ಸೋಂಕು ನಿಯಂತ್ರಣ: ಗೌರವ್ ವಿಶ್ವಾಸ

ಬೆಂಗಳೂರು, ಏ.೨೭- ಕೋವಿಡ್ ಸೋಂಕಿನ ಸಂಬಂಧ ರಾಜ್ಯ ಸರ್ಕಾರ ಇಂದು ರಾತ್ರಿಯಿಂದ ೧೪ ದಿನಗಳ ಕಾಲ ಜಾರಿಗೊಳಿಸಿರುವ ಕರ್ಫ್ಯೂ ಪರಿಣಾಮ ಹತ್ತು ದಿನಗಳಲ್ಲಿಯೇ ಪರಿಸ್ಥಿತಿ ಹತೋಟಿಗೆ ಬರುವ ವಿಶ್ವಾಸ ಇದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.

ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ಫ್ಯೂಯಿಂದ ಸೋಂಕು ಹರಡುವಿಕೆ ತಡೆಗಟ್ಟಲು ಸಾಧ್ಯ. ಹೀಗಾಗಿ, ಬೆಂಗಳೂರಿನಲ್ಲಿ ಹತ್ತು ದಿನಗಳಲ್ಲಿ ಪರಿಸ್ಥಿತಿ ಕೈಮೀರದಂತೆ ನೋಡಿ ಕೊಳ್ಳಲಾಗುವುದು. ಒಂದು ವೇಳೆ ಈ ಕರ್ಫ್ಯೂ ನಿಯಮ ಉಲ್ಲಂಘನೆ ಮಾಡಿದರೆ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಈಗಾಗಲೇ ಹಲವು ವೈದ್ಯರು ಗುತ್ತಿಗೆ ಆಧಾರದ ಮೇಲೆ ಅವರ ಸೇವೆಯನ್ನು ಪಡೆಯಲಾಗುತ್ತಿದೆ. ಇತರರೂ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸೇವೆಗೆ ಮುಂದಾದರೆ ಒಳ್ಳೆಯದು ಎಂದ ಅವರು, ಪರಿಸ್ಥಿತಿ ನಿಭಾಯಿಸಲು ನಮಗೆ ಮತ್ತಷ್ಟು ವೈದ್ಯರು, ಶುಶ್ರೂಕರು ಹಾಗೂ ಕೋವಿಡ್ ಕೇರ್ ಕೇಂದ್ರಗಳ ನಿರ್ವಹಣೆಗೆ, ಕೌನ್ಸಿಂಗ್, ಹೋಂ ಐಸೋಲೇಷನ್, ಸಂಪರ್ಕಿತರ ಪತ್ತೆ ಮಾಡಲು, ಸ್ಯಾಂಪಲ್ ಸಂಗ್ರಹಿಸಲು ಹಾಗೂ ಇತರೆ ಸೇವೆಗಳಿಗೆ ಸ್ವಯಂ ಸೇವಕರು ಬೇಕಾಗಿದ್ದಾರೆ ಎಂದು ತಿಳಿಸಿದರು.

ಆಸ್ಪತ್ರೆಗಳಲ್ಲಿ ಹಾಸಿಗೆ ಸಮಸ್ಯೆ ಕೊಂಚ ಸುಧಾರಿಸಿದ್ದು, ಈಗಾಗಲೇ ಹತ್ತು ಸಾವಿರಕ್ಕೂ ಅಧಿಕ ಬೆಡ್ ಗಳನ್ನು ಪಡೆಯಲಾಗಿದೆ. ಮುಂದಿನ ದಿನಗಳಲ್ಲಿ ಇದರ ಸಂಖ್ಯೆ ದ್ವಿಗುಣ ಆಗಲಿದೆ. ಯಾವುದೇ ಸಮಸ್ಯೆ ಮತ್ತು ಪರಿಹಾರಕ್ಕೆ ಅಧಿಕಾರಿಗಳ ವರ್ಗವೂ ಕಾರ್ತ ನಿರ್ವಹಿಸುತ್ತಿದೆ ಎಂದು ತಿಳಿಸಿದರು.

ದಿನೇ ದಿನೇ ಕೋವಿಡ್ ಸಹಾಯವಾಣಿ ೧೯೧೨ ಸಂಖ್ಯೆಗೆ ಅಧಿಕ ಕರೆಗಳು ಬರುತ್ತಿವೆ. ಇತ್ತೀಚಿಗೆ ಒಟ್ಟು ೪೦೦ ಲೈನ್ ಏಕ ಕಾಲದಲ್ಲಿ ಸಂಪರ್ಕಿಸುವ ತಂತ್ರಜ್ಞಾನ ಅಭಿವೃದ್ಧಿ ಪಡಿಸಲಾಗಿದೆ ಎಂದು ಹೇಳಿದರು.