ಸೋಂಕು ತಡೆಗಟ್ಟಲು ಸಮರೋಪಾದಿ ಕಾರ್ಯಕ್ಕೆ ಡಿಸಿ ಸೂಚನೆ

ಚಿಕ್ಕಬಳ್ಳಾಪುರ.ಏ೨೪:ಕೋವಿಡ್ ಸೋಂಕು ಹರಡದಂತೆ ಏನೆಲ್ಲಾ ನಿಯಂತ್ರಣ ಕ್ರಮಗಳನ್ನ ಕೈಗೊಳ್ಳುತ್ತಿದ್ದರು ಸಹ ಸಕಾರಾತ್ಮಕ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ದ್ವಿಗುಣವಾಗುವ ರೀತಿಯಲ್ಲಿ ಹೆಚ್ಚಾಗುತ್ತಿದೆ. ಇಂತಹ ಪರಿಸ್ಥಿತಿಯನ್ನು ನಾವೆಲ್ಲರೂ ಸವಾಲಾಗಿ ಸ್ವೀಕರಿಸಿ ಹಾಗೂ ಸಮರೋಪಾದಿಯಾಗಿ ಕಾರ್ಯನಿರ್ವಹಿಸಿ ಕೋವಿಡ್ ನ್ನು ಜಿಲ್ಲೆಯಿಂದ ತೊಲಗಿಸೋಣ ಎಂದು ಜಿಲ್ಲಾಧಿಕಾರಿ ಆರ್. ಲತಾ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸರ್ಕಾರಿ ನೌಕರರ ಕುಂದು-ಕೋರತೆಗಳ ಕುರಿತ ಜಿಲ್ಲಾ ಜಂಟಿ ಸಮಾಲೋಚನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕು ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿ/ನೌಕರರು ಕಾರ್ಯನಿರ್ವಹಿಸುತ್ತಿರುವ ಸಂದರ್ಬದಲ್ಲಿ ಎದುರಾಗುವ ಸಮಸ್ಯೆಗಳನ್ನು ಆಲಿಸಿದರು.
೨೦೦೫ರ ಮಾಹಿತಿ ಹಕ್ಕು ಕಾಯ್ದೆಯಡಿ ಕಾನೂನಾತ್ಮಕವಾಗಿ ಮಾಹಿತಿಯನ್ನು ಯಾರೇ ಕೇಳಲಿ ಅವರಿಗೆ ಮಾಹಿತಿ ಒದಗಿಸಿ, ಅದರ ಹೋರತಾಗಿ ಮಾಹಿತಿಹಕ್ಕು ಹೆಸರಲ್ಲಿ ಹೆದರಿಸಿ ಬೆದರಿಸಿ ಅನಾವಶ್ಯಕವಾಗಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸುವವರ ವಿರುದ್ಧ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು ಹಾಗೂ ಜಿಲ್ಲೆಯ ಅಧಿಕಾರಿ/ಸಿಬ್ಬಂದಿಗಳು ನಿರ್ಭಿತರಾಗಿ ಕೆಲಸ ನಿರ್ವಹಿಸುವಂತೆ ಆತ್ಮ ವಿಶ್ವಾಸ ತುಂಬಿದರು.
ನೌಕರರ ವ್ಯೆದ್ಯಕೀಯ ವೆಚ್ಚದ ಮರುಪಾವತಿ ಮಾಡಲು ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು. ಅಧಿಕಾರಿ/ನೌಕರರ ವಿರುದ್ಧ ಯಾವುದೇ ಇಲಾಖೆ ವಿಚಾರಣೆಗಳಿದ್ದಲ್ಲಿ ಅನಾವಶ್ಯಕ ವಿಳಂಬ ತೋರದೆ ಶೀಘ್ರ ಇತ್ಯರ್ಥಕ್ಕೆ ತಾಕೀತು ಮಾಡಿದರು.
ನೌಕರರಿಗೆ ಒಳಾಂಗಣ, ಹೋರಾಂಗಣ ಕ್ರೀಡೆ ಸಭೆ ಸಮಾರಂಭ ಹಮ್ಮಿಕೊಳ್ಳಲು ಚಿಕ್ಕಬಳ್ಳಾಪುರ ನಗರದ ಜಿಲ್ಲಾ ಕೇಂದ್ರದಿಂದ ೬ ಕಿ.ಮೀ ದೂರದ ಅಂತರದಲ್ಲಿ ಜಾಗ ನೀಡುವುದಾಗಿ ಭರವಸೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡಿ ಒಂದು ಪಾರ್ಕಿಂಗ್ ಶೇಡ್ ನಿರ್ಮಾಣ ಮಾಡಲು ತಿಳಿಸಿದರು.
ಕೆ.ಜಿ.ಐ.ಡಿ ಸಾಲಗಳ ಅರ್ಜಿಗಳನ್ನು ಹಾಗೂ ವೈದ್ಯಕೀಯ ವೆಚ್ಚ ಮರುಪಾವತಿಗಳ ಅರ್ಜಿಗಳನ್ನು ಒಂದು ವಾರದ ಒಳಗಡೆ ಇತ್ಯರ್ಥ ಪಡಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಿದರು. ಕರ್ತವ್ಯ ನಿರ್ವಹಿಸುವ ಯಾವುದೇ ಸರ್ಕಾರಿ ನೌಕರರಿಗೆ ಕೋವಿಡ್ ಪಾಸಿಟೀವ್ ಆದರೆ ವಿಶೇಷ ನಿಗಾವಹಿಸಿ ಚಿಕಿತ್ಸೆ ನೀಡುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯಲ್ಲಿ ಗುರು ಭವನ ನಿರ್ಮಿಸಲು ಈಗಾಗಲೇ ಜಾಗವನ್ನು ಗುರುತಿಸಲಾಗಿದ್ದು, ಒಂದು ಉತ್ತಮ ಭವನ ನಿರ್ಮಾಣಕ್ಕೆ ನೀಲ ನಕ್ಷೆ (ಆರ್ಕಿಟೆಕ್ಟ್ ಪ್ಲಾಂಟ್) ಮಾದರಿ ತಯಾರಿ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಜಿ.ಹರೀಶ್ ರವರು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳ ಕುಂದುಕೊರತೆಗಳು ಹಾಗೂ ಸೇವಾ ಸೌಲಭ್ಯಗಳ ಕುರಿತು ಮಾಹಿತಿ ಒದಗಿಸಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ತಾಲೂಕ್ ಸರ್ಕಾರಿ ನೌಕರರ ಸಂಘಗಳ ಅಧ್ಯಕ್ಷರುಗಳಾದ ಕೆ.ಎನ್ ಸುಬ್ಬಾರೆಡ್ಡಿ(ಶಿಡ್ಲಘಟ್ಟ), ಬಿ. ಜನಾರ್ಧನ್ ರೆಡ್ಡಿ (ಚಿಂತಾಮಣಿ), ಸತ್ಯನಾರಾಯಣ ರೆಡ್ಡಿ (ಬಾಗೇಪಲ್ಲಿ), ಕೆ.ವಿ. ನಾರಾಯಣ ಸ್ವಾಮಿ (ಗುಡಿಬಂಡೆ), ಮಧುಸೂದನ್ ರೆಡ್ಡಿ (ಗೌರಿಬಿದನೂರು)ಅವರು ಉಪಸ್ಥಿತರಿದ್ದರು.