ಸೋಂಕು ತಡೆಗೆ ಜಾಗೃತಿ ಮೂಡಿಸಲು ಶಾಸಕ ನಾಗೇಶ್ ಸೂಚನೆ

ಮುಳಬಾಗಿಲು ಏ ೨೭- ಕೋವಿಡ್ ಎರಡನೇ ಅಲೆ ತೀವ್ರತೆ ಹೆಚ್ಚಾಗಿದ್ದು ಮುಳಬಾಗಿಲು ತಾಲೂಕಿನಲ್ಲಿ ಇದರ ನಿಯಂತ್ರಣಕ್ಕೆ ಬ್ರೇಕ್ ಹಾಕಲು ತಾಲೂಕು ಆಡಳಿತದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕು ಜನಪ್ರತಿನಿಧಿಗಳು ಜಾಗೃತಿ ಮೂಡಿಸುವ ಮೂಲಕ ಜನರಲ್ಲಿ ಕೊರೋನ ನಿಯಂತ್ರಣದ ಅರಿವು ಹೆಚ್ಚಾಗಿಸಬೇಕೆಂದು ಮುಳಬಾಗಿಲು ಸಾರ್ವಜನಿಕ ಆರೋಗ್ಯ ಸಮಿತಿ ಅಧ್ಯಕ್ಷರೂ ಆದ ಶಾಸಕ ಹೆಚ್.ನಾಗೇಶ್ ತಿಳಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೋವಿಡ್ ೧೯ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ತಯಾರಿ ಹಾಗೂ ನಿಭಾಯಿಸುವಿಕೆಯ ಬಗ್ಗೆ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ನಗರಸಭೆಯಿಂದ ಕೋವಿಡ್ ಹೆಲ್ಪ್‌ಲೈನ್ ತೆರೆದು ಸೋಂಕಿತರಿಗೆ ತಕ್ಷಣ ಮಾಹಿತಿಗಳನ್ನು ನೀಡುವುದು, ಆಂಬ್ಯುಲೆನ್ಸ್, ಆಕ್ಸಿಜನ್, ಆಸ್ಪತ್ರೆಯ ಹಾಸಿಗೆ ವ್ಯವಸ್ಥೆಗಳ ಬಗ್ಗೆಯೂ ಮಾಹಿತಿ ನೀಡುವುದನ್ನು ಮಂಗಳವಾರದಿಂದಲೇ ಆರಂಭಿಸಲಾಗುವುದು ಎಂದರು.
೧೮ ವರ್ಷ ಮೇಲ್ಪಟ್ಟವರಿಗೆಲ್ಲರಿಗೂ ಮೇ ೧ ರಿಂದ ಕೋವಿಡ್ ಲಸಿಕೆಯನ್ನು ಪಡೆಯಬೇಕು ಈಗಾಗಲೇ ೬೦ ಮತ್ತು ೪೦ ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದ್ದು ಇದನ್ನು ಎಲ್ಲರೂ ಹಾಕಿಸಿಕೊಳ್ಳಬೇಕು, ನಗರಸಭೆಯ ವ್ಯಾಪ್ತಿಯಲ್ಲಿ ಲಸಿಕೆ ಹಾಕಿಸಿಕೊಳ್ಳುವವರ ಪ್ರಮಾಣ ಕಡಿಮೆಯಾಗುತ್ತಿದೆ, ಈ ಬಗ್ಗೆ ನಗರಸಭೆ ಅಧ್ಯಕ್ಷರು, ಸದಸ್ಯರು ವಾರ್ಡ್‌ವಾರು ಲಸಿಕೆ ಆಂದೋಳನವನ್ನು ಆರಂಭಿಸಿ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಂಡು ಕೊರೋನದಿಂದ ಪಾರಾಗಬೇಕು ಎಂದು ಸೂಚಿಸಿದರು.
ಮೆಡಿಕಲ್ ಸ್ಟೋರ್‌ಗಳಲ್ಲಿ ಸಿ+ ಮಾತ್ರೆ ಸಿಗುತ್ತದೆ ಇದು ರೋಗ ನಿರೋದಕ ಶಕ್ತಿಯನ್ನು ಹೆಚ್ಚಿಸುತ್ತದೆ, ಇದನ್ನು ಪ್ರತಿನಿತ್ಯ ಸೇವನೆ ಮಾಡಬಹುದು, ಆರೋಗ್ಯಇಲಾಖೆ, ನಗರಸಭೆ ಮತ್ತು ತಾಲೂಕು ಆಡಳಿತದಿಂದ ಕರಪತ್ರಗಳನ್ನು ಹೊರಡಿಸಿ ಕೊರೋನ ನಿಯಂತ್ರಣ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು ಎಂದರು.
