ಸೋಂಕು ತಡೆಗೆ ಪರೀಕ್ಷೆ ಹೆಚ್ಚಳ

ಬೆಂಗಳೂರು, ಡಿ. ೪- ಕೊರೊನಾ ಸೋಂಕಿನ ರೂಪಾಂತರಿ ಒಮಿಕ್ರಾನ್ ಶೀಘ್ರವಾಗಿ ಹರಡುವ ಹಿನ್ನೆಲೆಯಲ್ಲಿ ಸೋಂಕು ಪತ್ತೆ ,ಪರೀಕ್ಷೆ, ಚಿಕಿತ್ಸೆ ಪ್ರಮಾಣವನ್ನು ಹೆಚ್ಚು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇಂದಿಲ್ಲಿ ಹೇಳಿದ್ದಾರೆ.

ರಾಜ್ಯದಲ್ಲಿ ಪತ್ತೆಯಾಗಿರುವ ಬಗ್ಗೆ ಪ್ರಾಥಮಿಕ ವರದಿ ಬಂದಿದೆ ಈ ಬಗ್ಗೆ ಸಂಪೂರ್ಣ ವರದಿ ಪಡೆಯುವಂತೆಯೂ ಸೂಚನೆ ನೀಡಲಾಗಿದೆ . ಇದರಿಂದ ವೈಜ್ಞಾನಿಕ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ ಎಂದು ಅವರು ಹೇಳಿದರು

ಆರ್ ಟಿ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸೋಂಕು ವೇಗವಾಗಿ ಹರಡುತ್ತಿದೆ ಎನ್ನುವ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳ ಕ್ಲಸ್ಟರ್ ಮತ್ತು ಅಪಾರ್ಟ್‌ಮೆಂಟ್‌ಗಳಲ್ಲಿ ಕ್ಲಸ್ಟರ್ ಬಿಗಿ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ ಎಂದರು.

ಅಪಾರ್ಟ್‌ಮೆಂಟ್‌ಗಳಲ್ಲಿ ಪದೇಪದೇ ಭೇಟಿಯಾಗುವರು. ಕನಿಷ್ಠ ಎರಡು ಡೋಸ್ ಲಸಿಕೆ ಪಡೆದಿದ್ದರೆ ಮಾತ್ರ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ. ಹೊರಗಿನವರಿಗೆ ಯಾವುದೇ ಕಾರಣಕ್ಕೂ ಅವಕಾಶ ಕಲ್ಪಿಸುವಂತೆ ನಿರ್ಬಂಧ ಹೇರಲಾಗಿದೆ ಎಂದು ಅವರು ಹೇಳಿದರು

ಬೆಂಗಳೂರಿನಲ್ಲಿ ಈ ಮುಂಚೆ ಹತ್ತು ಸೋಂಕು ಪ್ರಕರಣಗಳು ಕಂಡು ಬರುವ ಪ್ರದೇಶವನ್ನು ಕ್ಲಸ್ಟರ್ ಎಂದು ಮಾಡಲಾಗಿತ್ತು ಇನ್ನು ಮುಂದೆ ಅದನ್ನು ಮೂರಕ್ಕೆ ಇರಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಶಾಲಾ-ಕಾಲೇಜುಗಳಲ್ಲಿ ಕಡ್ಡಾಯವಾಗಿ ಉಪನ್ಯಾಸಕರು ಮತ್ತು ಶಿಕ್ಷಕರು ೨ ಡೋಸ್ ಲಸಿಕೆ ಪಡೆದಿರಬೇಕು. ಶಾಲೆಗಳಿಗೆ ಮಕ್ಕಳನ್ನು ಬಿಡಲು ತೆರಳುವ ಪೋಷಕರು ಎರಡು ಡೋಸ್ ಲಸಿಕೆ ಪಡೆದಿರಬೇಕು. ವಿಶೇಷವಾಗಿ ಪ್ಯಾರಾಮೆಡಿಕಲ್‌ನಲ್ಲಿ ಓದುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಸೂಚಿಸಲಾಗಿದೆ ಎಂದು ಹೇಳಿದರು.

ಡೆಲ್ಟಾ ಚಿಕಿತ್ಸೆ ಮುಂದುವರಿಕೆ:
ಹೊಸ ರೂಪಾಂತರಕ್ಕೆ ಸದ್ಯ ಡೆಲ್ಟಾ ಸೋಂಕಿಗೆ ನೀಡಲಾಗುತ್ತಿರುವ ಚಿಕಿತ್ಸೆಯನ್ನೇ ಮುಂದುವರಿಸಲಾಗುತ್ತಿದೆ. ಹೀಗಿದ್ದರೂ ಅಂತರಾಷ್ಟ್ರೀಯ ಮಟ್ಟದಲ್ಲಿ ಯಾವೆಲ್ಲ ಚಿಕಿತ್ಸೆ ನೀಡುತ್ತಿದ್ದಾರೆ ಎನ್ನುವ ಕುರಿತು ಮಾಹಿತಿ ಸಂಗ್ರಹಿಸುವುದು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು.

ವೈಜ್ಞಾನಿಕವಾಗಿ ಚಿಕಿತ್ಸೆ ಕೊಡಬೇಕು ಎನ್ನುವ ಹಿನ್ನೆಲೆಯಲ್ಲಿ ಸಮಗ್ರ ಮಾಹಿತಿ ಕಲೆಹಾಕಲು ಸೂಚಿಸಲಾಗಿದೆ ಎಂದು ತಿಳಿಸಿದರು.

ದಕ್ಷಿಣ ಆಫ್ರಿಕಾದಿಂದ ನಗರಕ್ಕೆ ಆಗಮಿಸಿ ನಾಪತ್ತೆಯಾಗಿರುವ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುವಂತೆ ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು

ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಅಧಿವೇಶನ

ರಾಜ್ಯದಲ್ಲಿ ಒಮಿಕ್ರಾನ್ ರೂಪಾಂತರಿ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ವಿಶೇಷ ಕ್ರಮಗಳೊಂದಿಗೆ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇಂದಿಲ್ಲಿ ಹೇಳಿದ್ದಾರೆ

ಬೆಳಗಾವಿಯಲ್ಲಿ ಈ ತಿಂಗಳ ೧೩ ರಿಂದ ೨೪ರ ತನಕ ಚಳಿಗಾಲದ ಅಧಿವೇಶನ ನಡೆಸಲು ಉದ್ದೇಶಿಸಲಾಗಿದೆ. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎರಡು ಡೋಸ್ ಲಸಿಕೆ ಪಡೆದವರಿಗೆ ಅಷ್ಟೇ ಸುವರ್ಣಸೌಧ ಪ್ರವೇಶಿಸಲು ಅವಕಾಶ ಮಾಡಿಕೊಡುವುದಾಗಿ ತಿಳಿಸಿದ್ದಾರೆ.

ಈಗಾಗಲೇ ಅಗತ್ಯ ಮುಂಜಾಗ್ರತಾ ಕ್ರಮಕ್ಕೆ ಬೆಳಗಾವಿ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ..ಸಾಮಾಜಿಕ ಅಂತರ ಸೇರಿದಂತೆ ಇನ್ನಿತರೆ ಕೋವಿಡ್ ಮಾರ್ಗಸೂಚಿಗಳು ಮತ್ತು ಬಿಗಿ ಕ್ರಮ ಕೈಗೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.