ಸೋಂಕು ನಿಯಂತ್ರಣಕ್ಕೆ ಕಠಿಣ ಕ್ರಮ ಅಗತ್ಯ

ಗೌರಿಬಿದನೂರು : ತಾಲ್ಲೂಕಿನಲ್ಲಿ ಕೋವಿಡ್ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಎಲ್ಲ ಇಲಾಖೆಯ ಅಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಿ ಸೋಂಕಿನ ತಡೆಗೆ ಬದ್ಧರಾಗಬೇಕಾಗಿದ್ದು, ಇದಕ್ಕಾಗಿ ವ್ಯವಸ್ಥಿತ ರೀತಿಯಲ್ಲಿ ಎಲ್ಲರೂ ಕಾರ್ಯ ಪ್ರವೃತ್ತರಾಗಬೇಕಾಗಿದೆ ಎಂದು ಜಿ.ಪಂ ಸಿಇಒ ಪಿ.ಶಿವಶಂಕರ್ ತಿಳಿಸಿದರು.
ನಗರದ ತಾ.ಪಂ ಕಾರ್ಯಾಲಯದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಈಗಾಗಲೇ ಪ್ರತೀ ಗ್ರಾ.ಪಂ ವಾರು ಕೋವಿಡ್ ಲಸಿಕೆ ಪಡೆಯುವ ಬಗ್ಗೆ ಸ್ಥಳೀಯ ಗ್ರಾ.ಪಂ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ನಾಗರೀಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುತ್ತಿದ್ದಾರೆ. ೪೫ ವರ್ಷ ಮೇಲ್ಪಟ್ಟವರು ಸ್ವಯಂ ಪ್ರೇರಿತರಾಗಿ ಬಂದು ಲಸಿಕೆ ಪಡೆಯುತ್ತಿದ್ದಾರೆ. ಇದರ ಜತೆಗೆ ಕೋವಿಡ್ ೨ ನೇ ಅಲೆಯ ವಿರುದ್ಧ ಹೋರಾಟ ಮಾಡಲು ನಾವೆಲ್ಲರೂ ಸಿದ್ಧರಾಗಬೇಕಿದೆ. ಇದಕ್ಕಾಗಿ ವ್ಯವಸ್ಥಿತವಾಗಿ ಕಾರ್ಯಯೋಜನೆ ರೂಪಿಸಿಕೊಂಡು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾರ್ವಜನಿಕ ಸ್ಥಳಗಳಲ್ಲಿ ನಡುವಿನ ಅಂತರವನ್ನು ಪಾಲನೆ ಮಾಡುವಂತೆ ತಿಳಿಸಬೇಕಾಗಿದೆ ಎಂದರು.
ಸರ್ಕಾರದ ನಿಯಮಾನುಸಾರ ಅಗತ್ಯ ವಸ್ತುಗಳ ಖರೀದಿಗಾಗಿ ನಿಗದಿತ ಸಮಯವನ್ನು ನೀಡಿದ್ದು ನಾಗರೀಕರು ಈ ಸಮಯದಲ್ಲಿ ನಿಯಮಗಳನ್ನು ಪಾಲಿಸಿ ವಸ್ತುಗಳನ್ನು ಖರೀದಿಸುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಹೇಳಿದರು.
ತಹಸೀಲ್ದಾರ್ ಹಾಗೂ ಕೋವಿಡ್ ನೋಡಲ್ ಅಧಿಕಾರಿ ಎಚ್.ಶ್ರೀನಿವಾಸ್ ಮಾತನಾಡಿ, ಈಗಾಗಲೇ ಪ್ರತೀ ಗ್ರಾಮ ಹಾಗೂ ನಗರದಲ್ಲಿ ಪ್ರತೀ ವಾರ್ಡ್ ಗೆ ಟಾಸ್ಕ್ ಫೋರ್ಸ್ ಸಮಿತಿಗಾಗಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪೊಲೀಸ್ ಇಲಾಖೆಯ ಸಹಕಾರದಿಂದ ಅಗತ್ಯವಿರುವ ಗಡಿಭಾಗದಲ್ಲಿ ಚೆಕ್ ಪೋಸ್ಟ್ ಗಳನ್ನು ನಿರ್ಮಾಣ ಮಾಡಲಾಗಿದ್ದು, ಈ ಮಾರ್ಗವಾಗಿ ಸಂಚರಿಸುವ ಪ್ರತಿಯೊಬ್ಬರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ಹೇಳಿದರು.
ಇದೇ ವೇಳೆ ಜಿ.ಪಂ ಉಪ ಕಾರ್ಯದರ್ಶಿ ನೋಮೇಶ್ ಕುಮಾರ್, ತಾ.ಪಂ ಇಒ ಎನ್.ಮುನಿರಾಜು, ತಾಲ್ಲೂಕು ಆರೋಗ್ಯ ಅಧಿಕಾರಿ ಓ.ರತ್ನಮ್ಮ, ಹಿರಿಯ ಆರೋಗ್ಯ ಅಧಿಕಾರಿ ಮಂಜುನಾಥ್ ಇತರರು ಭಾಗವಹಿಸಿದ್ದರು.