ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ ಉತ್ತಮ ಕ್ರಮ ಕೈಗೊಂಡಿದೆ : ಸಚಿವ ಶೆಟ್ಟರ್

ಧಾರವಾಡ ಏ. 30: ಧಾರವಾಡ ಜಿಲ್ಲೆಯಲ್ಲಿ ಹಿಂದಿನ ಅನುಭವಗಳ ಆಧಾರದ ಮೇಲೆ ಜಿಲ್ಲಾಡಳಿತವು ಪ್ರಸ್ತುತದಲ್ಲಿರುವ ಕೋವಿಡ್ ಪರಿಸ್ಥಿತಿಯನ್ನು ಸಮರ್ಪಕವಾಗಿ ಮತ್ತು ಸಮರ್ಥವಾಗಿ ಯಾವುದೇ ತೊಂದರೆ, ಲೋಪಗಳಾಗದಂತೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಮತ್ತ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ಅವರು ಪ್ರಶಂಸೆ ವ್ಯಕ್ತಪಡಿಸಿದರು.

ಅವರು  ಮುಖ್ಯಮಂತ್ರಿಗಳೊಂದಿಗೆ ಜರುಗಿದ ವಿಡಿಯೋ ಸಂವಾದದ ನಂತರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪೊಲೀಸ್, ಕಂದಾಯ, ಪಂಚಾಯತ್‍ರಾಜ್, ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

14 ದಿನಗಳ ಕಫ್ರ್ಯೂ ಯಶಸ್ವಿಗೊಳಿಸಿ: ರಾಜ್ಯದಲ್ಲಿ ಕೋವಿಡ್ ಸರಪಳಿ ತುಂಡರಿಸಿ ಕೋವಿಡ್ ನಿಯಂತ್ರಣಕ್ಕೆ ತರಲು ಕನಿಷ್ಠ ಮೂರು ವಾರಗಳ ಕಫ್ರ್ಯೂ ವಿಧಿಸುವಂತೆ ತಜ್ಞರ ಸಮಿತಿ ಸಲಹೆ ನೀಡಿದೆ. ಆದರೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಮುಖ್ಯಮಂತ್ರಿಗಳು ಆರಂಭದಲ್ಲಿ ಕಫ್ರ್ಯೂ 14 ದಿನಗಳಿಗೆ ಮಾತ್ರ ಸೀಮಿತಗೊಳಿಸಿ ಸಾರ್ವಜನಿಕರ ಸಹಕಾರದಲ್ಲಿ ಯಶಸ್ವಿಗೊಳಿಸಬೇಕು. ಮತ್ತು ನಿರೀಕ್ಷಿತ ಪ್ರಮಾಣದಲ್ಲಿ ಸಾರ್ವಜನಿಕರ ಸಹಕಾರ ಸಿಗದೇ ಕೋವಿಡ್ ನಿಯಂತ್ರಣ ಕಷ ್ಟಸಾಧ್ಯವಾದಲ್ಲಿ ಕಫ್ರ್ಯೂ ಮತ್ತೇ ಮುಂದುವರೆಸಲು ಚಿಂತಿಸೋಣ ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 2,000 ಕ್ಕಿಂತ ಹೆಚ್ಚು ಬೆಡ್ ಲಭ್ಯ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಲ್ಲಿ 2,000 ಕ್ಕಿಂತಲೂ ಹೆಚ್ಚು ಹಾಸಿಗೆಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಇದರಲ್ಲಿ 1,074 ಬೆಡ್‍ಗಳು ಖಾಲಿ ಇವೆ. 397 ಆಕ್ಸಿಜನ್ ಬೆಡ್, 60 ಐಸಿಯು ಬೆಡ್ ಮತ್ತು 104 ವೆಂಟಿಲೇಟರ್‍ಗಳು ಚಿಕಿತ್ಸೆಗೆ ಲಭ್ಯ ಇವೆ.

2,61,310 ಜನರಿಗೆ ಲಸಿಕೆ : ಜಿಲ್ಲೆಯಲ್ಲಿ ಕೋವಿಡ್ ನಿರೋಧಕ ಲಸಿಕಾಕರಣ ಯಶಸ್ವಿಯಾಗಿ ನಡೆದಿದೆ. ಇಲ್ಲಿವರೆಗೆ ಕೋವಿಶೀಲ್ಡ್ ಲಸಿಕೆಯನ್ನು 2,43, 610 ಜನರಿಗೆ ಹಾಗೂ ಕೋವ್ಯಾಕ್ಸಿನ ಲಸಿಕೆಯನ್ನು 17,700 ಜನರಿಗೆ ಸೇರಿದಂತೆ ಒಟ್ಟು 2,61,310 ಜನರಿಗೆ ಲಸಿಕೆಯನ್ನು ನೀಡಲಾಗಿದೆ. ಮೇ. 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 18 ವರ್ಷ ಮೇಲ್ಪಟ್ಟವರ ಸಂಖ್ಯೆ ಹೆಚ್ಚಾಗಿರುವುದರಿಂದ ಲಸಿಕಾಕರಣಕ್ಕೆ ಜಿಲ್ಲೆಯಲ್ಲಿ ಹೆಚ್ಚು ಲಸಿಕಾ ಕೇಂದ್ರಗಳ ಸ್ಥಾಪನೆ ಮಾಡಿ ಜನರಲ್ಲಿ ಯಾವುದೇ ಗೊಂದಲ, ಜನದಟ್ಟಣೆಯಾಗದಂತೆ ಕ್ರಮ ವಹಿಸಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.
ಜಿಲ್ಲೆಯಲ್ಲಿ ರೆಮಿಡಿಸೀವರ್ ಔಷಧ ಕೊರತೆ ಇಲ್ಲ. ನಿನ್ನೆಯ ದಿನ ಜಿಲ್ಲೆಗೆ 740 ರೆಮಿಡಿಸೀವರ್ ಔಷಧ ಬಂದಿದೆ. ಪ್ರತಿ 2 ದಿನಕ್ಕೊಮ್ಮೆ ಔಷಧ ಪೂರೈಕೆಯಾಗುತ್ತಿದ್ದು, ಬಂದಂತೆ ಬಳಸಲಾಗುತ್ತಿದೆ. ಯಾವುದೇ ಕೊರತೆ ಉಂಟಾಗಿಲ್ಲವೆಂದು ಸಚಿವರು ತಿಳಿಸಿದರು.
ಸರ್ಕಾರವು ಕೋವಿಡ್ ಸೋಂಕಿತ ಎಲ್ಲರಿಗೂ ಉಚಿತವಾಗಿ ಚಿಕಿತ್ಸೆ ನೀಡಲು ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಖಾಸಗಿ ಆಸ್ಪತ್ರೆಗಳ ಶೇ. 50 ರಷ್ಟು ಬೆಡ್‍ಗಳನ್ನು ಸುಪರ್ದಿಗೆ ಪಡೆದು ಚಿಕಿತ್ಸೆ ನೀಡಲು ಕ್ರಮ ಕೈಗೊಂಡಿದೆ.

