ಸೋಂಕು ನಿಯಂತ್ರಣಕ್ಕೆ ಉಡಾಫೆ ಅಡ್ಡಿ ಪರೀಕ್ಷೆ ಭೀತಿ, ಲಸಿಕೆ ಕುರಿತ ಸುಳ್ಳು ಮಾಹಿತಿ, ಹಳ್ಳಿಗಳಲ್ಲಿ ಸೋಂಕು ತಡೆ ವಿಫಲ


ನವದೆಹಲಿ,ಜೂ. ೫- ಕೊರೊನಾ ಸೋಂಕು ಪರೀಕ್ಷೆಯ ಭೀತಿ, ಲಸಿಕೆ ಬಗೆಗಿನ ಅಪಪ್ರಚಾರ, ಅಂತೆ-ಕಂತೆಗಳು, ಸೋಂಕು ಬಂದರೆ ತಮಗೇನೂ ಆಗುವುದಿಲ್ಲ ಎಂಬ ಉಡಾಫೆ ಈ ಎಲ್ಲಾ ಕಾರಣದಿಂದ ದೇಶದ ಗ್ರಾಮೀಣ ಭಾಗದಲ್ಲಿ ಸೋಂಕು ನಿಯಂತ್ರಣ ಕ್ಲಿಷ್ಟಕರವಾಗಿ ಸೋಂಕು ನಿಯಂತ್ರಣ ಕಠಿಣ ಎನಿಸಿದೆ.
ಆಶಾಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರು ಹಳ್ಳಿಗಳ ಮನೆ ಮನೆಗೆ ತೆರಳಿ ಕೊರೊನಾ ಸೋಂಕು ಪರೀಕ್ಷೆ ಮಾಡಿಸಿಕೊಳ್ಳುವಂತೆ ಹಾಗೂ ಲಸಿಕೆಯಿಂದ ಆಗುವ ಪ್ರಯೋಜನಗಳ ಬಗ್ಗೆ ಜನರಿಗೆ ಮನವರಿಕೆ ಮಾಡುತ್ತಿದ್ದರೂ ಇಲ್ಲಸಲ್ಲದ ಅಂತೆ-ಕಂತೆಗಳ ಅಪಪ್ರಚಾರ, ನಿರ್ಲಕ್ಷ್ಯ, ಉಡಾಫೆಯಿಂದ ಗ್ರಾಮೀಣ ಜನ ಸೋಂಕು ಪರೀಕ್ಷೆಗೆ ಮನಸ್ಸು ಮಾಡದಿರುವುದು ಹಳ್ಳಿಗಳಲ್ಲಿ ಸೋಂಕು ನಿಯಂತ್ರಣ ಸಾಧ್ಯವಾಗುತ್ತಿಲ್ಲ ಎಂಬುದು ಆರೋಗ್ಯ ಕಾರ್ಯಕರ್ತರ ಅಳಲಾಗಿದೆ. ಲಸಿಕೆಯಿಂದ ಅಡ್ಡ ಪರಿಣಾಮವಾಗುತ್ತದೆ. ಲಸಿಕೆ ತೆಗೆದುಕೊಂಡರೆ ಮುಂದೆ ತೊಂದರೆಯಾಗುತ್ತದೆ ಎಂಬ ಅಪಪ್ರಚಾರಗಳು ಹಳ್ಳಿಗರು ಲಸಿಕೆ ಹಾಕಿಸಿಕೊಳ್ಳುವಂತೆ ಹಿಂದೇಟು ಹಾಕಿವೆ.
ಹಳ್ಳಿಗಳಲ್ಲಿ ಲಸಿಕಾ ಕೇಂದ್ರಗಳನ್ನೂ ತೆರೆದಿದ್ದರೂ ಕೆಲವೆಡೆ ಲಸಿಕೆ ಹಾಕಿಸಿಕೊಳ್ಳಲು ಯಾರೂ ಲಸಿಕಾ ಕೇಂದ್ರಕ್ಕೆ ಬರುತ್ತಿಲ್ಲ ಎಂದು ವರದಿಗಳು ಹೇಳಿವೆ.
ಕೆಲವು ಹಳ್ಳಿಗಳಲ್ಲಂತೂ ಆರೋಗ್ಯ ಕಾರ್ಯಕರ್ತರು ಸೋಂಕು ಪರೀಕ್ಷೆಗೆ ಮನೆ ಬಾಗಿಲಿಗೆ ಬಂದ ತಕ್ಷಣವೇ ಹಿಂದಿನ ಬಾಗಿಲಿನಿಂದ ಜನ ಪಲಾಯನ ಮಾಡುತ್ತಿರುವ ಪ್ರಕರಣಗಳು ವರದಿಯಾಗಿವೆ.
