ಸೋಂಕು ಕಡಿಮೆಯಾಗುವ ತನಕ ನಿಯಂತ್ರಣ ಅನಿವಾರ್ಯ


ಉಡುಪಿ, ಜೂ.೯- ಕೋವಿಡ್ ನಿಯಂತ್ರಣಕ್ಕೆ ಲಾಕ್‌ಡೌನ್ ಪರಿಣಾಮಕಾರಿಯಾಗಿ ಜಾರಿಗೊಳಿಸಿದ ಹಿನ್ನೆಲೆ ಕೋವಿಡ್ ಪಾಸಿಟಿವ್ ಪ್ರಕರಣಗಳು ಕಡಿಮೆಯಾಗುತ್ತಿವೆ. ಗ್ರಾಮೀಣ ಭಾಗದಲ್ಲಿ ೫೦ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ಇರುವ ಗ್ರಾಮ ಪಂಚಾಯತ್‌ಗಳಲ್ಲಿ ಸಂಪೂರ್ಣವಾಗಿ ಲಾಕ್‌ಡೌನ್ ಮುಂದುವರೆಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಅವರು ನಿನ್ನೆ ನಗರದ ಜಿಲ್ಲಾ ಪಂಚಾಯತ್ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಕೋವಿಡ್-೧೯ ನಿಯಂತ್ರಣ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಕೋವಿಡ್ ಸೋಂಕು ಗಣನೀಯವಾಗಿ ಕಡಿಮೆ ಆಗುವವರೆಗೆ ನಿಯಂತ್ರಣ ಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವುದರ ಜೊತೆಗೆ ಕೋವಿಡ್‌ನ ಮೂರನೇ ಅಲೆಯ ತಡೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.
ಕಳೆದ ಐದು ದಿನಗಳಿಂದ ೫೦ಕ್ಕೂ ಹೆಚ್ಚು ಪ್ರಕರಣಗಳು ಇರುವ ಗ್ರಾಮಪಂಚಾಯತ್‌ಗಳನ್ನು ಪೂರ್ಣ ಪ್ರಮಾಣದ ಲಾಕ್‌ಡೌನ್ ಮಾಡಿದ ಹಿನ್ನೆಲೆ ಕೋವಿಡ್ ಪಾಸಿಟಿವ್ ಪ್ರಕರಣಗಳು ಕಡಿಮೆಯಾಗಿವೆ. ಈ ಹಿನ್ನೆಲೆ ಪ್ರಸಕ್ತ ೫೦ಕ್ಕೂ ಹೆಚ್ಚು ಪ್ರಕರಣಗಳಿರುವ ಬೈಂದೂರು ತಾಲೂಕಿನ ಜಡ್ಕಲ್, ಶಿರೂರು, ನಾಡ ಗ್ರಾಮ ಪಂಚಾಯತ್, ಕಾರ್ಕಳದ ಬೆಳ್ಮಣ್, ಮಿಯಾರು, ಪಳ್ಳಿ, ಕುಕ್ಕುಂದೂರು, ನಲ್ಲೂರು, ಮರ್ಣೆ, ಹೆಬ್ರಿಯ ವರಂಗ, ಕುಂದಾಪುರದ ಗಂಗೊಳ್ಳಿ, ಆಲೂರು, ಕಾಪುವಿನ ಶಿರ್ವ, ಬೆಳ್ಳೆ, ಬ್ರಹ್ಮಾವರದ ಆವರ್ಸೆ, ಕೊಕ್ಕರ್ಣೆ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಪೂರ್ಣ ಪ್ರಮಾಣದ ಲಾಕ್‌ಡೌನ್ ಮಾಡಬೇಕೆಂದರು.