ಸೋಂಕು ತಡೆ, ವಾರದ ಬಳಿಕ ಹೊಸಮಾರ್ಗಸೂಚಿ ಪ್ರಕಟ : ಸಿಎಂ

ಬೆಂಗಳೂರು, ಡಿ. ೯- ರಾಜ್ಯದಲ್ಲಿ ಕೊರೊನಾ ರೂಪಾಂತರಿ ಒಮಿಕ್ರಾನ್ ತಡೆ ಹಾಗೂ ಕೋವಿಡ್ ನಿರ್ವಹಣೆ ಸಂಬಂಧ ಒಂದು ವಾರದ ಬಳಿಕ ಹೊಸ ಮಾರ್ಗಸೂಚಿಗಳನ್ನು ಹೊರಡಿಸಲು ಸರ್ಕಾರ ನಿರ್ಧರಿಸಿದೆ.
ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ನೇತೃತ್ವದಲ್ಲಿಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಕೋವಿಡ್ ಸ್ಥಿತಿಗತಿಯ ಬಗ್ಗೆ ಸಮಗ್ರ ಚರ್ಚೆ ನಡೆಸಲಾಗಿತ್ತು. ಪರಿಸ್ಥಿತಿಯನ್ನು ಅವಲೋಕಿಸಿ ಹೊಸಮಾರ್ಗಸೂಚಿ, ನೈಟ್ ಕರ್ಫ್ಯೂ ಜಾರಿ ಹಾಗೂ ಹೊಸ ವರ್ಷಾಚರಣೆ, ಕ್ರಿಸ್‌ಮಸ್‌ಗೆ ನಿರ್ಬಂಧ ಹೇರುವ ಸಂಬಂಧ ಒಂದು ವಾರದ ಬಳಿಕ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ಸಂಪುಟ ಸಭೆಯ ನಂತರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇಂದಿನ ಸಚಿವ ಸಂಪುಟ ಸಭೆಯಲ್ಲಿ ಕೋವಿಡ್ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಿದ್ದೇವೆ. ಕೋವಿಡ್ ತಾಂತ್ರಿಕ ಸಮಿತಿ ಅಧ್ಯಕ್ಷರಾದ ಸುದರ್ಶನ್ ಅವರು ಸಚಿವ ಸಂಪುಟ ಸಭೆಯಲ್ಲಿ ರೂಪಾಂತರ ಕೊರೊನಾ ಒಮಿಕ್ರಾನ್ ಬಗ್ಗೆ ವಿವರ ನೀಡಿದ್ದಾರೆ. ಈಗಿರುವ ಪಾಸಿಟಿವ್ ಪ್ರಕರಣ ನೋಡಿ ಗಾಬರಿಯಾಗುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. ಆದರೂ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಹಾಗಾಗಿ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ದಿನಗಳಲ್ಲಿ ಹೊಸ ಮಾರ್ಗಸೂಚಿ ಪ್ರಕಟಿಸಲಾಗುವುದು ಎಂದರು.
ಹೊಸ ಮಾರ್ಗಸೂಚಿಗಳ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ವರದಿ ನೀಡಬೇಕು. ಆ ವರದಿ ನೋಡಿಕೊಂಡು ಒಂದು ವಾರದ ಬಳಿಕ ಅವಶ್ಯಕತೆ ಬಿದ್ದರೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡುತ್ತೇವೆ ಎಂದರು.
ಇಂದಿನ ಸಚಿವ ಸಂಪುಟ ಸಭೆಯಲ್ಲಿ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿ ಮಾಡುವ ಬಗ್ಗೆಯೂ ಚರ್ಚೆ ನಡೆದಿದೆ. ನೈಟ್ ಕರ್ಫ್ಯೂ ಜಾರಿ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ. ಒಂದು ವಾರದ ಬಳಿಕ ಮತ್ತೆ ಸಭೆ ಸೇರಿ ತೀರ್ಮಾನ ಮಾಡುತ್ತೇವೆ ಎಂದರು.
ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆ ಸಂಬಂಧವೂ ಚರ್ಚೆಗಳು ನಡೆದಿದ್ದು, ಈ ಬಗ್ಗೆಯ ಒಂದು ವಾರದ ನಂತರ ಮತ್ತೊಂದು ಸಭೆ ಮಾಡಿ ನಿರ್ಬಂಧ ಹೇರಬೇಕೆ, ಬೇಡವೆ ಎಂದು ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ವಿದ್ಯಾರ್ಥಿ ನಿಲಯಗಳಲ್ಲಿ ಸೋಂಕು ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಲಯಗಳಿಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿದ್ದೇವೆ. ೨ ದಿನಕ್ಕೊಂಮ ಹಾಸ್ಟೆಲ್‌ಗಳನ್ನು ಸ್ಯಾನಿಟೈಸ್ ಮಾಡಬೇಕು. ವಿದ್ಯಾರ್ಥಿಗಳು ಒಟ್ಟಿಗೆ ಎಲ್ಲರೂ ಊಟ ಮಾಡುವುದನ್ನು ನಿಲ್ಲಿಸಿ ಹಂತ ಹಂತವಾಗಿ ಹಾಸ್ಟೆಲ್‌ನಲ್ಲಿ ಊಟ ನೀಡುವ ವ್ಯವಸ್ಥೆಯನ್ನು ಜಾರಿ ಮಾಡಲಾಗುವುದು ಹಾಗೆಯೇ ಹಾಸ್ಟೆಲ್ ವಾರ್ಡನ್ ಮತ್ತು ಅಡುಗೆಯವರಿಗೆ ೨ ಡೋಸ್ ವ್ಯಾಕ್ಸಿನ್‌ನನ್ನು ಕಡ್ಡಾಯ ಮಾಡಲಾಗಿದೆ ಎಂದರು.
ಸೋಂಕು ಪ್ರಕರಣಗಳು ವರದಿಯಾದ ಕಡೆ ಮೂರು ಜನರಿಗೆ ಒಂದು ಕ್ಲಸ್ಟರ್ ಮಾಡಲು ತೀರ್ಮಾನ ಮಾಡಿದ್ದೇವೆ ಎಂದು ಅವರು ಹೇಳಿದರು.
ರಾಜ್ಯಾದ್ಯಂತ ಲಸಿಕೆ ಅಭಿಯಾನವನ್ನು ಚುರುಕು ಮಾಡಲು ತೀರ್ಮಾನಿಸಿದ್ದೇವೆ. ಲಸಿಕೆ ಪಡೆಯದವರಿಗೆ ಲಸಿಕೆ ನೀಡಲು ಎಲ್ಲ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದರು.
ಮಹಾರಾಷ್ಟ್ರ ಮತ್ತು ಕೇರಳ ಗಡಿ ಭಾಗದಲ್ಲಿ ಈಗಾಗಲೇ ಕಟ್ಟೆಚ್ಚರ ವಹಿಸಲಾಗಿದೆ. ಸರ್ಕಾರ ಸೋಂಕು ನಿರ್ವಹಣೆ ಸಂಬಂಧ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಹೇಳಿದರು.
ನಾಳೆ ಅಥವಾ ನಾಡಿದ್ದು, ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸು ಕೊಡಲಿದೆ. ನಂತರ ಮಾರ್ಗಸೂಚಿಯನ್ನು ಹೊರಡಿಸಲಾಗುವುದು. ಕೋವಿಡ್ ನಿರ್ವಹಣೆ ಸಂಬಂಧ ತೀರ್ಮಾನಗಳನ್ನು ಕೈಗೊಳ್ಳುವ ಅಧಿಕಾರವನ್ನು ಸಚಿವ ಸಂಪುಟ ಮುಖ್ಯಮಂತ್ರಿಗಳಿಗೆ ನೀಡಿದೆ.