ಸೋಂಕು ನಿಯಂತ್ರಣಕ್ಕೆ ಕ್ರಮ ಜರುಗಿಸಿ : ಜಿಲ್ಲಾಧಿಕಾರಿ

ಗದಗ ಏ.28 : ಕೋವಿಡ್ ಎರಡನೇ ಅಲೆಯ ತೀವ್ರತೆಯನ್ನು ನಿಯಂತ್ರಿಸುವ ಹಿನ್ನೆಲೆಯಲ್ಲ್ಲಿ ರಾಜ್ಯ ಸರ್ಕಾರವು ಕಠಿಣ ಕ್ರಮಗಳನ್ನು ಒಳಗೊಂಡ ಮಾರ್ಗಸೂಚಿಗಳನ್ನು ಜಾರಿಗೊಳಿಸಿದ್ದು ಜಿಲ್ಲೆಯಲ್ಲಿ ಈ ಮಾರ್ಗಸೂಚಿಗಳ ಕಟ್ಟಿನಿಟ್ಟಿನ ಪಾಲನೆಯೊಂದಿಗೆ ಸೋಂಕು ನಿಯಂತ್ರಣಕ್ಕೆ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಡಳಿತ ಭವನದಲ್ಲಿ ಜರುಗಿದ ಜಿಲ್ಲೆಯ ತಹಶೀಲ್ದಾರರು, ಪೆÇೀಲಿಸ್ ಅಧಿಕಾರಿ, ಇ.ಓ., ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳ ಜೊತೆ ಜರುಗಿದ ವಿಡಿಯೋ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರದ ಮಾರ್ಗಸೂಚಿಗಳನ್ವಯ ಇದೇ 27 ರ ರಾತ್ರಿ 9 ಗಂಟೆಯಿಂದ ಮೇ 12ರ ಮುಂಜಾನೆ 6 ಗಂಟೆಯವರೆಗೆ ಕಠಿಣ ಕ್ರಮಗಳು ಜಾರಿಯಲ್ಲಿರುತ್ತವೆ. ಈ ಅವಧಿಯಲ್ಲಿ ಪ್ರತಿ ದಿನ ಮುಂಜಾನೆ 6 ರಿಂದ 10 ಗಂಟೆಯವರೆಗೆ ದಿನಸಿ, ಹಣ್ಣು, ಹಾಲು, ತರಕಾರಿ, ಮಾಂಸದ ಮಳಿಗೆಗೆಳು ತೆರೆದಿರುತ್ತವೆ. ಈ ಸಂದರ್ಭದಲ್ಲಿ ಜನ ದಟ್ಟಣೆಯಾಗದಂತೆ ನಿಗಾವಹಿಸಬೇಕು. ಮಾರುಕಟ್ಟೆಗಳನ್ನು ಆದಷ್ಟು ವಿಶಾಲವಾದ ಬಯಲು ಪ್ರದೇಶಗಳನ್ನು ಗುರುತಿಸಿ ಸ್ಥಳಾಂತರಿಸಲು ಅಗತ್ಯದ ಕ್ರಮ ಜರುಗಿಸುವಂತೆ ತಿಳಿಸಿದರು.

ರಾಜ್ಯಾದ್ಯಂತ ಸರಕಾರಿ ಹಾಗೂ ಖಾಸಗಿ ಬಸ ಸಂಚಾರ ಸಂಪೂರ್ಣ ಬಂದ ಮಾಡಲಾಗಿದ್ದು ಅಂತರ ಜಿಲ್ಲಾ ಪ್ರಯಾಣವನ್ನು ನಿರ್ಭಂಧಿಸಲಾಗಿರುತ್ತದೆ. ತುರ್ತು ಸಂದರ್ಭದಲ್ಲಿ ಮಾತ್ರ ಪ್ರಯಾಣಕ್ಕೆ ಅನುಮತಿಸಿದ್ದು ಈ ಸಂದರ್ಭದಲ್ಲಿ ಗುರುತಿನ ಚೀಟಿ, ದಾಖಲೆ ಹೊಂದಿರುವದನ್ನು ಪರಿಶೀಲಿಸಬೇಕು. ಕರ್ತವ್ಯದಲ್ಲಿರುವ ಅಧಿಕಾರಿಗಳ ಪ್ರಯಾಣಕ್ಕೆ ಅವಕಾಶವಿದ್ದು ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಪರಿಶೀಲಿಸುವಂತೆ ತಿಳಿಸಿದರು. ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿ ಮತ್ತು ಅವರನ್ನು ನೋಡಿಕೊಳ್ಳುವವರಿಗೆ ಅವಕಾಶವಿದ್ದು ಹೆಚ್ಚಿನ ದಾಖಲೆಗಳ ಅವಶ್ಯವಿರುವದಿಲ್ಲ.

ಕಟ್ಟಡ ನಿರ್ಮಾಣ ಹಾಗೂ ದುರಸ್ತಿ ಕಾಮಗಾರಿಗಳಿಗೆ ಅವಕಾಶವಿದ್ದು ವಾರಾಂತ್ಯದಲ್ಲಿ ಸೈಟಗಳಲ್ಲಿರುವ ಕಾರ್ಮಿಕರು ಮಾತ್ರ ಕೆಲಸ ಮಾಡಬಹುದಾಗಿದೆ. ನಗರ ಹಾಗೂ ತಾಲೂಕು ಮಟ್ಟದಲ್ಲಿ ಮನೆಗೆ ಆಹಾರ ತಲುಪಿಸಲು ಆಸಕ್ತರಿರುವ ಹೊಟೆಲಗಳನ್ನು ಗುರುತಿಸಿ ಮಾರ್ಗಸೂಚಿಗಳನ್ವಯ ಆಹಾರ ಸರಬರಾಜು ಮಾಡಲು ಅಗತ್ಯದ ಕ್ರಮ ಜರುಗಿಸುವಂತೆ ತಿಳಿಸಿದರು.

ಮದುವೆ ಸಮಾರಂಭಕ್ಕೆ 50 ಜನ ಹಾಗೂ ಅಂತ್ಯಕ್ರಿಯೆಗೆ 5 ಜನರಿಗೆ ಮಾತ್ರ ಅವಕಾಶವಿದ್ದು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ರಚಿಸಲಾದ ತಂಡಗಳಂತೆ ಗ್ರಾಮ ಪಂಚಾಯತ ಮಟ್ಟದಲ್ಲೂ ತಂಡಗಳನ್ನು ರಚಿಸಿ ಸಂತೆ, ಮದುವೆ, ಅಂತ್ಯಕ್ರಿಯೆಯಲ್ಲಿ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ದಂಡ ವಿಧಿಸಲು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಇತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.