ಸೋಂಕು ತುಸು ಇಳಿಕೆ ಆದರೂ ತಪ್ಪದ ಸಂಕಟ

ನವದೆಹಲಿ, ಏ.೨೭- ದೇಶದಲ್ಲಿ ಕೊರೊನಾ ಸೋಂಕು ಸಂಖ್ಯೆ ದಿನದಿಂದ ದಿನಕ್ಕೆ ದಾಖಲೆಯ ಮಟ್ಟದಲ್ಲಿ ಏರಿಕೆ ಆಗುತ್ತಿದೆ. ಕಳೆದ ಆರು ದಿನಗಳಿಂದ ಸತತವಾಗಿ ಮೂರು ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದೆ.

ದೇಶದಲ್ಲಿ ನೆನ್ನೆ ದಾಖಲಾಗಿದ್ದ ೩,೫೨ ಲಕ್ಷಕ್ಕಿಂತ ಇಂದು ೩.೨೩ ಲಕ್ಷ ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ನಿನ್ನೆಗೆ ಹೋಲಿಕೆ ಮಾಡಿದರೆ, ಇಂದು ತುಸು ಇಳಿಕೆಯಾಗಿದೆ. ಆದರೆ ೬ನೇ ದಿನವೂ ಮೂರು ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ಏರಿಕೆಯಾಗಿದೆ.

ಕೊರೋನಾ ಸೋಂಕಿತರು ಹಾಸಿಗೆ, ಆಮ್ಲಜನಕ, ಸಕಾಲಕ್ಕೆ ಚಿಕಿತ್ಸೆ ಸಿಗದೆ ನರಕ ಯಾತನೆ ಅನುಭವಿಸುವ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ. ಆರೋಗ್ಯ ವ್ಯವಸ್ಥೆಯ ಹದಗೆಟ್ಟಿರುವುದಕ್ಕೆ ಕನ್ನಡಿ ಹಿಡಿದಂತಿದೆ

ದೇಶದಲ್ಲಿ ನಿತ್ಯ ಸೋಂಕು ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಆಮ್ಲಜನಕ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಕೆಲವು ಕಡೆ ಹಾಸಿಗೆ ಸಿಗದೆ ಆಸ್ಪತ್ರೆಯ ಮುಂಭಾಗವೇ ಆಮ್ಲಜನಕದ ಸಿಲಿಂಡರ್ ಹಿಡಿದು ಕೆಲ ರೋಗಿಗಳು ನರಳಾಡುತ್ತಿದ್ದರೆ ಬಹುತೇಕ ಕಡೆ ರೋಗಿಗಳಿಗೆ ಆಮ್ಲಜನಕ ಸಿಗದೇ ನರಳಾಡಿ ಪ್ರಾಣಬಿಡುವ ಸ್ಥಿತಿ ನಿರ್ಮಾಣವಾಗಿದೆ.

ಮಹಾರಾಷ್ಟ್ರ, ಕರ್ನಾಟಕ, ಕೇರಳ, ತಮಿಳುನಾಡು ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್ಗಢ, ಪಂಜಾಬ್, ದೆಹಲಿ, ಹರ್ಯಾಣ, ಪಶ್ಚಿಮಬಂಗಾಳ ಸೇರಿದಂತೆ ಅನೇಕ ದೇಶದ ರಾಜ್ಯಗಳಲ್ಲಿ ಸೋಂಕು ಸಂಖ್ಯೆ ನಿತ್ಯ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯೂ ದಾಖಲೆ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ.

೩.೨೩ ಲಕ್ಷ ಮಂದಿಗೆ ಸೋಂಕು:

ದೇಶದಲ್ಲಿ ಕಳೆದ ೨೪ ಗಂಟೆಗಳಲ್ಲಿ ೩,೨೩,೧೪೪ ಮಂದಿಗೆ ಹೊಸದಾಗಿ ಕೊರೋನಾ ಸೋಂಕು ಧೃಡ ಪಟ್ಟಿದ್ದು ೨೭೭೧ ಮುಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ೨,೫೧,೮೨೭ ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಇಂದು ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸಂಖ್ಯೆ ಸೇರಿದಂತೆ ದೇಶದಲ್ಲಿ ಇದುವರೆಗೂ ೧,೭೬,೩೬,೩೦೭ ಮಂದಿಗೆ ಸೋಂಕು ಏರಿಕೆಯಾಗಿದೆ. ದೇಶದಲ್ಲಿ ಇದುವರೆಗೂ ೧,೪೫,೫೬,೨೦೯ ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸೋಂಕು ಕಾಣಿಸಿಕೊಂಡ ದಿನದಿಂದ ಇಲ್ಲಿಯತನಕ ಸೋಂಕಿನಿಂದ ೧,೯೭,೮೯೪ ಮಂದಿ ಸಾವನ್ನಪ್ಪಿದ್ದು ದೇಶದಲ್ಲಿ ಮೃತಪಟ್ಟವರ ಸಂಖ್ಯೆ ೨ ಲಕ್ಷ ಸಮೀಪಿಸಿದೆ.

೨೯ ಲಕ್ಷ ಸಕ್ರಿಯ ಪ್ರಕರಣ:

ದೇಶದಲ್ಲಿ ದಿನದಿಂದ ದಿನಕ್ಕೆ ಸೋಂಕು ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳು ಕೂಡ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ.

ಸದ್ಯ ದೇಶದಲ್ಲಿ ೨೮,೮೨,೨೦೪ ಮಂದಿಯಲ್ಲಿ ಸಕ್ರಿಯ ಪ್ರಕರಣಗಳು ಇದ್ದು ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ತಜ್ಞರು ಅಂದಾಜು ಮಾಡಿದ್ದಾರೆ.

ದೇಶದಲ್ಲಿ ಇದುವರೆಗೂ ೧೪,೫೨,೭೧,೧೮೬ ಮಂದಿಗೆ ಸೋಂಕಿನ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ

ಸಾವಿನ ಸಂಖ್ಯೆ ಏರಿಕೆ.

ದೇಶದಲ್ಲಿ ದಿನದಿಂದ ದಿನಕ್ಕೆ ದಾಖಲೆಯ ಪ್ರಮಾಣದಲ್ಲಿ ಸೋಂಕು ಸಂಖ್ಯೆ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆ, ಆಮ್ಲಜನಕ ಸೇರಿದಂತೆ ಇತರೆ ವೈದ್ಯಕೀಯ ಸೌಲಭ್ಯ ಸಿಗದೆ ಸೋಂಕಿನಿಂದ ಸಾವನ್ನಪ್ಪುತ್ತಿರುವ ಸಂಖ್ಯೆಯೂ ಏರಿಕೆಯಾಗಿದೆ.

ದೇಶದಲ್ಲಿ ಒಟ್ಟಾರೆ ಸೋಂಕಿನ ಪೈಕಿ ಮೃತಪಡುತ್ತಿರುವ ಸಂಖ್ಯೆ ಪ್ರತಿಶತ ೧.೧೨ ರಷ್ಟು ಇದೆ. ಇತ್ತೀಚಿನ ದಿನಗಳಲ್ಲಿ ಈ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.

ದಾಖಲೆ ಹೆಚ್ಚಳ

ಸೋಂಕು ಸಂಖ್ಯೆ ನಿತ್ಯ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ ೧೬.೩೪ ರಷ್ಟು ಇದೆ.

ಇದರ ಜೊತೆಗೆ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ಪ್ರಮಾಣ ಶೇಕಡ ೮೨.೫೩ ಮೂರಕ್ಕೆ ಕುಸಿದಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