ಸೋಂಕು ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲ

ಮೈಸೂರು:ಏ:23: ಕಳೆದ 1 ವರ್ಷದಿಂದಲೂ ರಾಷ್ಟ್ರ ಹಾಗೂ ರಾಜ್ಯದ ಜನತೆಗೆ ಮಾರಕವಾಗಿರುವ ಕೊರೊನಾ ವೈರಸ್‍ನನ್ನು ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಜಿ.ಪಂ. ಅಧ್ಯಕ್ಷೆ ಪುಷ್ಪಅಮರ್‍ನಾಥ್ ಆರೋಪಿಸಿದರು.
ಅವರು ಇಂದು ಬೆಳಿಗ್ಗೆ ನಗರದ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಕಳೆದ ವರ್ಷಕ್ಕಿಂತ ಈ ಭಾರಿ ಕೊರೊನಾ ವೈರಸ್‍ನ ಅಬ್ಬರ ಜೋರಾಗಿದ್ದು, ಜನರ ಪ್ರಾಣ ತರಗೆಲೆಗಳಂತೆ ಉರುಳುತ್ತಿದೆ. ಇದನ್ನು ಕಂಡೂ ಕಾಣದಂತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬರೇ ಜಾಹಿರಾತುಗಳ ಮೂಲಕ ಕೋವಿಡ್‍ನನ್ನು ನಿಯಂತ್ರಿಸುತ್ತಿದ್ದೆವೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೊರೊನಾವನ್ನು ನಿಯಂತ್ರಿಸಲು ಅನುಸರಿಸುತ್ತಿರುವ ಕ್ರಮಗಳು ಸಮರ್ಪಕವಾಗಿಲ್ಲ. ಇದನ್ನು ಗಮನಿಸಿದರೆ ಈ ಎರಡೂ ಸರ್ಕಾರಗಳು ಊರು ಕೊಳ್ಳೆಯಾದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ ಎಂಬ ಗಾಧೆ ನೆನಪಿಗೆ ಬರುತ್ತದೆ. ಕೊರೊನಾ ಬಗ್ಗೆ ಅನುಭವಿ ವೈದ್ಯರುಗಳು ಹಲವಾರು ರೀತಿಯ ಮಾರ್ಗದರ್ಶನಗಳನ್ನು ನೀಡುತ್ತಿದ್ದರೂ ಅವುಗಳನ್ನು ಕಾರ್ಯಗತಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗುತ್ತಿಲ್ಲ. ಬದಲಾಗಿ ತಮ್ಮಿಚ್ಚೆಗೆ ಬಂದಂತೆ ವರ್ತಿಸುತ್ತಿವೆ. ಇದನ್ನು ನೋಡಿದರೆ ಈ ಎರಡೂ ಸರ್ಕಾರಗಳು ಜನ ಸಮಾನ್ಯರಿಗೆ ಬೇಕೇ-ಬೇಡವೇ ಎಂಬ ಪ್ರಶ್ನೆ ಮೂಡುತ್ತದೆ ಎಂದರು.
ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಡಾ. ಕೆ.ಸುಧಾಕರ್‍ರವರುಗಳು ಕೊರೊನಾ ವೈರಸ್ ತಡೆಗಟ್ಟುವ ಬಗ್ಗೆ ಪ್ರತಿದಿನವೂ ಕೆಲವು ಸಭೆಗಳನ್ನು ನಡೆಸುತ್ತಿದ್ದಾರೆ. ಆದರೆ ಅದರಲ್ಲಿ ತಿಳಿಸುವ ವಿಷಯಗಳು ಯಾವುವೂ ಜಾರಿಗೊಳ್ಳುತ್ತಿಲ್ಲ. ಹಾಗಾಗಿ ಅವರಿಬ್ಬರು ಕೇವಲ ಪ್ರಚಾರಕ್ಕಾಗಿ ಸೀಮಿತವಾಗಿದ್ದಾರೆಂದರೆ ಅದು ಅತಿಶಯೋಕ್ತಿ ಏನಲ್ಲ. ರಾಜ್ಯದಲ್ಲಿ ಆಕ್ಸಿಜನ್, ವೆಂಟಿಲೇಟರ್‍ಗಳ ಕೊರತೆ ಇದ್ದರೂ ಅದನ್ನು ಸರಬರಾಜು ಮಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಸದ್ಯದ ಪರಿಸ್ಥಿತಿಯಲ್ಲಿ ಉಸಿರಾಡುವ ಗಾಳಿಗೂ ತೆರಿಗೆ ಕೊಡುವ ಪರಿಸ್ಥಿತಿ ಒದಗಿ ಬಂದಿರುವುದು ತೀರಾ ವಿಷಾದನೀಯ. ಇಂತಹ ಸರ್ಕಾರ ಏಕೆ ನಡೆಸಬೇಕೆಂದು ಮುಖ್ಯ ಮಂತ್ರಿಗಳ ವಿರುದ್ಧ ಹರಿಹಾಯ್ದರು.
ಕೊರೊನಾ ವ್ಯಾಕ್ಸಿನ್ ಮುಕ್ತ ಮಾಟುಕಟ್ಟೆಯಲ್ಲಿ 400 ರೂ.ಗಳಿಗೆ ಲಭಿಸುತ್ತಿದ್ದರೆ ಖಾಸಗಿ ಚಿಕಿತ್ಸಾಲಯಗಳಲ್ಲಿ ಇದಕ್ಕೆ 600 ರೂ.ಗಳನ್ನು ವಸೂಲಿ ಮಾಡುತ್ತಿದ್ದಾರೆ. ಇದಕ್ಕೆ ಅನುಮತಿ ಕೊಟ್ಟವರು ಯಾರು ಎಂಬುದೇ ಯಕ್ಷಪ್ರಶ್ನೆಯಾಗಿದ್ದು ಇದನ್ನು ಸರ್ಕಾರ ಗಮನಿಸುತ್ತಿಲ್ಲ. ರಾಜ್ಯದ ಜನತೆಯ ಬಗ್ಗೆ ಕಾಳಜಿ ಇದ್ದರೆ ಈ ಕೂಡಲೆ ವ್ಯಾಕ್ಸಿನ್‍ನನ್ನು ಬಡವರಿಗೆ ಮತ್ತು ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿ ನೀಡಲು ಸರ್ಕಾರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.