ಸೋಂಕು ನಿಯಂತ್ರಣಕ್ಕೆ ಲಾಕ್‌ಡೌನ್ ಅಗತ್ಯ : ಹೆಚ್. ತಿಮ್ಮಣ್ಣ

ದಾವಣಗೆರೆ.ಏ.೨೦ ದೇಶದಲ್ಲಿ ಸುನಾಮಿ ಯಂತೆ ಆರ್ಭಟಿಸುತ್ತಿರುವ ಕೋವಿಡ್-19 2ನೇ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮತ್ತು ಸಾವಿನ ಪ್ರಕರಣಗಳನ್ನು ತಡೆಯಲು ಸುದೀರ್ಘ ಅವಧಿಯ ಲಾಕ್‌ಡೌನ್ ಒಂದೇ ಇದಕ್ಕೆ ಪರಿಹಾರ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್. ತಿಮ್ಮಣ್ಣ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.ಸೋಂಕು ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಈ ಸೋಂಕಿನ ಚೈನ್ ತುಂಡರಿಸಲು ಲಾಕ್‌ಡೌನ್ ಬಿಟ್ಟರೆ ಅನ್ಯಮಾರ್ಗವಿಲ್ಲ. ಪ್ರತಿ ಗಲ್ಲಿ ಗಲ್ಲಿಗಳಲ್ಲಿ 144ನೇ ಸೆಕ್ಷನ್ ಜಾರಿಗೊಳಿಸಬೇಕು. ರಾಜ್ಯದಲ್ಲಿ ನೈಟ್ ಕರ್ಫ್ಯೂಯಿಂದ ಏನೂ ಪ್ರಯೋಜನವಾಗುವುದಿಲ್ಲ. ಸುದೀರ್ಘ ಲಾಕ್‌ಡೌನ್ ಒಂದೇ ದಾರಿ. ಹೀಗಿರುವ ಪರಿಸ್ಥಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಾಕ್‌ಡೌನ್‌ನಿಂದ ಕೊರೋನಾ ಸಮಸ್ಯೆ ಬಗೆಹರಿಯುವುದಿಲ್ಲ ಎನ್ನುತ್ತಿದ್ದಾರೆ. ಇದಕ್ಕೆ ಕಾರಣ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಹದೆಗೆಡುತ್ತಿದೆ ಎಂದು ಹಿಂಜರಿಯುತ್ತಿದ್ದಾರೆ. ಸರ್ಕಾರಕ್ಕೆ ಜನರ ಜೀವ ಮುಖ್ಯವೋ ಅಥವಾ ಆರ್ಥಿಕ ಸ್ಥಿತಿಗತಿ ಮುಖ್ಯವೂ ? ಇದನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು. ದೇಶದಲ್ಲಿ 1,300ಕ್ಕೂ ಹೆಚ್ಚು ಜನರು ಕೊರೊನಾ ಸೋಂಕಿಗೆ ಬಲಿಯಾಗುತ್ತಿದ್ದು, ಎರಡೂವರೆ ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲುತ್ತಿರುವ ಬೆನ್ನಲ್ಲೆ ಲಾಕ್‌ಡೌನ್ ಮಾಡುವುದು ಅನಿವಾರ್ಯ ವಾಗಿದೆ. 4 ರಿಂದ 5 ದಿನಗಳನ್ನು ಸೋಂಕಿನ ಪ್ರಮಾಣ ದುಪ್ಪಟ್ಟಾಗಿದೆ. ಈ ಸೋಂಕಿನ ಪ್ರಸರಣವನ್ನು ತಡೆಯಬೇಕಾದರೆ ಪ್ರಾಥಮಿಕ ಹಂತದಲ್ಲಿ ದೇಶಾದ್ಯಂತ 7 ದಿನಗಳ ಕಾಲ ಲಾಕ್‌ಡೌನ್ ಮಾಡುವಂತೆ ಸರ್ಕಾರಕ್ಕೆ ಹೆಚ್. ತಿಮ್ಮಣ್ಣ ಒತ್ತಾಯಿಸಿದ್ದಾರೆ.