ಸೋಂಕು ಏರಿಕೆ: ನಾಳೆ ಉನ್ನತ ಮಟ್ಟದ ಸಭೆ

ಬೆಂಗಳೂರು,ಮಾ.೫:ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಕೊರೊನಾ ಪ್ರಕರಣಗಳು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸುವ ಸಂಬಂಧ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ನಾಳೆ ಉನ್ನತ ಮಟ್ಟದ ಸಭೆ ಕರೆದಿದ್ದಾರೆ.
ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಳವಾಗಿದೆ. ಜತೆಗೆ ಹೆಚ್೩ ಎನ್೨ ಎಂಬ ವೈರಸ್ ಸಹ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಏನೆಲ್ಲ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಬೇಕು ಎಂಬ ಬಗ್ಗೆ ಚರ್ಚಿಸಲು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ತಜ್ಞರು ಹಾಗೂ ಉನ್ನತಾಧಿಕಾರಿಗೆ ಸಭೆಯನ್ನು ಆರೋಗ್ಯ ಸಚಿವರು ಕರೆದಿದ್ದು, ನಾಳೆ ಸೋಂಕು ತಡೆಗೆ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ತೀರ್ಮಾನಗಳು ಆಗಲಿವೆ.
ಇಂದು ಬೆಳಿಗ್ಗೆ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ವಿಧಾನಸೌಧ ಆವರಣದಲ್ಲಿ ಸೈಕಲ್ ಜಾಥಾಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಕೇಂದ್ರದ ಆರೋಗ್ಯ ಇಲಾಖೆ ಹೆಚ್೩ ಎನ್ ೨ ವೈರಸ್ ಬಗ್ಗೆ ನಿಗಾ ವಹಿಸುವಂತೆ ರಾಜ್ಯಕ್ಕೆ ಸೂಚನೆ ನೀಡಿದೆ. ಈ ಸಂಬಂಧ ನಾಳೆ ಅಧಿಕಾರಿಗಳು ಹಾಗೂ ತಜ್ಞರ ಸಭೆ ಕರೆದಿದ್ದೇನೆ. ಈ ಸಭೆಯಲ್ಲಿ ವೈರಸ್ ನಿಯಂತ್ರಣದ ಸಂಬಂಧ ಯಾವೆಲ್ಲ ಮುನ್ನೆಚ್ಚೆರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ತೀರ್ಮಾನ ಮಾಡುವುದಾಗಿ ಹೇಳಿದರು.
ರಾಜ್ಯದಲ್ಲಿ ಕಳೆದೊಂದು ವಾರದಿಂದ ಕೊರೊನಾ ಸೋಂಕು ಪ್ರಕರಣಗಳು ಏರಿಕೆಯಾಗಿವೆ. ನಿನ್ನೆ (ಮಾ.೪) ರಾಜ್ಯದಲ್ಲಿ ೯೫ ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಬೆಂಗಳೂರಿನಲ್ಲಿ ೭೦ ಪ್ರಕರಣಗಳು ದೃಢಪಟ್ಟಿವೆ. ೧೦೦ ದಿನಗಳ ನಂತರ ರಾಜ್ಯದಲ್ಲಿ ಸೋಂಕು ಪ್ರಕರಣಗಳು ಹೆಚ್ಚಳವಾಗಿದೆ. ಕೋವಿಡ್ ದೃಢಪಡುವ ಶೇಕಡಾವಾರು ಪ್ರಮಾಣ ಶೇ. ೨.೪೪ಕ್ಕೆ ಏರಿಕೆಯಾಗಿದೆ. ಈ ಬಗ್ಗೆಯೂ ಮುನ್ನೆಚ್ಚೆರಿಕೆ ವಹಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸುತ್ತೇವೆ ಎಂದರು.