ಸೋಂಕು ನಿಯಂತ್ರಣಕ್ಕೆ ತಾಲೂಕಾಡಳತ ಕಾರ್ಯ ನಿರ್ವಹಿಸಲು ಸೂಚನೆ


ಗದಗ, ಏ.17 : ಕೋವಿಡ್ ಸೋಂಕಿನ ಎರಡನೇ ಅಲೆಯಿಂದಾಗಿ ಜಿಲ್ಲಾದ್ಯಂತ ಸೋಂಕಿತರ ಸಂಖ್ಯೆ ಅಧಿಕಗೊಳ್ಳುತ್ತಿದೆ. ಸೋಂಕು ನಿಯಂತ್ರಣಕ್ಕೆ ತಾಲೂಕು ಆಡಳಿತಗಳು ಜವಾಬ್ದಾರಿಯುತ ನಿರ್ವಹಣೆಗೆ ಮುಂದಾಗುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಸಂವಾದ ಸಭಾಂಗಣದಲ್ಲಿ ಜರುಗಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಸೋಂಕು ನಿಯಂತ್ರಣಕ್ಕೆ ಸರಕಾರ ನೀಡಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಹಾಗೂ ನಿಯಮಗಳನ್ನು ಉಲ್ಲಂಘಿಸುವವರ ಮೇಲೆ ಶಿಸ್ತು ಕ್ರಮ ಜರುಗಿಸಿ ದಂಡ ವಿಧಿಸುವಂತೆ ಸೂಚಿಸಿದರು.
ತಹಶೀಲ್ದಾರರು ವಾರದಲ್ಲಿ ಎರಡು ಸಾರಿಯಾದರು ಕಡ್ಡಾಯವಾಗಿ ಕೋವಿಡ್ ನಿಯಂತ್ರಣ ಹಾಗೂ ಲಸಿಕೆ ನೀಡಿಕೆ ಬಗ್ಗೆ ಸಭೆ ಜರುಗಿಸಿ ವರದಿ ನೀಡಲು ಸೂಚಿಸಿದರು. ಅಲ್ಲದೇ ತಹಶೀಲ್ದಾರರು ತಾಲೂಕು ಮಟ್ಟದಲ್ಲಿ ಸೋಂಕಿತರ ಚಿಕಿತ್ಸೆಗೆ ಇರುವ ಸೌಲಭ್ಯಗಳ ಬಗ್ಗೆ ಸ್ವತಹ ಆಸ್ಪತ್ರೆಗೆ ತೆರಳಿ ಪರೀಶಿಲನೆ ಮಾಡಬೇಕು. ಹಾಗೂ ಒದಗಿಸಲಾದ ಸಾಮಗ್ರಿಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಧೃಡಪಡಿಸಿಕೊಳ್ಳಬೇಕು ಎಂದರು. ತಾಲೂಕು ಮಟ್ಟದಲ್ಲಿ ಕೋವಿಡ್ ಸೋಂಕು ದೃಢಪಟ್ಟವರಿಗೆ ತಾಲೂಕು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಬೇಕು ಒಂದು ವೇಳೆ ಸೋಂಕಿತರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಮಾತ್ರ ಗದಗ ಜಿಮ್ಸಗೆ ಕಳುಹಿಸಿಕೊಡಲು ಸೂಚಿಸಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ ಎಸ್. ಮಾತನಾಡಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಹಶೀಲ್ದಾರರು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ ಕಾಲ ಕಾಲಕ್ಕೆ ಟಾಸ್ಕ ಫೆÇೀರ್ಸ ಸಭೆ ಜರುಗಿಸಿ ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಸೋಂಕು ಗ್ರಾಮೀಣ ಪ್ರದೇಶದಲ್ಲಿ ಹರಡದಂತೆ ನಿಗಾವಹಿಸಲು ಕಾರ್ಯನಿರ್ವಾಹಕ ಅಧಿಕಾರಿಗಳು ಕ್ರಮ ವಹಿಸಬೇಕು. ಗೃಹ ದಿಗ್ಬಂಧನದಲ್ಲಿರುವ ಸೋಂಕಿತರು ಸರಿಯಾಗಿ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ನಿರಂತರವಾಗಿ ನಿಗಾವಹಿಸಬೇಕು.
ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ ಎಂ. ಮಾತನಾಡಿ ಆರೋಗ್ಯ ಇಲಾಖೆ ವೈದ್ಯರು ಹಾಗೂ ಸಿಬ್ಬಂದಿಗಳು ಕೋವಿಡ್ ಸೋಂಕಿತರಿಗೆ ನಿರಂತರವಾಗಿ ಚಿಕಿತ್ಸೆ ನೀಡುತ್ತಿದ್ದು ಅದರ ಜೊತೆಗೆ ತಮ್ಮ ಹಾಗೂ ತಮ್ಮ ಕುಟುಂಬದ ಆರೋಗ್ಯದ ಬಗ್ಗೆಯು ಸಹ ಕಾಳಜಿ ವಹಿಸುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ ಬಸರಿಗಿಡದ, ತಹಶೀಲ್ದಾರರು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ, ಭೂ ದಾಖಲೆಗಳ ಉಪನಿರ್ದೇಶಕ ರವಿಕುಮಾರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅನೀಲಕುಮಾರ ಮುದ್ದಾ, ಪೌರಾಯುಕ್ತ ರಮೇಶ ಜಾದವ ಸೇರಿದಂತೆ ತಾಲೂಕು ವೈದ್ಯಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.