ಸೋಂಕು ನಿಯಂತ್ರಣಕ್ಕೆ ಹೈಪೋಕ್ಲೋರೈಡ್ ಸಿಂಪರಣೆ

ಬ್ಯಾಡಗಿ, ಮೇ5: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ಪುರಸಭೆಯು ಅಗ್ನಿಶಾಮಕ ದಳದ ಸಹಕಾರದೊಂದಿಗೆ ಪಟ್ಟಣದಲ್ಲಿ ಹೈಪೆÇೀಕ್ಲೋರೈಡ್, ಫಿನಾಯಿಲ್ ಸಿಂಪರಣೆಯನ್ನು ಮಾಡುವ ಮೂಲಕ ಸೋಂಕಿನ ನಿಯಂತ್ರಣಕ್ಕೆ ಮುಂದಾಗಿದೆ.
ಪಟ್ಟಣದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಹಳೇ ಪುರಸಭೆಯ ಕಟ್ಟಡದಿಂದ ಪ್ರಾರಂಭಿಸಿದ ಹೈಪೆÇೀಕ್ಲೋರೈಡ್ ಮತ್ತು ಫಿನಾಯಿಲ್ ಸಿಂಪರಣೆಯನ್ನು ಪಟ್ಟಣದ ಮುಖ್ಯರಸ್ತೆ, ಸುಭಾಸ ಸರ್ಕಲ್, ನೆಹರೂ ನಗರ ಸೇರಿದಂತೆ ವಿವಿದೆಡೆ ರಸ್ತೆ ಅಕ್ಕ ಪಕ್ಕಗಳಲ್ಲಿ ನಡೆಸಲಾಯಿತು. ಪುರಸಭೆ ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಸಿಂಪರಣೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪುರಸಭಾ ಮುಖ್ಯಾಧಿಕಾರಿ ವಿ.ಎಂ. ಪೂಜಾರ ಅವರು, ರಾಜ್ಯದಲ್ಲಿ ಸೇರಿದಂತೆ ಪ್ರತಿಯೊಂದು ತಾಲೂಕು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಸೋಂಕಿನ ಎರಡನೇ ಹಂತದ ಅಲೆಯು ತೀವ್ರ ಗತಿಯಲ್ಲಿ ಏರುತ್ತಿದ್ದು, ದಿನದಿನಕ್ಕೆ ರೋಗಿಗಳ ಹೆಚ್ಚಳದೊಂದಿಗೆ ಸಾವಿನ ಪ್ರಮಾಣವೂ ಅಧಿಕವಾಗುತ್ತಿದೆ. ಬ್ಯಾಡಗಿ ಪಟ್ಟಣದಲ್ಲೂ ಕೋವಿಡ್ ಸೋಂಕಿನ ಎರಡನೇ ಹಂತದ ಅಲೆಯು ಹೆಚ್ಚಾಗಿ ಆತಂಕವನ್ನು ಸೃಷ್ಟಿ ಮಾಡಿದೆ. ಸಾರ್ವಜನಿಕರು ತಮ್ಮ ಆರೋಗ್ಯದ ಕಡೆಗೆ ಗಮನ ನೀಡುವುದು ಅಗತ್ಯವಾಗಿದೆ. ಆದರೆ, ಇದರತ್ತ ನಿಷ್ಕಾಳಜಿ ಮಾಡುತ್ತ ಸಾರ್ವಜನಿಕರು ಸೋಂಕಿನ ಬೆನ್ನು ಹತ್ತಿರುವುದು ಬೇಸರದ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಕೋವಿಡ್ ಸೋಂಕಿನ ಬಗ್ಗೆ ನಿರ್ಲಕ್ಷ್ಯ ತೋರಿದರೆ ಅದು ಪ್ರಾಣಕ್ಕೆ ಸಂಚಕಾರ ತರುವ ಸಾಧ್ಯತೆಗಳು ದಟ್ಟವಾಗಿವೆ ಎಂದರು.

ಬಾಕ್ಸ್…

ಪಟ್ಟಣದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾರ್ವಜನಿಕರು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕಾಗಿರುವುದು ಅತ್ಯವಶ್ಯವಾಗಿದೆ. ಅನಗತ್ಯ ಓಡಾಟಕ್ಕೆ ಸ್ವಯಂಪ್ರೇರಿತರಾಗಿ ನಿಯಂತ್ರಣ ಮಾಡಿಕೊಳ್ಳಬೇಕು. ಪ್ರತಿಯೊಬ್ಬರೂ ತಮ್ಮ ಹಾಗೂ ತಮ್ಮ ಕುಟುಂಬದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮುಂದಾಗಬೇಕು…
ವಿ.ಎಂ.ಪೂಜಾರ.
ಪುರಸಭೆ ಮುಖ್ಯಾಧಿಕಾರಿ ಬ್ಯಾಡಗಿ.