ವಿಜಯಸಂಕೇಶ್ವರ್ ಮಾಹಿತಿ ಉಪಯುಕ್ತ: ವಿ.ಆರ್.ಎಲ್. ಸಮೂಹ ಸಂಸ್ಥೆಗಳ ಚೇರ್‍ಮೆನ್ ಡಾ.ವಿಜಯಸಂಕೇಶ್ವರ್ ರವರು ಭಾನುವಾರ ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆಕ್ಸಿಜನ್ ಸಮಸ್ಯೆಗೆ ನಿಂಬೆರಸ ರಾಮಬಾಣ ಎಂದು ತಿಳಿಸಿದ್ದು ಅದನ್ನು ಅನುಷ್ಠಾನ ಮಾಡುವ ಬಗ್ಗೆ ವಿಜಯವಾಣಿ ಪತ್ರಿಕೆಯ ತುಣುಕುಗಳು, ವಿಡಿಯೋ ಸಂದೇಶಗಳನ್ನು ಫಾರ್ವಡ್ ಮಾಡುವ ಮೂಲಕ ಜಾಗೃತಿ ಮೂಡಿಸಿ ಎಂದು ಹೆಚ್.ನಾಗೇಶ್ ಸಭೆಯಲ್ಲಿ ತಿಳಿಸಿದರು.
ಉಪವಿಭಾಗಾಧಿಕಾರಿ ಸೋಮಶೇಖರ್ ಮಾತನಾಡಿ, ಮುಳಬಾಗಿಲಿನ ಕೂತಾಂಡಹಳ್ಳಿ ಮೊರಾರ್ಜಿದೇಸಾಯಿ ವಸತಿ ಶಾಲೆ, ಕುರುಡುಮಲೆಯ ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆ, ಮುಳಬಾಗಿಲಿನ ಅಲ್ಪಸಂಖ್ಯಾತರ ಮೊರಾರ್ಜಿದೇಸಾಯಿ ವಸತಿ ಶಾಲೆ, ಬೀಡಿ ಕಾಲೋನಿಯ ವಸತಿ ಶಾಲೆಗಳನ್ನು ಕ್ವಾರಂಟೈನ್ ಕೇಂದ್ರಗಳಾಗಿ ತೆರೆಯಲಾಗಿದ್ದು ಇಲ್ಲಿಯೇ ಹೆಚ್ಚುವರಿ ಬೆಡ್‌ಗಳನ್ನು ಒದಗಿಸಿ ಕೊರೋನ ಪಾಸಿಟೀವ್ ಬಂದ ರೋಗಿಗಳಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ, ಇದರಿಂದ ಹೆಚ್ಚುವರಿಯಾಗಿ ೩೦೦ಕ್ಕೂ ಹೆಚ್ಚು ಹಾಸಿಗೆಗಳು ಲಭ್ಯವಾಗುತ್ತದೆ ಎಂದರು.
ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಎಸ್.ಭಾರತಿ ಮಾತನಾಡಿ ಮುಳಬಾಗಿಲು ಸಾರ್ವಜನಿಕ ಆಸ್ಪತ್ರೆ ೧೦೦ ಹಾಸಿಗೆ ಆಸ್ಪತ್ರೆಯಾಗಿದ್ದು ಸರ್ಕಾರದ ಆದೇಶದಂತೆ ಕೋವಿಡ್ ೧೯ ವಿಭಾಗಕ್ಕೆ ೫೦ ಹಾಸಿಗೆಗಳನ್ನು ಮೀಸಲಿರಿಸಲಾಗಿದೆ, ಅದರಲ್ಲಿ ಆಕ್ಸಿಜನ್ ಸಹಿತ ವೆಂಟಿಲೇಟರ್ ಸೌಲಭ್ಯಗಳು ೩ ಲಭ್ಯವಿದ್ದು, ಆಕ್ಸಿಜನ ಸಹಿತ ಹಾಸಿಗೆ ೪೭ ಸಾಮಾನ್ಯ ರೋಗಿಗಳಿಗೆ ಲಭ್ಯವಿದೆ, ಪ್ರಸ್ತುತ ೧೫ ಕೋವಿಡ್ ರೋಗಿಗಳು ದಾಖಲಾಗಿದ್ದಾರೆ, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಆಸ್ಪತ್ರೆಯಲ್ಲಿ ಫಿಜಿಷಿಯನ್ ವೈದ್ಯರ ಹುದ್ದೆ ಖಾಲಿ ಇದ್ದು ಈ ವೈದ್ಯರನ್ನು ನೇಮಕ ಮಾಡಿದರೆ ರೋಗಿಗಳಿಗೆ ಹೆಚ್ಚಿನ ಸೇವೆಗಳು ಲಭ್ಯವಾಗಲಿದೆ ಎಂದು ತಿಳಿಸಿದರು.
ಕೋವಿಡ್ ಆರೋಗ್ಯ ರಕ್ಷಾ ಸಮಿತಿ ನೂತನ ಸದಸ್ಯರು ಭಾಗಿ: ಶಾಸಕ ಹೆಚ್.ನಾಗೇಶ್ ರವರ ಸೂಚನೆಯಂತೆ ಆರೋಗ್ಯ ರಕ್ಷಾ ಸಮಿತಿ ನೂತನ ಸದಸ್ಯರಾಗಿ ಕೀಲುಹೊಳಲಿ ಹರೀಶ್, ಇರ್ಷಾದ್, ಅನುಸೂಯಮ್ಮ, ರವಿಕುಮಾರ್, ಉಮ್ಮೇಹನಿ ರವರನ್ನು ನೇಮಕ ಮಾಡಿದ್ದು ಸಭೆಯಲ್ಲಿ ಇವರು ಉಪಸ್ಥಿತರಿದ್ದರು.