ಸೋಂಕು ತಡೆಗೆ ಕಠಿಣ ನಿಯಮ: ಪಾಲಿಕೆ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದಿದ್ದರೆ 250 ರೂ ದಂಡ

ಬೆಂಗಳೂರು, ಮಾ. 24- ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದವರಿಗೆ 250 ರೂ. ದಂಡ ವಿಧಿಸಲಾಗಿದ್ದು, ಪಾಲಿಕೆ ವ್ಯಾಪ್ತಿ ಹೊರತುಪಡಿಸಿ ಗ್ರಾಮೀಣ ಪ್ರದೇಶಗಳಲ್ಲಿ 100 ರೂ. ದಂಡ ವಿಧಿಸುವಂತೆ ಸರ್ಕಾರ ಸೂಚಿಸಿದೆ.
ಸತತ ಎರಡನೇ ದಿನವೂ ರಾಜ್ಯದಲ್ಲಿ 2000 ಸೋಂಕು ಹೆಚ್ಚಳವಾಗಿರುವ ಬೆನ್ನಲ್ಲೇ ಕಠಿಣ ನಿಯಮ ಅನುಷ್ಠಾನ ಗೊಳಿಸಿದೆ.
ಪೊಲೀಸರಿಗೂ ಮಾಸ್ಕ್ ಗೆ ದಂಡ ಹಾಕುವ ಅಧಿಕಾರ ನೀಡಲಾಗಿದ್ದು, ಕಾನ್‍ಸ್ಟೇಬಲ್ ದಂಡ ವಿಧಿಸುವಂತಿಲ್ಲ, ಹೆಡ್ ಕಾನ್‍ಸ್ಟೇಬಲ್ ದಂಡ ವಿಧಿಸಲು ಅವಕಾಶ ನೀಡಲಾಗಿದೆ.
ಸಾಮಾಜಿಕ ಅಂತರ ಪಾಲನೆ ಮಾಡದಿದ್ದರೂ 250 ರೂ. ದಂಡ ನಿಗದಿಪಡಿಸಲಾಗಿದೆ. ಮದುವೆ ಹಾಲ್, ಸಭೆ, ಸಮಾರಂಭಗಳಲ್ಲಿ ಸೀಮಿತ ಜನರನ್ನು ಹೊರತುಪಡಿಸಿ ಹೆಚ್ಚು ಜನ ಇದ್ದರೆ ಹಾಗೂ ಮಾಸ್ಕ್ ಧರಿಸದೇ ಇದ್ದರೆ ಅಂತಹ ಪಾರ್ಟಿ ಹಾಲ್‍ಗಳಿಗೆ 5 ಸಾವಿರ ರೂ., ಏಸಿ ಹಾಲ್ ಗೆ 10 ಸಾವಿರ ರೂ. ದಂಡ ವಿಧಿಸಲಾಗುತ್ತಿದೆ. ಸ್ಟಾರ್ ಹೋಟೆಲ್‍ಗಳಲ್ಲಿ ಹೆಚ್ಚು ಜನ ಸೇರಿಸಿ ಕಾರ್ಯಕ್ರಮ ಆಯೋಜಿಸಿದರೆ 10 ಸಾವಿರ ದಂಡ ವಿಧಿಸಲಾಗುತ್ತದೆ.
ಮದುವೆ , ಇತರೆ ಸಭೆ ಸಮಾರಂಭಗಳಿಗೆ ಒಳಾಂಗಣ ಸಭಾಂಗಣದಲ್ಲಿ 200 ಜನ, ಹೊರಾಂಗಣದಲ್ಲಿ 500 ಜನ ಸೇರಲು ಅನುಮತಿ ನೀಡಲಾಗಿದೆ.
ಜನ್ಮದಿನದ ಸಮಾರಂಭಗಳಿಗೆ ಹೊರಾಂಗಣದಲ್ಲಿ 100 ಹಾಗೂ ಒಳಾಂಗಣ ಸಭಾಂಗಣದಲ್ಲಿ 50 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ..