ಸೋಂಕು ತಡೆಗೆ ಲಾಕ್‌ಡೌನ್ ಸೂಕ್ತ : ಅಮೆರಿಕ ವೈದ್ಯರ ಸಲಹೆ

ವಾಷಿಂಗ್ಟನ್, ಮೇ ೧: ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಾಖಲೆ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ಭಾರತದಲ್ಲಿ ಪ್ರತಿ ದಿನ ನಾಲ್ಕ ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಕೊರೊನಾದ ಬಗ್ಗೆ ಸಂಶೋಧನೆ ನಡೆಸುತ್ತಿರುವ ಖ್ಯಾತ ವೈದ್ಯ ಡಾ. ಆಂಥೋನಿ ಫೌಚಿ, ವೈರಸ್ ಎದುರಿಸುವುದು ಹೇಗೆಂದು ಸಲಹೆ ನೀಡಿದ್ದಾರೆ.

ಡಾ. ಫೌಚಿ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಆಡಳಿತದ ಮುಖ್ಯ ವೈದ್ಯಕೀಯ ಸಲಹೆಗಾರರಾಗಿದ್ದಾರೆ. ಭಾರತದಲ್ಲಿ ಕೆಲ ವಾರ ಲಾಕ್ ಡೌನ್ ಘೋಷಣೆ ಮಾಡಬೇಕೆಂಬ ಸಲಹೆ ನೀಡಿರುವ ಫೌಚಿ, ಲಸಿಕೆ ಪರಿಸ್ಥಿತಿ ಬಗ್ಗೆಯೂ ಮಾತನಾಡಿದ್ದಾರೆ. ಭಾರತೀಯರಿಗೆ ಈ ಸಂದರ್ಭದಲ್ಲಿ ಲಸಿಕೆ ಬಹಳ ಮುಖ್ಯ ಎಂದು ವೈದ್ಯ ಫೌಚಿ ಹೇಳಿದ್ದಾರೆ.

ಆಮ್ಲಜನಕದ ಕೊರತೆ ಮತ್ತು ಇತರ ವೈದ್ಯಕೀಯ ಸೌಲಭ್ಯಗಳನ್ನು ತಕ್ಷಣ ಒದಗಿಸಬೇಕು. ಇದಕ್ಕಾಗಿ ಆಯೋಗವನ್ನು ರಚಿಸಬೇಕಾಗುತ್ತದೆ ಎಂದು ಅವರು ಸಲಹೆ ನೀಡಿದ್ದಾರೆ.

ವೈದ್ಯ ಆಂಥೋನಿ ಫೌಚಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇತರ ದೇಶಗಳ ಜೊತೆ ಮಾತುಕತೆ ನಡೆಸುವಂತೆ ಸಲಹೆ ನೀಡಿದ್ದಾರೆ. ಇದಲ್ಲದೆ ಸಾಧ್ಯವಾದಷ್ಟು ಆಸ್ಪತ್ರೆಗಳನ್ನು ನಿರ್ಮಿಸಬೇಕೆಂದು ಅವರು ಹೇಳಿದ್ದಾರೆ. ಚೀನಾ ಉದಾಹರಣೆ ನೀಡಿದ ಫೌಚಿ, ಅಮೆರಿಕದ ಅನುಭವವನ್ನು ಹಂಚಿಕೊಂಡ ಅವರು ಭಾರತೀಯ ಸೇನೆಯ ಸಹಾಯವನ್ನೂ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.

ಮೊದಲು ತಾತ್ಕಾಲಿಕ ಉಪಾಯಗಳನ್ನು ಮಾಡಬೇಕು. ನಂತ್ರ ಮಧ್ಯಮ ಕ್ರಮಾಂಕದ ಉಪಾಯಗಳನ್ನು ಮಾಡಬೇಕು. ನಂತ್ರ ದೀರ್ಘಕಾಲಿಕ ಉಪಾಯಗಳನ್ನು ಅನುಸರಿಸಬೇಕೆಂದು ಅವರು ಹೇಳಿದ್ದಾರೆ. ದೇಶದಲ್ಲಿ ಕೊರೊನಾ ತಡೆಗಟ್ಟಲು ಲಾಕ್‌ಡೌನ್ ಅಗತ್ಯ ಎಂದು ವೈದ್ಯ ಆಂಥೋನಿ ಹೇಳಿದ್ದಾರೆ. ಭಾರತದಲ್ಲಿ ೬ ತಿಂಗಳ ಲಾಕ್‌ಡೌನ್ ಮಾಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು. ಆದ್ರೆ ತಾತ್ಕಾಲಿಕ ಲಾಕ್ ಡೌನ್ ಅವಶ್ಯವಿದೆ ಎಂದು ಅವರು ಹೇಳಿದ್ದಾರೆ.