ಸೋಂಕು ನಿಯಂತ್ರಣದಲ್ಲಿ ಆಶಾ ಕಾರ್ಯಕರ್ತರ ಪಾತ್ರ ಅಭಿನಂದನೀಯ

ಗದಗ ಜೂ.6: ಕೊರೋನಾ ಸೋಂಕು ನಿಯಂತ್ರಣ ಹಾಗೂ ಸೋಂಕಿತರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರಕಿಸಲು ಸ್ಥಳೀಯ ಮಟ್ಟದಲ್ಲಿ ಆಶಾ ಕಾರ್ಯಕರ್ತರ ಪರಿಶ್ರಮ ಅಭಿನಂದನೀಯವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಹೇಳಿದರು.
ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಜರುಗಿದ ಆಶಾ ಹಾಗೂ ಎ.ಎನ್.ಎಂ. ಗಳಿಗೆ ಮಾಸ್ಕ್ ವಿತರಿಸುವ ಸರಳ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಮಾತನಾಡಿದರು. ಸೋಂಕು ಚಿಕಿತ್ಸೆಯಲ್ಲಿ ಆರೋಗ್ಯ ಇಲಾಖೆಯ ವೈದ್ಯರು ಹಾಗೂ ಸಿಬ್ಬಂದಿಗಳ ಕಾರ್ಯದೊಂದಿಗೆ ಆಶಾ ಕಾರ್ಯಕರ್ತರು ಹಾಗೂ ಎ.ಎನ್.ಎಮ್.ಗಳು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಸೋಂಕಿತರ ಜೀವ ಹಾನಿ ತಡೆಯುವಲ್ಲಿ ಸುಸಮಯದಲ್ಲಿ ಸೂಕ್ತ ಚಿಕಿತ್ಸೆಗೆ ನೆರವಾಗುವುದರೊಂದಿಗೆ ಸೋಂಕು ನಿಯಂತ್ರಣ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸರ್ಕಾರದಿಂದ ಇತ್ತೀಚೆಗೆ ಕೋವಿಡ್ ರಿಸ್ಕ್ ಭತ್ಯೆ ನೀಡುವಂತೆ ಆದೇಶ ಹೊರಡಿಸಲಾಗಿದೆ. ಅರ್ಹ ಎಲ್ಲರಿಗೂ ಆರೋಗ್ಯ ಇಲಾಖೆಯಿಂದ ಶೀಘ್ರವಾಗಿ ಕೋವಿಡ್ ರಿಸ್ಕ್ ಭತ್ಯೆಯನ್ನು ನೀಡುವುದರೊಂದಿಗೆ ಆಶಾ ಹಾಗೂ ಎ.ಎನ್.ಎಂ.ಗಳಿಗೆ ಆರೋಗ್ಯ ಸಮಸ್ಯೆಯಾದಲ್ಲಿ ಆದ್ಯತೆ ಮೇರೆಗೆ ಸೂಕ್ತ ಚಿಕಿತ್ಸೆ ಒದಗಿಸಬೇಕೆಂದು ತಿಳಿಸಿದರು.
ಆಶಾ ಕಾರ್ಯಕರ್ತರು ಆರೋಗ್ಯ ಇಲಾಖೆಯಿಂದ ನಡೆಸಲಾಗುತ್ತಿರುವ ಆರೋಗ್ಯ ಸಮೀಕ್ಷೆ ಹಾಗೂ ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮಗಳ ಯಶಸ್ಸಿನಲ್ಲಿಯೂ ಸಹಕರಿಸುತ್ತಿದ್ದು ಅವರು ತಮ್ಮ ಕುಟುಂಬದೊಂದಿಗೆ ತಮ್ಮ ಆರೋಗ್ಯ ಕಡೆಗೂ ಗಮನ ಹರಿಸಬೇಕೆಂದು ಕರೆ ನೀಡಿದರು.
ಇತ್ತೀಚೆಗೆ ಜಿಲ್ಲಾಡಳಿತದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತರಿಗೆ 1000 ಫೇಸ್ ಶೀಲ್ಡ್ ನೀಡಲಾಗಿತ್ತು. ಇಂದು ಆಶಾ ಹಾಗೂಎ.ಎನ್.ಎಂ.ಗಳಿಗೆ ತ್ರಿಬಲ್‍ಲೇಯರ್‍ನ 3000 ಮಾಸ್ಕ್ ಹಾಗೂ ಎನ್.95 ಮಾದರಿಯ 1000 ಮಾಸ್ಕ್ಗಳನ್ನು ಜಿಲ್ಲೆಯ ವಿವಿಧ ತಾಲೂಕುಗಳ ಆಶಾ ಹಾಗೂ ಎ.ಎನ್.ಎಂ. ಗಳಿಗೆ ಇಂದು ವಿತರಿಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಪದಾಧಿಕಾರಿಗಳಿಂದ ಜಿಲ್ಲಾಡಳಿತದ ಮೂಲಕ ಆರೋಗ್ಯ ಇಲಾಖೆಗೆ ಆಮ್ಲಜನಕ ಸಾಂಧ್ರಕ ಹಾಗೂ ಪಲ್ಸ್ ಆಕ್ಸಿಮೀಟರ್‍ಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶಬಸರಿಗಿಡದ, ಆರ್.ಸಿ.ಎಚ್. ಅಧಿಕಾರಿ ಡಾ. ಬಿ.ಎಂ. ಗೊಜನೂರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೂಪಸೇನ ಚವ್ಹಾಣ, ತಾಲೂಕಾ ವೈದ್ಯಾಧಿಕಾರಿ ಡಾ. ಎಸ್.ಎಸ್. ನೀಲಗುಂದ ಸೇರಿದಂತೆ ವಿವಿಧ ತಾಲೂಕುಗಳ ಆಶಾ ಕಾರ್ಯಕರ್ತರು, ಎ.ಎನ್.ಎಂ. ಗಳು , ಆರೋಗ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.