ಸೋಂಕು ನಿಯಂತ್ರಣ ಸಚಿವರ ಸೂಚನೆ

ಪೀಣ್ಯ ದಾಸರಹಳ್ಳಿ,ಏ.೧೭:ಇಂದು ದಾಸರಹಳ್ಳಿ ವಲಯ ಬಿ.ಬಿ.ಎಂ.ಪಿ ಕಚೇರಿಯಲ್ಲಿ, ದಾಸರಹಳ್ಳಿ ವಲಯ ಕೋವಿಡ್ ಉಸ್ತುವಾರಿ ಸಚಿವರಾದ ಗೋಪಾಲಯ್ಯನವರ ಅಧ್ಯಕ್ಷತೆಯಲ್ಲಿ ಕೋವಿಡ್೧೯ ಸೋಂಕು ನಿಯಂತ್ರಣ ಕುರಿತಂತೆ ಅಧಿಕಾರಿಗಳ ಸಭೆ ನಡೆಯಿತು.
ಮಹಾಮಾರಿ ಕೊರೊನಾ ಸೋಂಕು ತಡೆಗಟ್ಟುವಲ್ಲಿ ಅಧಿಕಾರಿಗಳು ನಿರ್ದಾಕ್ಷಿಣ್ಯವಾಗಿ ಕ್ರಮವನ್ನು ಜರುಗಿಸಬೇಕು ಎಂದು ಸೂಚಿಸಿದ ಸಚಿವ ಗೋಪಾಲಯ್ಯ,ಕೋವಿಡ್ ಪಾಸಿಟಿವ್ ಕಂಡು ಬಂದವರಲ್ಲಿ ಆಸ್ಪತ್ರೆಗೆ ದಾಖಲಿಸುವುದು ಅಗತ್ಯವಾಗಿದ್ದಲ್ಲಿ ತಡ ಮಾಡದೆ ಸೌಲಭ್ಯ ಒದಗಿಸಿ ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ಒದಗಿಸಲಾಗುವುದು. ಹೆಚ್ಚಿನದಾಗಿ ನಾಗರಿಕರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯ ಎಂದು ಮನವಿ ಮಾಡಿದರು.
ಕೊರೊನಾ ಸೋಂಕಿತರಲ್ಲಿ ಧೈರ್ಯ ತುಂಬುವುದು ಅತ್ಯಗತ್ಯ, ಕೆಲವರು ಭಯದಿಂದಲೇ ಸಾವನ್ನಪ್ಪುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಬೇಕಿದೆ ಎಂದು ಗೋಪಾಲಯ್ಯ ಹೇಳಿದರು.
ಸ್ಥಳೀಯ ಶಾಸಕ ಆರ್. ಮಂಜುನಾಥ್ ಮಾತನಾಡಿ, ದಾಸರಹಳ್ಳಿ ವಲಯದಲ್ಲಿ ಕೋವಿಡ್ ಪ್ರಮಾಣ ಇತ್ತೀಚೆಗೆ ಹೆಚ್ಚಾಗುತ್ತಿದೆ. ಆಸ್ಪತ್ರೆಗಳಲ್ಲಿ ವೆಂಟಿಲೇಟರ್, ಆಕ್ಸಿಜನ್ ಇರುವ ಬೆಡ್ ಗಳ ಸಮಸ್ಯೆ ಕಾಡುತ್ತಿದೆ, ಪ್ರತಿ ಆರೋಗ್ಯ ಕೇಂದ್ರದಲ್ಲೂ ಕೋವಿಡ್ ಪರೀಕ್ಷಾ ಕೇಂದ್ರಗಳು, ವ್ಯಾಕ್ಸಿನೇಷನ್ ಹಾಗೂ ಔಷಧಿ ವಿತರಣೆ ಸಮರ್ಪಕವಾಗಿ ನಡೆಯಬೇಕು ಎಂದು ತಿಳಿಸಿದರು.
ಇದೇ ರೀತಿ ದಾಸರಹಳ್ಳಿ ವಲಯದಲ್ಲಿ ಕೋವಿಡ್ ಹೆಚ್ಚಾದರೆ ದಾಸರಹಳ್ಳಿ ವಲಯಕ್ಕೆ ೧ ಕೋವಿಡ್ ಕೇರ್ ಸೆಂಟರ್ ಅವಶ್ಯಕತೆ ಇದೆ ಎಂದು ಶಾಸಕರು ಸಚಿವರ ಗಮನಕ್ಕೆ ತಂದರು.
ಸೋಂಕಿತರ ಸಂಖ್ಯೆ ಹೆಚ್ಚಿದಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲು ಆರೋಗ್ಯ ಸಚಿವರೊಂದಿಗೆ ಮಾತನಾಡುವುದಾಗಿ ಸಚಿವರು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ದಾಸರಹಳ್ಳಿ ವಲಯ ವಿಶೇಷ ಆಯುಕ್ತರಾದ ರವೀಂದ್ರ, ಜಂಟಿ ಆಯುಕ್ತರಾದ ನರಸಿಂಹಮೂರ್ತಿ, ವೈದ್ಯಾಧಿಕಾರಿಗಳಾದ ಲೋಕೇಶ್, ಸುರೇಶ್ ರುದ್ರಪ್ಪ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಹಾಗೂ ಕೋವಿಡ್ ಉಸ್ತುವಾರಿ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.