ಸೋಂಕು ನಿಯಂತ್ರಣ ಕ್ರಮ ಕಡ್ಡಾಯ ಪಾಲಿಸಿ

ಗದಗ ಏ.20 : ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಎರಡನೇ ಅಲೆಯ ಹರಡುವಿಕೆ ಅಧಿಕವಾಗಿದ್ದು ಸೋಂಕು ನಿಯಂತ್ರಣ ಕ್ರಮಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸುವ ಮೂಲಕ ಜಿಲ್ಲಾಡಳಿತಕ್ಕೆ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಜಿಲ್ಲಾದ್ಯಂತ ಏರ್ಪಡಿಸಲಾಗುವ ಮದುವೆ ಹಾಗೂ ಇತರೆ ಕಾರ್ಯಕ್ರಮಗಳಿಗೆ ಸರ್ಕಾರ ಇತ್ತೀಚೆಗೆ ಹೊರಡಿಸಿದ ಆದೇಶದಂತೆ ನಿಗದಿಪಡಿಸಿದ ಗರಿಷ್ಟ ಸಂಖ್ಯೆಯೊಂದಿಗೆ ಜನರು ಪಾಲ್ಗೊಳ್ಳುವ ಮೂಲಕ ಸೋಂಕು ನಿಯಂತ್ರಣಕ್ಕೆ ಸ್ವತ: ಸಾರ್ವಜನಿಕರು ಮುಂದಾಗಬೇಕು. ಮದುವೆ ಸಮಾರಂಭಗಳಿಗೆ ತೆರೆದ ಪ್ರದೇಶದಲ್ಲಿ 200 ಜನ , ಸಮುದಾಯ ಭವನ ಒಳಸಭಾಂಗಣ, ಮುಚ್ಚಿದ ಪ್ರದೇಶದಲ್ಲಿ 100 ಜನ ಮೀರದಂತೆ ಭಾಗವಹಿಸಲು ಸರ್ಕಾರ ಅನುಮತಿ ನೀಡಿದೆ.
ಜನ್ಮ ದಿನಾಚರಣೆಗೆ ಸಂಬಂಧಿಸಿದಂತೆ ತೆರೆದ ಪ್ರದೇಶಗಳಲ್ಲಿ 50 ಜನರಿಗೆ , ಸಭಾಂಗಣ ಹಾಗೂ ಒಳಾಂಗಣ ಹಾಲ್‍ಗಳಮುಚ್ಚಿದ ಪ್ರದೇಶದಲ್ಲಿ 25 ಜನರು ಮೀರದಂತೆ ಭಾಗವಹಿಸಲು ಅವಕಾಶವಿದೆ.
ಅಂತ್ಯ ಸಂಸ್ಕಾರದಲ್ಲಿ 50 ಜನ ತೆರೆದ ಪ್ರದೇಶದಲ್ಲಿ , ಒಳಾಂಗಣ ಪ್ರದೇಶದಲ್ಲಿ 25 ಜನ ಮೀರದಂತೆ ಪಾಲ್ಗೊಳ್ಳಬಹುದಾಗಿದೆ. ಜಿಲ್ಲಾದ್ಯಂತ ಜಾತ್ರೆ ಉತ್ಸವಗಳನ್ನು ನಿಷೇಧಿಸಲಾಗಿದ್ದು ಸಾರ್ವಜನಿಕರು ಸಹಕರಿಸಬೇಕು.
ಜನರು ವಿನಾಕಾರಣ ಸಂಚಾರ ಮಾಡಬಾರದು. ಅಗತ್ಯ ಸಂದರ್ಭದಲ್ಲಿ ಮನೆಯಿಂದ ಹೊರಬರಬೇಕಾದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದರೊಂದಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಜನನಿಬಿಡ ಪ್ರದೇಶಗಳಲ್ಲಿ ಸಾರ್ವಜನಿಕರು ಅನಗತ್ಯವಾಗಿ ಸಂಚರಿಸಬಾರದು. ಸಾರ್ವಜನಿಕರು ಪದೇ ಪದೇ ಸ್ಯಾನಿಟೈಜರ್ ಹಾಗೂ ಸೋಪಿನೊಂದಿಗೆ ಕೈತೊಳೆದುಕೊಳ್ಳುವದರೊಂದಿಗೆ ಶುಚಿತ್ವ ಕಾಯ್ದುಕೊಳ್ಳಬೇಕು. ತರಕಾರಿ ಸೇರಿದಂತೆ ಇತರೆ ಅಗತ್ಯ ವಸ್ತುಗಳ ಖರೀದಿ ವೇಳೆ ಅಂಗಡಿಗಳಲ್ಲಿ ಸೋಂಕು ನಿಯಂತ್ರಣ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಸೋಂಕು ಪ್ರಸರಣವನ್ನು ತಡೆಗಟ್ಟಬೇಕು.
ತರಕಾರಿ ಮಾರುಕಟ್ಟೆಗಳಲ್ಲಿ ವ್ಯಾಪಾರಸ್ಥರು ಮಾಸ್ಕ ಧರಿಸುವದರೊಂದಿಗೆ ಪರಸ್ಪರ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಹಾಗೂ ತರಕಾರಿ ಖರೀದಿಗೆ ಆಗಮಿಸುವ ಸಾರ್ವಜನಿಕರಿಗೂ ಪರಸ್ಪರ ಅಂತರ ಕಾಯ್ದುಕೊಂಡು ವ್ಯವಹರಿಸುವಂತೆ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.