ಖಾಸಗಿ ಆಸ್ಪತ್ರೆಗೆ ದಾಖಲಾಗುವ ಬಡ ಹಾಗೂ ಮಧ್ಯಮ ವರ್ಗದ ಸಾರ್ವಜನಿಕರು ಜಿಲ್ಲಾ ನೋಡಲ್ ಅಧಿಕಾರಿ ಡಾ.ಶಶಿ ಪಾಟೀಲ, ಮೊ.ಸಂ.-9880973247 ಗೆ ಕರೆ ಮಾಡಿ ರೆಫರೆಲ್ ಪಡೆದುಕೊಳ್ಳಬೇಕು. ಮತ್ತು ಕೋವಿಡ್ ಪಾಸಿಟಿವ್ ವರದಿಯ ಎಸ್‍ಆರ್‍ಎಫ್ ಐಡಿ ಸಂಖ್ಯೆಯನ್ನು ಮತ್ತು ಅವರ ಆಧಾರ್ ಕಾರ್ಡ್ ಸಂಖ್ಯೆಯನ್ನು ತಿಳಿಸಬೇಕು. ಯಾವುದೇ ರೀತಿಯ ಖರ್ಚಿಲ್ಲದೇ ಉಚಿತವಾಗಿ ಸರ್ಕಾರದಿಂದ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಸಚಿವರು ತಿಳಿಸಿದರು. 

ಜಿಲ್ಲಾಡಳಿತ ಕೋವಿಡ್ ಸಂಬಂಧಿತ ಮಾಹಿತಿ, ನೆರವು ನೀಡಲು ಸಹಾಯವಾಣಿಯನ್ನು ಆರಂಭಿಸಿದ್ದು ಉಚಿತ ದೂರವಾಣಿ ಸಂಖ್ಯೆ-1077 ಗೆ ಕರೆ ಮಾಡಿ ನೆರವು ಪಡೆಯಬಹುದೆಂದು ಸಚಿವರು ಹೇಳಿದರು.

ಕಿಮ್ಸ್ ಆವರಣದಲ್ಲಿ ಮೇಕ್‍ಶಿಫ್ಟ್ ಹಾಸ್ಪಿಟಲ್ ವಾರ್ಡ್ ಆರಂಭ: ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಕೋವಿಡ್ ಸೋಂಕಿತರಿಗೆ ತುರ್ತು ಚಿಕಿತ್ಸೆ ನೀಡಲು ಅನುಕೂಲವಾಗುಂತೆ ಸುಮಾರು 66 ಬೆಡ್‍ಗಳಿರುವ ಮೇಕ್‍ಶಿಫ್ಟ್ ಹಾಸ್ಪಿಟಲ್ ವಾರ್ಡ್‍ನ್ನು ಮುಂದಿನ 10 ದಿನಗಳಲ್ಲಿ ತಯಾರಿಸಲಾಗುವುದು. ಈ ಕುರಿತು ಆಸ್ಪತ್ರೆಯ ಬೆಡ್, ವಾರ್ಡ್‍ಗಳನ್ನು ರೂಪಿಸಲು ಬೆಂಗಳೂರಿನ ಸಂಸ್ಥೆಯೊಂದಕ್ಕೆ ಜಿಲ್ಲಾಡಳಿತ ಈಗಾಗಲೇ ಆದೇಶ ನೀಡಿದೆ. ಇದು ರಾಜ್ಯದಲ್ಲಿಯೇ ಮೊದಲ ಪ್ರಯತ್ನವಾಗಿದ್ದು, ಜಿಲ್ಲಾಡಳಿತದ ಮುಂದಾಲೋಚನೆಯಿಂದ ಇಂತಹದೊಂದು ಮಾದರಿ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಪತ್ರಿಕಾಗೊಷ್ಠಿಯಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಮಹಾನಗರ ಪೊಲೀಸ್ ಆಯುಕ್ತ ಲಾಬೂರಾಮ್, ಮಹಾನಗರ ಪಾಲಿಕೆಯ ಆಯುಕ್ತ ಗುರುದತ್ತ ಹೆಗಡೆ ಉಪಸ್ಥಿತರಿದ್ದರು.