ಸೋಂಕು ನಿಯಂತ್ರಣಕ್ಕೆ ಲಸಿಕೆ ಹಾಕಿಸಿಕೊಳ್ಳುವಂತೆ ಆರೋಗ್ಯ ಕಾರ್ಯಕರ್ತರು ಹಳ್ಳಿಗರಿಗೆ ಮನವರಿಕೆ ಮಾಡಿಕೊಡುತ್ತಿದ್ದರು ಕೆಲವರು ಜಪ್ಪಯ್ಯ ಎಂದರೂ ಲಸಿಕೆ ಹಾಕಿಸಿಕೊಳ್ಳಲು ಒಪ್ಪುತ್ತಿಲ್ಲ. ಇದು ಸೋಂಕು ನಿಯಂತ್ರಣಕ್ಕೆ ಹಿನ್ನೆಡೆಯಾಗಿ ಪರಿಣಮಿಸಿದೆ.
ಲಸಿಕೆ iತ್ತು ಸೋಂಕು ಪರೀಕ್ಷೆಗೆ ಒತ್ತಡ ಹೇರುವ ಆರೋಗ್ಯ ಕಾರ್ಯಕರ್ತರ ಮೇಲೆ ಸಿಟ್ಟಿಗೆದ್ದ ಹಳ್ಳಿಗರು ಹಲ್ಲೆ ನಡೆಸಿರುವ ಪ್ರಕರಣಗಳು ದೇಶದ ಹಲವೆಡೆ ನಡೆದಿದೆ. ಹಳ್ಳಿಗರಿಗೆ ಹೋಲಿಸಿದರೆ ನಗರ ವಾಸಿಗಳು ಲಸಿಕೆ ಹಾಕಿಸಿಕೊಳ್ಳಲು
ಮುಗಿ ಬಿದ್ದಿದ್ದಾರೆ. ದೇಶದ ನಗರಗಳಲ್ಲಿ ಶೇ. ೩೦ ರಷ್ಟು ಮಂದಿ ಈಗಾಗಲೇ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. ಆದರೆ, ಹಳ್ಳಿಗಳಲ್ಲಿ ಮೊದಲ ಡೋಸ್ ಲಸಿಕೆ ಪಡೆದ ಜನರ ಶೇಕಡಾವಾರು ಪ್ರಮಾಣ ಶೇ. ೧೫ ಮೀರಿಲ್ಲ.
ಲಸಿಕೆ ಬಗೆಗಿನ ಭೀತಿ, ವದಂತಿ, ಅಪಪ್ರಚಾರಗಳು ಇದಕ್ಕೆ ಕಾರಣ.
ದೇಶದ ಜನಸಂಖ್ಯೆಯಲ್ಲಿ ಶೇ. ೭೦ ಮಂದಿ ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ. ಹಳ್ಳಿಗಳಲ್ಲಿ ಕೊರೊನಾ ತಾಂಡವವಾಡುತ್ತಿದೆ. ಬಹುತೇಕರಲ್ಲಿ ಜ್ವರ, ಮತ್ತಿತರ ಲಕ್ಷಣಗಳು ಇದ್ದರೂ ಹಳ್ಳಿಗರು ಸೋಂಕು ಪರೀಕ್ಷೆ ಮಾಡಿಸಿಕೊಳ್ಳದೆ, ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿರುವುದು ಸೋಂಕು ನಿಯಂತ್ರಣಕ್ಕೆ ತರಲು ಅಡ್ಡಿಯಾಗಿದೆ.
ಪೊಲೀಯೊ ಲಸಿಕೆ ಮಾದರಿಯಲ್ಲೇ ಕೊರೊನಾ ಲಸಿಕೆ ಅಭಿಯಾನವನ್ನು ನಡೆಸಿ ಹಳ್ಳಿಗಳ ಮನವೊಲಿಸಿ ಲಸಿಕಾ ಅಭಿಯಾನವನ್ನು ನಡೆಸುವ ಮೂಲಕ ಹಳ್ಳಿಗಳಲ್ಲಿ ಸೋಂಕು ನಿಯಂತ್ರಿಸಲು ಸಾಧ್ಯ ಎಂದು ತಜ್ಞರ ಅಭಿಪ್ರಾಯವಾಗಿದೆ.