ಸೋಂಕು ನಿಗ್ರಹಕ್ಕೆ ಮೈಕ್ರೊ ಕಂಟೈನ್ಮೆಂಟ್

ಪಂಚಾಯ್ತಿ ಮಟ್ಟದಲ್ಲಿ ನಿಗಾ ಸಮಿತಿ ರಚನೆ ನಾಳೆ ಸಿಎಂ ತಹಶೀಲ್ದಾರ್, ಗ್ರಾ.ಪಂ ಅಧ್ಯಕ್ಷರು, ಪಿಡಿಓಗಳಿಂದ ಸಂವಾದ
ಬೆಂಗಳೂರು,ಮೇ ೨೫- ರಾಜ್ಯದ ಗ್ರಾಮೀಣ ಭಾಗದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಸೋಂಕು ನಿಗ್ರಹ ಸಂಬಂಧ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಮೈಕ್ರೊ ಕಂಟೈನ್ಮೆಂಟ್ ಝೋನ್‌ಗಳನ್ನು ಮಾಡಿ, ಸ್ಥಳೀಯ ಅಧಿಕಾರಿಗಳನ್ನು ಒಳಗೊಂಡಕಣ್ಗಾವಲು
ಸಮಿತಿ ರಚಿಸಿ ಸೋಂಕು ನಿಗ್ರಹಕ್ಕೆ ಸರ್ಕಾರ ಮುಂದಾಗಿದೆ.
ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಾಳೆ ರಾಜ್ಯದ ತಹಶೀಲ್ದಾರ್‌ಗಳು ಮತ್ತು ಗ್ರಾಮಪಂಚಾಯ್ತಿಗಳ ಅಧ್ಯಕರು ಹಾಗೂ ಪಿಡಿಓಗಳ ಜತೆ ವೀಡಿಯೊ ಸಂವಾದ ನಡೆಸಲಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮೈಕ್ರೊ ಕಂಟೈನ್ಮೆಂಟ್ ಝೋನ್‌ಗಳನ್ನು ಹೆಚ್ಚಳ ಮಾಡಿ ಸೋಂಕನ್ನು ನಿಯಂತ್ರಿಸಲು ನಿರ್ಧರಿಸಲಾಗಿದೆ. ಹಳ್ಳಿಗಳಲ್ಲಿ ಮೈಕ್ರೊ ಕಂಟೈನ್ಮೆಂಟ್ ಝೋನ್‌ಗಳಲ್ಲಿ ಸಮಿತಿ ರಚನೆ ಮಾಡಿ ಸೋಂಕು ನಿಗ್ರಹಕ್ಕೆ ಕ್ರಮಕೈಗೊಳ್ಳುತ್ತೇವೆ ಎಂದರು,
ಈ ಸಮಿತಿಯಲ್ಲಿ ಸ್ಥಳೀಯ ಪೊಲೀಸರು, ಸ್ಥಳೀಯ ಅಧಿಕಾರಿಗಳು ಇರುತ್ತಾರೆ. ಅನಗತ್ಯ ಓಡಾಟಕ್ಕೆ ನಿರ್ಬಂಧ ಮತ್ತಿತರ ಕಠಿಣ ಕ್ರಮಗಳನ್ನು ಜಾರಿಗೊಳಿಸುವ ತೀರ್ಮಾನವನ್ನು ಈ ಸಮಿತಿ ಕೈಗೊಳ್ಳುತ್ತದೆ ಎಂದ ಅವರು, ಹಾಗೆಯೇ, ಸೋಂಕಿತರಿಗೆ ಔಷಧ ವಿತರಣೆ ಜತೆಗೆ ಸೋಂಕು ಹರಡದಂತೆ ಈ ಸಮಿತಿ ನಿಗಾ ವಹಿಸಲಿದೆ ಎಂದು ಹೇಳಿದರು.
ಹಳ್ಳಿಗಳಲ್ಲಿ ಸೋಂಕು ನಿಗ್ರಹಕ್ಕೆ ಮೈಕ್ರೊ ಕಂಟೈನ್ಮೆಂಟ್ ಝೋನ್‌ಗಳನ್ನು ಹೆಚ್ಚಳ ಮಾಡಿ ಸೋಂಕು ನಿಗ್ರಹಕ್ಕೆ ಅಗತ್ಯ ಸಲಹೆ ಸೂಚನೆಗಳನ್ನು ಮುಖ್ಯಮಂತ್ರಿಗಳು ನಾಳಿನ ವೀಡಿಯೊ ಸಂವಾದದಲ್ಲಿ ನೀಡುವರು ಎಂದು ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಹಳ್ಳಿಗಳಲ್ಲಿ ಸೋಂಕು ನಿಗ್ರಹ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲು ತಹಶೀಲ್ದಾರ್ ಮತ್ತು ಪಂಚಾಯ್ತಿ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ಮತ್ತು ಜವಾಬ್ದಾರಿಯನ್ನು ನೀಡಲಾಗುವುದು ಎಂದು ಅವರು ಹೇಳಿದರು.
