ಸೋಂಕು ತಡೆಗಟ್ಟುಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಕ್ಯಾಪ್ಟನ್ ತಂಡ

ಹನೂರು: ಮೇ.26: ಕೊರೊನಾ ಸೋಂಕು ತಡೆಗಟ್ಟುಲು ಮುಂಜಾಗ್ರತೆ ವಹಿಸುವುದು ಸೇರಿದಂತೆ ಕೊರೋನಾ ಸೋಂಕಿತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಯಾ ಗ್ರಾ.ಪಂ. ವ್ಯಾಪ್ತಿಯಲ್ಲಿ ಕ್ಯಾಪ್ಟನ್ ತಂಡವನ್ನು ರಚಿಸಿ ಪ್ರತಿ ತಂಡಕ್ಕೂ ಒಂದು ವಾಹನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಶಾಸಕ ಆರ್.ನರೇಂದ್ರ ತಿಳಿಸಿದರು.
ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಲ್ಲಿ ತಾಲ್ಲೂಕಿನ 25 ಗ್ರಾ.ಪಂ. ವ್ಯಾಪ್ತಿಗೆ 25 ಹಳದಿ ಬೋರ್ಡ್‍ಉಳ್ಳ ಕಾರುಗಳು ಕೋವಿಡ್-19 ಕಾರ್ಯದಲ್ಲಿ ಕಾರ್ಯನಿರ್ವಹಿಸಲು ಚಾಲನೆ ನೀಡಿ ನಂತರ ಅವರು ಮಾತನಾಡಿದರು.
ಕೊರೊನಾ ಕ್ಯಾಪ್ಟನ್ ತಂಡದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಅಥಾವ ಜೂನಿಯರ್ ಕಾಲೇಜಿನ ಪ್ರಿನ್ಸಿಪಲ್ ಇರಲಿದ್ದಾರೆ. ಈ ತಂಡದಲ್ಲಿ ಆ ವ್ಯಾಪ್ತಿಯ ವೈದ್ಯರು, ಸಿಬ್ಬಂದಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಇರುತ್ತಾರೆ. ಇವರುಗಳ ಕಾರ್ಯ ದಿನ ಪ್ರತಿ ಆಯಾ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಿಗೆ ಸಂಚರಿಸಿ ಕೊರೊನಾ ಸೋಂಕು ಲಕ್ಷಣಗಳು ಕಂಡು ಬಂದವರನ್ನು ಆಸ್ಪತ್ರೆಗೆ ಕರೆತಂದು ಕೊರೊನಾ ಸೋಂಕು ಧೃಢಪಟ್ಟರೆ ಅಂತಹವರನ್ನು ಕೋವಿಡ್ ಸೆಂಟರ್‍ಗಳಿಗೆ ಕಳುಹಿಸುವುದು ಮತ್ತು ಚಿಕಿತ್ಸೆ ಕೊಡಿಸುವುದು ಈ ಬಗ್ಗೆ ವರದಿಯನ್ನು ಸಂಬಂಧ ಪಟ್ಟವರಿಗೆ ಒದಗಿಸುವುದು. ಇದರ ಜೊತೆಗೆ ಕೋವಿಡ್- 19 ಅರಿವನ್ನು ಮೂಡಿಸುವುದಾಗಿದೆ ಎಂದ ಅವರು ಈ ಕಾರ್ಯದಲ್ಲಿ ತೊಡಗಿರುವ ಕ್ಯಾಪ್ಟನ್‍ಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುವ ಮೂಲಕ ತಾಲ್ಲೂಕಿನಲ್ಲಿ ಕೊರೊನಾ ಸೋಂಕು ಹರಡದಂತೆ ನೋಡಿಕೊಳ್ಳುವ ಜವಬ್ದಾರಿ ನಿಮ್ಮ ಮೇಲಿದೆ. ಈ ಸೇವೆಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಜಿ.ಹೆಚ್.ನಾಗರಾಜು, ಪೊಲೀಸ್ ಇನ್ಸ್‍ಪೆಕ್ಟರ್ ಸಂತೋಷ್ ಕಶ್ಯಪ್ ಸೇರಿದಂತೆ ಶಾಲಾ ಮುಖ್ಯ ಶಿಕ್ಷಕರು, ಜೂನಿಯರ್ ಕಾಲೇಜಿನ ಪ್ರಾಂಶುಪಾಲರು, ವಾಹನ ಚಾಲಕರು ಇನ್ನಿತರರು ಇದ್ದರು.