ಸೋಂಕು ತಡೆಗೆ ಸಂಪೂರ್ಣ ಲಾಕ್‌ಡೌನ್ ಅಗತ್ಯ ರಾಹುಲ್


ನವದೆಹಲಿ, ಮೇ ೪- ದೇಶದಲ್ಲಿ ಕೊರೊನಾ ಸೋಂಕನ್ನು ತಡೆಯಲು ಸಂಪೂರ್ಣ ಲಾಕ್‌ಡೌನ್ ಒಂದೇ ಮಾರ್ಗ ಎಂದು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ಗಾಂಧಿ ಹೇಳಿದ್ದಾರೆ.
ಭಾರತದಿಂದ ಕೋವಿಡ್-೧೯ ಸೋಂಕನ್ನು ತೊಲಗಿಸಲು ದೇಶವನ್ನು ಸಂಪೂರ್ಣ ಲಾಕ್‌ಡೌನ್ ಮಾಡುವುದೊಂದೇ ಸದ್ಯಕ್ಕಿರುವ ಮಾರ್ಗ. ಹಾಗಾಗಿ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿ ಸೋಂಕನ್ನು ನಿಯಂತ್ರಿಸಿ ಎಂದು ಅವರು ಕೇಂದ್ರ ಸರ್ಕಾರವನ್ನು ಟ್ವೀಟ್‌ನಲ್ಲಿ ಒತ್ತಾಯಿಸಿದ್ದಾರೆ.
ಲಾಕ್‌ಡೌನ್ ಸಂದರ್ಭದಲ್ಲಿ ಬಡವರಿಗೆ ನ್ಯಾಯ್ ಯೋಜನೆಯಡಿಯಲ್ಲಿ ಆರ್ಥಿಕ ರಕ್ಷಣೆ ನೀಡಬೇಕು ಎಂದು ಅವರು ಸಲಹೆ ಮಾಡಿದ್ದಾರೆ.
೨೦೧೯ರ ವಯ್ನಾಡು ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷವು ನ್ಯಾಯ್ ಯೋಜನೆ ಬಗ್ಗೆ ಪ್ರಣಾಳಿಕೆಯಲ್ಲಿ ಹೇಳಿತ್ತು. ಅದರನ್ವಯ ಕೇಂದ್ರ ಸರ್ಕಾರವೂ ಬಡವರಿಗೆ ಕನಿಷ್ಠ ವರ್ಷಕ್ಕೆ ೭೨ ಸಾವಿರ ರೂ. ನೀಡುವ ಯೋಜನೆ ಇದಾಗಿದೆ. ಈ ನ್ಯಾಯ್ ಯೋಜನೆಯಂತೆ ಲಾಕ್‌ಡೌನ್ ವೇಳೆಯಲ್ಲಿ ಬಡವರಿಗೆ ತಿಂಗಳಿಗೆ ೬ ಸಾವಿರ ರೂ. ನೀಡುವ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿ ಎಂದು ಅವರು ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರದ ಅದಕ್ಷತೆ ಮತ್ತು ಸೋಂಕು ನಿರ್ವಹಣೆಯ ವೈಫಲ್ಯದಿಂದ ದೇಶದಲ್ಲಿ ಅಮಾಯಕ ಜನರು ಸಾವಿಗೀಡಾಗುತ್ತಿದ್ದಾರೆ. ಒಂದು ರೀತಿಯಲ್ಲಿ ಕೇಂದ್ರ ಸರ್ಕಾರ ಜನರನ್ನು ಕೊಲ್ಲುತ್ತಿದೆ ಎಂದು ಅವರು ದೂರಿದ್ದಾರೆ.
ಜನರನ್ನು ಸೋಂಕಿನಿಂದ ಪಾರು ಮಾಡಲು ಲಾಕ್‌ಡೌನ್ ಒಂದೇ ಮದ್ದು. ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಿ ಎಂದು ಅವರು ಆಗ್ರಹಿಸಿದ್ದಾರೆ.