು ವ್ಯವಹರಿಸಬೇಕು ಎಂದರು. ಅಂಗಡಿಗಳಲ್ಲಿ ದರ ಪಟ್ಟಿ ಹಾಗೂ ಮಾಸ್ಕ ಕಡ್ಡಾಯವಾಗಿ ಧರಿಸುವ ಬಗ್ಗೆ ಸೂಚನಾ ಫಲಕ ಅಳವಡಿಸುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಮಾತನಾಡಿ, ಸರ್ಕಾರದ ನಿಯಮಾನುಸಾರ ಸಾರ್ವಜನರಿಕರು ವ್ಯಾಪಾರಿಗಳು ವ್ಯವಹರಿಸಬೇಕು. ನಿಗಧಿತ ವೇಳೆಯಲ್ಲಿ ದಿನಸಿ ಖರೀದಿಸಬೇಕು. ನಿಯಮಗಳ ಉಲ್ಲಂಘನೆಯಾದಲ್ಲಿ ದಂಡ ವಿಧಿಸಿ, ಕಾನೂನು ಕ್ರಮ ಜರುಗಿಸಬೇಕು ಎಂದರು.
ನಂತರ ಜಿಲ್ಲಾಧಿಕಾರಿಗಳು ಮುಳಗುಂದದ ಕೆಂಪಿಗೇರಿ ಕೆರೆಗೆ ಬೇಟಿ ನೀಡಿ, ಕೆರೆ ಒತ್ತುವರಿ ತೆರವುಗೊಳಿಸಿರುವುದನ್ನು ಪರಿಶೀಲಿಸಿ ಅಗತ್ಯದ ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಮುಳಗುಂದ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಷಣ್ಮುಕಪ್ಪ ಬಡ್ನಿ, ಸದಸ್ಯ ವಿಜಯ ನಿಲಗುಂದ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ್ ಬೆಂತೂರ ಸೇರಿದಂತೆ ಇತರರು ಇದ್ದರು.