ಸೋಂಕು ನಿಯಂತ್ರಣಕ್ಕೆ ಅಧಿಕಾರಿಗಳು ನಿಗಾ ವಹಿಸಿ: ಮೊಹಸಿನ್

ಗದಗ ನ.21: ಕೊರೋನಾ ಸೋಂಕು ನಿಯಂತ್ರಣಕ್ಕೆ ನೀಡಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಎಲ್ಲರೂ ಪಾಲಿಸುವುದರ ಮೂಲಕ ಸೋಂಕು ಹತೋಟೆಗೆ ಅಧಿಕಾರಿಗಳು ನಿಗಾವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್ ಸೂಚಿಸಿದರು.
ಜಿಲ್ಲಾಡಳಿತ ಭವನದ ಜಿ. ಪಂ. ಸಭಾಂಗಣದಲ್ಲಿ ಏರ್ಪಡಿಸಿದ ಜಿಲ್ಲಾ ಮಟ್ಟದ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗದಗ ಜಿಲ್ಲೆಯ ಕೊರೋನಾ ಅಂಕಿ ಅಂಶಗಳ ಮಾಹಿತಿ ಪಡೆದು, ಸೋಂಕು ಸದ್ಯದ ಪರಿಸ್ಥಿತಿಯಲ್ಲಿ ನಿಯಂತ್ರಣದಲ್ಲಿದ್ದು ಮುಂದಿನ ದಿನಗಳಲ್ಲಿ ಅಧಿಕವಾದಲ್ಲಿ ಅಗತ್ಯವಿರುವ ಎಲ್ಲ ರೀತಿಯ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿಕೊಳ್ಳೂವುದರ ಮೂಲಕ ನಿಯಂತ್ರಣಕ್ಕೆ ಮುಂದಾಗಬೇಕು. ಸಾರ್ವಜನಿಕರಿಗೆ, ಸೋಂಕಿತರಿಗೆ ಕೊರೋನಾ ಹಾಗೂ ಚಿಕಿತ್ಸೆ ಕುರಿತು ಸಹಾಯವಾಣಿ ಮೂಲಕ ನಿಖರ ಮಾಹಿತಿಯನ್ನು ಒದಗಿಸಬೇಕು. ಹೋಮ್ ಕ್ವಾರಂಟೈನ್ ನಲ್ಲಿರುವವರ ಮೇಲೆ ಆಗಾಗ್ಗೆ ತಪಾಸಣೆ ನಡೆಸುವ ಮೂಲಕ ಸೋಂಕು ಹರಡದಂತೆ ಕಾರ್ಯನಿರ್ವಹಣೆ ಅಗತ್ಯ ಎಂದರು.
ಜಿಲ್ಲೆಯಲ್ಲಿ ಕಾಲೇಜುಗಳು ಆರಂಭವಾಗಿದ್ದು ಆದ್ಯತೆ ಮೇರೆಗೆ ಕಾಲೇಜು ವಿದ್ಯಾರ್ಥಿಗಳ ಕೊರೋನಾ ಸೋಂಕು ಪರೀಕ್ಷೆಯನ್ನು ಕಾಲೇಜುಗಳಿಗೆ ತೆರಳಿ ಅಲ್ಲಿಯೇ ಗಂಟಲು ದ್ರವ ಸಂಗ್ರಹಿಸಿ ತಕ್ಷಣ ವರದಿ ನೀಡುವ ಮೂಲಕ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಲು ಆರೋಗ್ಯ ಇಲಾಖೆ ಸಿಬ್ಬಂದಿಗಳು ಕೆಲಸ ನಿರ್ವಹಿಸುವಂತೆ ತಿಳಿಸಿದರು.
ಬೆಳೆ ಸಮೀಕ್ಷೆ ಪೂರ್ಣಗೊಂಡಿದ್ದು ಆನ್‍ಲೈನ್‍ನಲ್ಲಿ ನೊಂದಣಿ ಕಾರ್ಯ ಆದಷ್ಟು ಬೇಗನೆ ಮುಕ್ತಾಯಗೊಳಿಸಿ. ಪ್ರವಾಹ ಹಾಗೂ ಮಳೆಯಿಂದ ಹಾನಿಗೊಳಗಾದ ಮನೆಗಳ ಸರ್ವೆ ಕಾರ್ಯ ನಡೆಸಿ ಮಾರ್ಗಸೂಚಿಗಳನ್ವಯ ಪರಿಹಾರ ವಿತರಣೆ ಮುಕ್ತಾಯಗೊಳಿಸುವಂತೆ ತಿಳಿಸಿದರು.
ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಜಿಲ್ಲೆಯಲ್ಲಿ 30,000 ಕಾರ್ಡುಗಳನ್ನು ವಿತರಿಸಿದ ಕುರಿತು ಮಾಹಿತಿ ಪಡೆದು ಕಾರ್ಡು ವಿತರಣೆಯ ಕಾರ್ಯ ಚುರುಕುಗೊಳಿಸುವ ಮೂಲಕ ಅರ್ಹ ಎಲ್ಲರಿಗೂ ಆರೋಗ್ಯ ಕರ್ನಾಟಕ ಕಾರ್ಡ ತಲುಪುವಂತೆ ಕ್ರಮ ವಹಿಸಬೇಕು. ಈ ಮೂಲಕ ಜಿಲ್ಲೆಯ ಬಡವರಿಗೆ ಉಚಿತ ಆರೋಗ್ಯ ಸೇವೆ ದೊರೆಯುವಂತೆ ಮಾಡಬೇಕೆಂದು ತಿಳಿಸಿದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮ, ದೇವರಾಜ ಅರಸು ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಸೇರಿದಂತೆ ಇತರೆ ನಿಗಮಗಳಲ್ಲಿ ಕಳೆದ ಎರಡು ಮೂರು ವರ್ಷಗಳಲ್ಲಿ ಕೈಗೊಂಡ ಕಾಮಗಾರಿಗಳು ಪೂರ್ಣಗೊಳ್ಳದಿರುವ ಕುರಿತು ಜಿಲ್ಲಾ ಮಟ್ಟದಲ್ಲಿ ಮಾಸಿಕಿವಾಗಿ ಪರಿಶೀಲನೆ ನಡೆಸಿ ಕಾಮಗಾರಿಗಳ ಮುಕ್ತಾಯಕ್ಕೆ ಸೂಚಿಸಿದರು. ಅರಣ್ಯ ಭೂಮಿ ಒತ್ತುವರಿ ಕುರಿತಂತೆ ಜಂಟಿ ಸರ್ವೇ ಮಾಡುವ ಮೂಲಕ ಅರಣ್ಯ ಭೂಮಿಯನ್ನು ಹದ್ದುಬಸ್ತುಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್ ಹೇಳಿದರು.
ಸಭೆಗೂ ಮುನ್ನ ಅಪರ ಜಿಲ್ಲಾಧಿಕಾರಿ ಎಂ. ಸತೀಶ್ ಕುಮಾರ್ ಅವರು, ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ರಾಷ್ಟ್ರೀಯ ಐಕ್ಯತಾ ಪ್ರಮಾಣ ವಚನ ಬೋಧಿಸಿದರು. ಈ ವೇಳೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ. ಸಲಗರೆ ಇದ್ದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಸುಂದರೇಶ್‍ಬಾಬು, ಜಿಲ್ಲಾ ಪಂಚಾಯತ್ ಸಿಇಓ ಡಾ. ಆನಂದ್ ಕೆ, ಉಪಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ, ಅಪರ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.