ಸೋಂಕು ನಿಗ್ರಹಕ್ಕೆ ಕಠಿಣ ಕ್ರಮ : ಸಿಎಂ ತಾಕೀತು

for front moffisil and city page 8

ಬೆಂಗಳೂರು,ಮೇ ೨೯- ರಾಜ್ಯದಲ್ಲಿ ಕೊರೊನಾ ಸೋಂಕು ನಿಗ್ರಹ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರತಿ ಜಿಲ್ಲೆಗಳ ಶಾಸಕರು, ಸಂಸದರು ಮತ್ತು ಅಧಿಕಾರಿಗಳ ಜತೆ ಚರ್ಚೆ ನಡೆಸಿ ಸೋಂಕು ನಿಗ್ರಹಕ್ಕೆ ಕಠಿಣ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಮೈಸೂರು, ಹಾಸನ, ಬೆಳಗಾವಿ, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳ ಶಾಸಕರು, ಸಂಸದರೊಂದಿಗೆ ವೀಡಿಯೊ ಸಂವಾದ ನಡೆಸಿದರು.
ಈ ವೀಡಿಯೊ ಸಂವಾದದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಜಿಲ್ಲೆಗಳ ಕೊರೊನಾ ಸ್ಥಿತಿಗತಿ, ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳು, ಸರ್ಕಾರದಿಂದ ಸಿಗಬೇಕಾಗಿರುವ ನೆರವು, ಎಲ್ಲದರ ಬಗ್ಗೆಯೂ ಮಾಹಿತಿ ಪಡೆದುಕೊಂಡು ಯಾವುದೇ ಸಮಸ್ಯೆಗಳಿದ್ದರೆ ಶಾಸಕರು, ಸಂಸದರು, ಅಧಿಕಾರಿಗಳು ತಮ್ಮನ್ನು ಸಂಪರ್ಕಿಸುವಂತೆ ಸೂಚಿಸಿದರು.
ಕೊರೊನಾ ನಿಗ್ರಹ ನಮ್ಮ ಮೊದಲ ಆಧ್ಯತೆ, ಹಾಗಾಗಿ, ಎಲ್ಲರೂ ಒಟ್ಟಾಗಿ ಜಿಲ್ಲೆಗಳಲ್ಲಿ ಅದರಲ್ಲೂ ಹಳ್ಳಗಳಲ್ಲಿ ಕೊರೊನಾ ತಡೆಗಟ್ಟಲು ಶ್ರಮವಹಿಸಿ ಎಂದು ಅವರು ಹೇಳಿದರು.
ಕೊರೊನಾ ತಡೆಗಟ್ಟಲು ಸರ್ಕಾರದಿಂದ ಎಲ್ಲ ನೆರವನ್ನು ನೀಡಿದ್ದೇವೆ. ಮತ್ತೇನಾದರೂ ಸಮಸ್ಯೆಗಳಿದ್ದು, ಸರ್ಕಾರದಿಂದ ಮತ್ತಷ್ಟು ನೆರವು ಬೇಕಿದ್ದರೆ ತಕ್ಷಣವೇ ತಮ್ಮನ್ನು ಸಂಪರ್ಕಿಸಿದರೆ ನೆರವು ಸಿಗುವಂತೆ ನೋಡಿಕೊಳ್ಳುವುದಾಗಿ ಅವರು ಹೇಳಿದರು.
ಹಳ್ಳಿಗಳಲ್ಲಿ ಸೋಂಕು ಹೆಚ್ಚುತ್ತಿದೆ. ಹಾಗಾಗಿ, ಹಳ್ಳಿಗಳ್ತ ಹೆಚ್ಚು ಗಮನ ನೀಡುವ ಅಗತ್ಯವಿದೆ. ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲಿಸಲು ಸೂಚನೆ ನೀಡಿದ ಮುಖ್ಯಮಂತ್ರಿಗಳು ಔಷಧಿ, ಆಕ್ಸಿಜನ್ ಕೊರತೆಯಾಗದಂತೆ ಎಚ್ಚರ ವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮುಖ್ಯಮಂತ್ರಿಗಳು ಈ ವೀಡಿಯೊ ಸಂವಾದ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಸಿ.ಎನ್ ಅಶ್ವತ್ಥ ನಾರಾಯಣ, ಸಚಿವರುಗಳಾದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಡಾ. ಕೆ.ಸುಧಾಕರ್, ಆರ್. ಆಶೋಕ್, ಮುಖ್ಯಕಾರ್ಯದರ್ಶಿ ರವಿಕುಮಾರ್ ಸೇರದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.