ಸೋಂಕು ನಿಯಮ ಸರ್ಕಾರ ಪರಿಷ್ಕರಣೆ


ನವದೆಹಲಿ,ಮೇ.೫- ಕೋವಿಡ್ ಸೋಂಕು ಕುರಿತ ವೈದ್ಯಕೀಯ ಪರೀಕ್ಷೆಗಿದ್ದ ನಿಯಮವನ್ನು ಕೇಂದ್ರ ಸರ್ಕಾರ ಪರಿಷ್ಕರಿಸಿದೆ. ಈ ಮೂಲಕ ಪರೀಕ್ಷಾ ಪ್ರಯೋಗಾಲಯದ ಮೇಲಿನ ಕೆಲಸದ ಹೊರೆಯನ್ನು ಕಡಿಮೆ ಮಾಡುವುದಕ್ಕೆ ಮುಂದಾಗಿದೆ.
ಹೊಸ ನಿಯಮದ ಪ್ರಕಾರ, ’ಆರೋಗ್ಯವಂತ’ ಅಂತರ್‌ರಾಜ್ಯ ಪ್ರಯಾಣಿಕರು ಮತ್ತು ಅಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ಕೋವಿಡ್ ರೋಗಿಗಳಿಗೆ ಕೋವಿಡ್ ಪರೀಕ್ಷೆ ಅಗತ್ಯವಿಲ್ಲ ಎಂದು ತಿಳಿಸಿದೆ.
ಅಂತರ್ ರಾಜ್ಯದಿಂದ ಪ್ರಯಾಣಿಸುವ ಆರೋಗ್ಯವಂತ ಪ್ರಯಾಣಿಕರ ದೇಶದೊಳಗಿನ ಸಂಚಾರಕ್ಕೆ ಇನ್ನುಮುಂದೆ ಆರ್‌ಟಿ-ಪಿಸಿಆರ್ ಪರೀಕ್ಷೆಯೂ ಬೇಡ. ಈ ಮೂಲಕ ಕೋವಿಡ್ ಪರೀಕ್ಷಾ ಕೇಂದ್ರಗಳ ಕೆಲಸದೊತ್ತಡವೂ ಕಡಿಮೆಯಾಗಲಿದೆ ಎಂದು ಐಸಿಎಂಆರ್ ಶಿಫಾರಸ್ಸು ಆಧರಿಸಿ ಕೇಂದ್ರ ಸರ್ಕಾರ ರಾಜ್ಯಗಳಿಗೆ ಕಳುಹಿಸಿದ ಸುತ್ತೋಲೆಯಲ್ಲಿ ತಿಳಿಸಿದೆ.
ರಾಂಡಮ್ ಅಥವಾ ಆರ್ ಟಿಪಿಸಿಆರ್ ನಿಂದ ಒಮ್ಮೆ ಪಾಸಿಟಿವ್ ಪರೀಕ್ಷೆ ಮಾಡಿರುವ ಯಾವುದೇ ವ್ಯಕ್ತಿಯನ್ನು ಮತ್ತೆ ಆರ್ ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸುವುದು ಬೇಡ. ಕೇಂದ್ರ ಆರೋಗ್ಯ ಸಚಿವಾಲಯದ ಆಸ್ಪತ್ರೆಯಿಂದ ಬಿಡುಗಡೆ ನಿಯಮಗಳಿಗೆ ಅನುಸಾರವಾಗಿ ಚೇತರಿಸಿಕೊಂಡ ವ್ಯಕ್ತಿಗೆ ಯಾವುದೇ ಮರುಪರೀಕ್ಷೆ ಅಗತ್ಯವಿಲ್ಲ ಎಂದು ಹೇಳಿದೆ.