ನಾಳಿನ ವೀಡಿಯೊ ಸಂವಾದದಲ್ಲಿ ಮುಖ್ಯಮಂತ್ರಿಗಳು ಹಳ್ಳಿಗಳಲ್ಲಿ ಸೋಂಕು ನಿಯಂತ್ರಣ ಸಂಬಂಧ ಕೆಲ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಿದ್ದಾರೆ. ಶತಾಯ-ಗತಾಯ ಗ್ರಾಮೀಣ ಭಾಗದಲ್ಲಿ ಸೋಂಕನ್ನು ನಿಗ್ರಹಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ಸೋಂಕು ನಿಗ್ರಹಕ್ಕೆ ರಾಜ್ಯದಲ್ಲಿ ಈಗಾಗಲೇ ಲಾಕ್‌ಡೌನ್‌ನ್ನು ವಿಸ್ತರಿಸಲಾಗಿದೆ. ಲಾಕ್‌ಡೌನ್ ಮತ್ತು ಕೆಲ ಓಡಾಟಗಳಿಗೆ ನಿರ್ಬಂಧ ಹೇರುವ ಜವಾಬ್ದಾರಿಯನ್ನು ಸ್ಥಳೀಯ ಆಡಳಿತಕ್ಕೆ ನೀಡಲಾಗಿದೆ ಪರಿಸ್ಥಿತಿಯನ್ನು ನೋಡಿಕೊಂಡು ಸ್ಥಳೀಯ ಆಡಳಿತ ನಿರ್ಬಂಧಗಳನ್ನು ಜಾರಿ ಮಾಡಲಿದೆ ಎಂದರು.
ರಾಜ್ಯದಲ್ಲಿ ಕೊರೊನಾ ಸೋಂಕು ಕಡಿಮೆಯಾಗಿದ್ದರೂ ಸಾವಿನ ಸಂಖ್ಯೆ ಹೆಚ್ಚಾಗಿರುವುದಕ್ಕೆ ೨ನೇ ಅಲೆಯ ವೇಗವೇ ಕಾರಣ. ೨ನೇ ಅಲೆಯಲ್ಲಿ ಸೋಂಕು ಬಹಳ ವೇಗವಾಗಿ ಹರಡುತ್ತಿದೆ ಎಂದು ವ್ಯಾಖ್ಯಾನಿಸಿದರು.
ವೇಗವಾಗಿ ಸೋಂಕು ಹರಡುತ್ತಿರುವ ಪರಿಣಾಮ ಕೆಲವರಿಗೆ ಕೋವಿಡ್ ಬಂದ ೨-೩ ದಿನಗಳಲ್ಲೇ ಆಮ್ಲಜನಕದ ಮಟ್ಟ ಕಡಿಮೆಯಾಗಿ ಉಸಿರಾಟ, ನ್ಯುಮೋನಿಯಾ ಸಮಸ್ಯೆಗಳಿಂದ ಸಾವು-ನೋವು ಹೆಚ್ಚಾಗುತ್ತಿದೆ ಎಂದರು.
ಪ್ರತಿ ಜಿಲ್ಲೆಯಲ್ಲೂ ಕೋವಿಡ್ ಪೀಡಿತ ಮಕ್ಕಳಿಗಾಗಿ ವಿಶೇಷ ವಾರ್ಡ್ ಹಾಗೂ ಐಸಿಯು ಬೆಡ್ ವ್ಯವಸ್ಥೆ ಮಾಡಿ ಮಕ್ಕಳ ಆರೈಕೆಗೆ ಗಮನ ನೀಡಿದ್ದೇವೆ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದು ಸಂಜೆ ಕೊರೊನಾ ಸ್ಥಿತಿಗತಿಯ ಬಗ್ಗೆ ಸಚಿವರುಗಳ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಕೋವಿಡ್‌ನ ಪರಿಸಥಿತಿ, ಬ್ಲಾಕ್ ಫಂಗಸ್ ರೋಗ ನಿಯಂತ್ರಣ ಸೇರಿದಂತೆ ಎಲ್ಲ ರೀತಿಯ ಚರ್ಚೆಗಳು ಆಗಲಿವೆ ಎಂದರು.