ಸೋಂಕಿನ ಅಪಾಯ ಕಡಿಮೆ ಮಾಡಲು ರೋಗಲಕ್ಷಣವಿಲ್ಲದ ವ್ಯಕ್ತಿಗಳ ಅನಿವಾರ್ಯವಲ್ಲದ ಪ್ರಯಾಣ ಮತ್ತು ಅಂತಾರಾಜ್ಯ ಪ್ರಯಾಣವನ್ನು ತಪ್ಪಿಸಬೇಕು ಎಂದು ತಿಳಿಸಿದೆ.
ಅಗತ್ಯ ಪ್ರಯಾಣವನ್ನು ಕೈಗೊಳ್ಳುವ ಎಲ್ಲಾ ಲಕ್ಷಣರಹಿತ ವ್ಯಕ್ತಿಗಳು ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸಬೇಕು.
ಮೊಬೈಲ್ ಪರೀಕ್ಷಾ ಪ್ರಯೋಗಾಲಯಗಳು ಈಗ ಜಿಎಂ ಪೋರ್ಟಲ್‌ನಲ್ಲಿ ಲಭ್ಯವಿವೆ ಮತ್ತು ಮೊಬೈಲ್ ವ್ಯವಸ್ಥೆಗಳ ಮೂಲಕ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಹೆಚ್ಚಿಸಲು ರಾಜ್ಯಗಳನ್ನು ಪ್ರೋತ್ಸಾಹಿಸಲಾಗುತ್ತದೆ. ರ್‍ಯಾಪಿಡ್ ಆಂಟಿಜೆನ್ ಟೆಸ್ಟ್ (ರ್‍ಯಾಟ್) ಮೂಲಕ ಪರೀಕ್ಷೆಯನ್ನು ಹೆಚ್ಚಿಸುವ ಕ್ರಮಗಳಿಗೆ ಸಂಬಂಧಿಸಿದಂತೆ, ಲಭ್ಯವಿರುವ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸೌಲಭ್ಯಗಳಲ್ಲಿ ರಾಟ್ ಅನ್ನು ಅನುಮತಿಸಬಹುದು.
ರಾಟ್ ಬೂತ್ ಗೆ ಸಲಹೆ:
ದೇಶದ ಜನರನ್ನು ಪರೀಕ್ಷಿಸಲು ನಗರಗಳು, ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ಡೆಡಿಕೇಟೆಡ್ ರ್‍ಯಾಟ್ ಬೂತ್‌ಗಳನ್ನು ಸ್ಥಾಪಿಸಬೇಕು.ಆರೋಗ್ಯ ಸೌಲಭ್ಯಗಳು, ಆರ್‌ಡಬ್ಲ್ಯೂಎ, ಕಚೇರಿಗಳು, ಶಾಲೆಗಳು, ಕಾಲೇಜುಗಳು, ಸಮುದಾಯ ಕೇಂದ್ರಗಳು ಮತ್ತು ಲಭ್ಯವಿರುವ ಇತರ ಖಾಲಿ ಸ್ಥಳಗಳು ಸೇರಿದಂತೆ ಅನೇಕ ಸ್ಥಳಗಳಲ್ಲಿ ಪರೀಕ್ಷಾ ಬೂತ್‌ಗಳನ್ನು ಸ್ಥಾಪಿಸಬಹುದು. ಪ್ರವೇಶ ಮತ್ತು ಪರೀಕ್ಷೆಯ ಲಭ್ಯತೆಯನ್ನು ಸುಧಾರಿಸಲು ಈ ಬೂತ್‌ಗಳು ಸದಾಕಾಲ ಕಾರ್ಯನಿರ್ವಹಿಸಬೇಕು ಎಂದು ಹೇಳಿದೆ.
ರ್‍ಯಾಟ್ ಪರೀಕ್ಷಾ ಸೌಲಭ್ಯಗಳಲ್ಲಿ ಜನದಟ್ಟಣೆ ತಪ್ಪಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಸಾರ್ವಜನಿಕ ಮತ್ತು ಖಾಸಗಿ ಪ್ರಯೋಗಾಲಯಗಳಲ್ಲಿ ಲಭ್ಯವಿರುವ ಆರ್‌ಟಿಪಿಸಿಆರ್ ಪರೀಕ್ಷಾ ಸಾಮರ್ಥ್ಯದ ಸಂಪೂರ್ಣ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ರಾಜ್ಯಗಳಿಗೆ ಸೂಚಿಸಲಾಗಿದೆ.
ರ್‍ಯಾಪಿಡ್ ಆಂಟಿಜೆನ್ ಟೆಸ್ಟ್‌ನಿಂದ ಸಕಾರಾತ್ಮಕವಾಗಿ ಗುರುತಿಸಲ್ಪಟ್ಟ ರೋಗಲಕ್ಷಣದ ವ್ಯಕ್ತಿಗಳನ್ನು ಮರು ಪರೀಕ್ಷಿಸಬಾರದು ಮತ್ತು ಐಸಿಎಂಆರ್ ಮಾರ್ಗಸೂಚಿಗಳ ಪ್ರಕಾರ ಗೃಹಾಧಾರಿತ ಆರೈಕೆಯ ಮೂಲಕ ಗುಣಮುಖರಾಗಲು ಸಲಹೆ ನೀಡಬೇಕು.
ರೋಗಲಕ್ಷಣದ ವ್ಯಕ್ತಿಗಳು, ರ್‍ಯಾಪಿಡ್ ಆಂಟಿಜೆನ್ ಟೆಸ್ಟ್‌ನಿಂದ ನೆಗೆಟಿವ್ ಗುರುತಿಸಲ್ಪಟ್ಟರೆ ಆರ್‌ಟಿ-ಪಿಸಿಆರ್ ಪರೀಕ್ಷಾ ಸೌಲಭ್ಯದೊಂದಿಗೆ ಸಂಪರ್ಕ ಹೊಂದಿರಬೇಕು. ಈ ಮಧ್ಯೆ ಮನೆಯಲ್ಲಿ ಕ್ವಾರಂಟೈನ್ ಮತ್ತು ಚಿಕಿತ್ಸೆಯನ್ನು ಅನುಸರಿಸಲು ಒತ್ತಾಯಿಸಬೇಕು.
ಎಲ್ಲಾ ಆರ್‌ಟಿ-ಪಿಸಿಆರ್ ಮತ್ತು ರ್‍ಯಾಪಿಡ್ ಆಂಟಿಜೆನ್ ಟೆಸ್ಟ್ ಪರೀಕ್ಷಾ ಫಲಿತಾಂಶಗಳನ್ನು ಐಸಿಎಂಆರ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಕೋವಿಡ್-೧೯ಗಾಗಿ ಪರೀಕ್ಷಿಸಲ್ಪಟ್ಟ ಎಲ್ಲಾ ವ್ಯಕ್ತಿಗಳ ವ್ಯಾಕ್ಸಿನೇಷನ್ ಸ್ಥಿತಿಯನ್ನು ಆರ್‌ಟಿ-ಪಿಸಿಆರ್ ಅಪ್ಲಿಕೇಶನ್‌ನಲ್ಲಿನ ಮಾದರಿ ರೆಫರಲ್ ಫಾರ್ಮ್‌ನಲ್ಲಿ (ಎಸ್‌ಆರ್‌ಎಫ್) ನಮೂದಿಸಬೇಕು ಮತ್ತು ಈ ಮಾಹಿತಿಯು ನಿರ್ಣಾಯಕ ಪ್ರಾಮುಖ್ಯತೆಯನ್ನು ಹೊಂದಿರುವುದರಿಂದ ಆರ್‌ಟಿಪಿಸಿಆರ್ ಮತ್ತು ರ್‍ಯಾಪಿಡ್ ಆಂಟಿಜೆನ್ ಟೆಸ್ಟ್‌ನಿಂದ ಪರೀಕ್ಷಿಸಲ್ಪಟ್ಟ ವ್ಯಕ್ತಿಗಳನ್ನು ನಮೂದಿಸಬೇಕು ಎಂದು ಅದು ಹೇಳಿದೆ.